ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GST 2.0 Effect: ಆಲ್ಟೊ, ಥಾರ್‌, ಕ್ರೆಟಾ, ಸ್ಕಾರ್ಪಿಯೊ, ಬೆನ್ಜ್‌ ಕಾರುಗಳ ದರ ಇಳಿಕೆ, ಬೈಕ್‌ ದರವೂ ಅಗ್ಗ!

ಜಿಎಸ್‌ಟಿಯ ಸ್ಲ್ಯಾಬ್‌ಗಳಲ್ಲಿ ಇಳಿಕೆ ಆಗಿರುವ ಹಿನ್ನೆಲೆಯಲ್ಲಿ ಹೊಸ ಕಾರು, ಬೈಕ್‌, ಸ್ಕೂಟರ್‌ ಖರೀದಿಸುವವರಿಗೆ ಸಿಹಿ ಸುದ್ದಿ ಲಭಿಸಿದೆ. ಸೆಪ್ಟೆಂಬರ್‌ 22ರ ಬಳಿಕ ಜಿಎಸ್‌ಟಿ ದರಗಳು ಇಳಿಯುತ್ತಿದ್ದು, ಇದರ ಪರಿಣಾಮ ಜನಪ್ರಿಯ ಕಾರುಗಳ ದರದಲ್ಲಿ ಕೂಡ ಇಳಿಕೆಯಾಗಲಿದೆ.

ನವದೆಹಲಿ: ಜಿಎಸ್‌ಟಿಯ ಸ್ಲ್ಯಾಬ್‌ಗಳಲ್ಲಿ (GST 2.0 Effect) ಇಳಿಕೆ ಆಗಿರುವ ಹಿನ್ನೆಲೆಯಲ್ಲಿ ಹೊಸ ಕಾರು, ಬೈಕ್‌, ಸ್ಕೂಟರ್‌ ಖರೀದಿಸುವವರಿಗೆ ಸಿಹಿ ಸುದ್ದಿ ಲಭಿಸಿದೆ. ಸೆಪ್ಟೆಂಬರ್‌ 22ರ ಬಳಿಕ ಜಿಎಸ್‌ಟಿ ದರಗಳು ಇಳಿಯುತ್ತಿದ್ದು, ಇದರ ಪರಿಣಾಮ ಜನಪ್ರಿಯ ಕಾರುಗಳ ದರದಲ್ಲಿ ಕೂಡ ಇಳಿಕೆಯಾಗಲಿದೆ. ಗ್ರಾಹಕರಿಗೆ ಸಾವಿರಾರು ರುಪಾಯಿಗಳ ಉಳಿತಾಯವೂ ಆಗಲಿದೆ. ಆದ್ದರಿಂದ ಯಾವ ಮಾಡೆಲ್‌ಗಳ ಕಾರುಗಳ, ಬೈಕ್‌, ಸ್ಕೂಟರ್‌ಗಳ ದರ ಎಷ್ಟು ಇಳಿಯಲಿದೆ ಎಂಬುದನ್ನು ನೋಡೋಣ.

ಮಹೀಂದ್ರಾ ಥಾರ್‌ನಿಂದ ಹುಂಡೈ ಕ್ರೆಟಾ ತನಕ ಜನಪ್ರಿಯ ಕಾರುಗಳ ದರದಲ್ಲಿ ಇಳಿಕೆಯಾಗಲಿದೆ. ಸಣ್ಣ ಕಾರುಗಳ ಜಿಎಸ್‌ಟಿಯು 28 ಪರ್ಸೆಂಟ್‌ನಿಂದ 18 ಪರ್ಸೆಂಟ್‌ ತನಕ ಇಳಿಕೆಯಾಗಿದೆ. ಹೀಗಾಗಿ ದರ ಕೂಡ ತಗ್ಗಲಿದೆ. ಲಕ್ಸುರಿ ಕಾರು, ಎಸ್‌ಯುವಿ ಮೇಲಿನ ಜಿಎಸ್‌ಟಿ 40 ಪರ್ಸೆಂಟ್‌ಗೆ ನಿಗದಿಯಾಗಿದೆ. ಈಗ 28 ಪರ್ಸೆಂಟ್‌ ಸ್ಲ್ಯಾಬ್‌ ಇದ್ದರೂ, ಸೆಸ್‌ ಸೇರಿದಾಗ 50 ಪರ್ಸೆಂಟ್‌ ತನಕ ತೆರಿಗೆ ಇರುತ್ತದೆ. 40 ಪರ್ಸೆಂಟ್‌ ಶ್ರೇಣಿಯಲ್ಲಿ ಸೆಸ್‌ ಇರುವುದಿಲ್ಲ. ಆದ್ದರಿಂದ ಲಕ್ಸುರಿ ಕಾರುಗಳ ದರದಲ್ಲೂ ಇಳಿಕೆ ಆಗಲಿದೆ.

ಸಣ್ಣ ಕಾರು ಎಂದರೆ 1200 ಸಿಸಿ ಎಂಜಿನ್‌ ಮತ್ತು 4 ಮೀಟರ್‌ ಉದ್ದದ ಕಾರುಗಳು. ಸಣ್ಣ ಡೀಸೆಲ್‌ ಎಂಜಿನ್‌ ಕಾರು ಎಂದರೆ 1,500 ಸಿಸಿ ಮತ್ತು 4 ಮೀಟರ್‌ ಉದ್ದದ ಕಾರುಗಳು. ಮಾರುತಿ ಆಲ್ಟೊ ಕಾರುಗಳು ಅತ್ಯಂತ ಜನಪ್ರಿಯ ಸಣ್ಣ ಕಾರು. ಇದರ ದರ 4.23 ಲಕ್ಷ ರುಪಾಯಿಯಿಂದ 3.81 ಲಕ್ಷ ರುಪಾಯಿಗೆ ಇಳಿಯುವ ಸಾಧ್ಯತೆ ಇದೆ. ಮಾರುತಿ ಸುಜುಕಿಯ ಸ್ವಿಫ್ಟ್‌ ಮತ್ತು ಡಿಸೈರ್‌ ಕಾರುಗಳ ದರದಲ್ಲಿ ಸುಮಾರು 60,000/- ಇಳಿಕೆ ನಿರೀಕ್ಷಿಸಲಾಗಿದೆ. ಹುಂಡೈ ಗ್ರ್ಯಾಂಡ್‌ ಐ10 ಕಾರಿನ ದರವು 5.98 ಲಕ್ಷದಿಂದ 5.51 ಲಕ್ಷಕ್ಕೆ ಇಳಿಯುವ ನಿರೀಕ್ಷೆ ಇದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ದರವು 4.26 ಲಕ್ಷದಿಂದ 3.83 ಲಕ್ಷಕ್ಕೆ ಇಳಿಯುವ ಸಾಧ್ಯತೆ ಇದೆ. ರೆನಾಲ್ಟ್‌ ಕ್ವಿಡ್‌ ದರದಲ್ಲೂ 40,000/- ತನಕ ಇಳಿಕೆಯಾಗುವ ನಿರೀಕ್ಷೆ ಇದೆ. ಟಾಟಾ ನೆಕ್ಸಾನ್‌ ದರದಲ್ಲಿ 80,000/- ಇಳಿಕೆ ನಿರೀಕ್ಷಿಸಲಾಗಿದೆ. ಎಸ್‌ಯುವಿ ದರದಲ್ಲಿ 10 % ಇಳಿಕೆಯಾಗುವ ಸಾಧ್ಯತೆ ಇದೆ.

ಜಿಎಸ್‌ಟಿಯ ಹೊಸ ಸ್ಲ್ಯಾಬ್‌ಗಳ ಪ್ರಕಾರ ದ್ವಿ ಚಕ್ರ ವಾಹನಗಳಲ್ಲಿ 350 ಸಿಸಿ ಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳಿಗೆ ಜಿಎಸ್‌ಟಿ 28 ಪರ್ಸೆಂಟ್‌ ಗಿಂತ 18 ಪರ್ಸೆಂಟ್‌ಗೆ ಇಳಿಯಲಿದೆ. ಜಿಎಸ್‌ಟಿ 2017ರಲ್ಲಿ ಜಾರಿಯಾದಾಗ, ಶೇಕಡಾ 5, 12, 18 ಮತ್ತು 28ರ ನಾಲ್ಕು ಬಗೆಯ ತೆರಿಗೆಯ ಶ್ರೇಣಿಗಳಿತ್ತು. ಈಗ 5 ಮತ್ತು 18ರ ಸ್ಲ್ಯಾಬ್‌ಗೆ ಇಳಿಕೆಯಾಗಿದೆ. ಪಾನ್‌ ಮಸಾಲಾ, ಗುಡ್ಕಾ, ಬೀಡಿ, ಸಿಗರೇಟ್‌, ಲಕ್ಸುರಿ ಕಾರು, ಕೋಲ್ಡ್‌ ಡ್ರಿಂಕ್ಸ್‌ ಗಳಿಗೆ 40 ಪರ್ಸೆಂಟ್‌ ವಿಶೇಷ ಜಿಎಸ್‌ಟಿ ಅನ್ವಯವಾಗಲಿದೆ. ಜನ ಸಾಮಾನ್ಯರು, ಉದ್ದಿಮೆದಾರರು ಈ ಮಹತ್ವದ ಸುಧಾರಣೆಯನ್ನು ಸ್ವಾಗತಿಸಿದ್ದಾರೆ. ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಎಲ್ಲ ರಾಜ್ಯಗಳು ಅನುಮೋದಿಸಿವೆ.

ಈ ಸುಧಾರಣೆ ಕೇವಲ ಜಿಎಸ್‌ಟಿ ದರಗಳನ್ನು ಸರಳಗೊಳಿಸುವುದು ಮಾತ್ರವಲ್ಲ, ಇದು ರಚನಾತ್ಮಕ ಸುಧಾರಣೆಯ ಕ್ರಮ. ತೆರಿಗೆಯ ವರ್ಗೀಕರಣ, ಇನ್‌ಪುಟ್‌ ಟ್ಯಾಕ್ಸ್‌ ಪ್ರಕ್ರಿಯೆಗಳು ಸುಗಮವಾಗಲಿದೆ. ಸೆಸ್‌ ಕುರಿತ ಗೊಂದಲಗಳೂ ನಿವಾರಣೆಯಾಗಿದೆ. ನಮ್ಮೆಲ್ಲರ ಗುರಿ ಜನ ಸಾಮಾನ್ಯರಿಗೆ ದಿನ ಬಳಕೆಯ ವಸ್ತುಗಳು ಬೆಲೆ ಇಳಿಯಬೇಕು. ಕಾರ್ಮಿಕ ಕೇಂದ್ರಿತ ಉದ್ದಿಮೆಗಳಿಗೆ ಇಲ್ಲಿ ಪ್ರೋತ್ಸಾಹ ನೀಡಲಾಗಿದೆ. ರೈತರಿಗೂ ಅನುಕೂಲ ಸಿಗಲಿದೆ. ಆರೋಗ್ಯ ವಲಯಕ್ಕೂ ಲಾಭವಾಗಲಿದೆ.

ಈ ಸುದ್ದಿಯನ್ನೂ ಓದಿ:Stock Market: GDP ಬೂಸ್ಟ್‌; ಸೆನ್ಸೆಕ್ಸ್‌ 567 ಅಂಕ ಜಿಗಿತ

ಪ್ರತಿಯೊಂದು ರಾಜ್ಯದ ಹಣಕಾಸು ಸಚಿವರೂ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಭಾಗವಹಿಸಿದ್ದಾರೆ. ದಿನವಿಡೀ ಚರ್ಚೆ ನಡೆದಿದೆ. ದಿನದ ಮುಕ್ತಾಯದ ವೇಳೆಗೆ ನಾವೆಲ್ಲರೂ ಜನ ಸಾಮಾನ್ಯರ ಹಿತದ ಪರವಾಗಿ ಇದ್ದೇವೆ ಎಂಬುದನ್ನು ಎಲ್ಲರೂ ಸಮ್ಮತಿಸಿದ್ದಾರೆ. ಪ್ರತಿಯೊಂದು ರಾಜ್ಯದ ವಿತ್ತ ಸಚಿವರೂ ಪೂರ್ಣ ಮನಸ್ಸಿನಿಂದ ಬೆಂಬಲಿಸಿದ್ದಾರೆ. ಅದಕ್ಕಾಗಿ ಜಿಎಸ್‌ಟಿ ಕೌನ್ಸಿಲ್‌ಗೆ ಧನ್ಯವಾದಗಳುʼʼ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 56 ನೇ ಜಿಎಸ್‌ಟಿ ಮಂಡಳಿ ಸಭೆಯ ಬಳಿಕ ಮಹತ್ವದ ಘೋಷಣೆಗಳ ಬಗ್ಗೆ ವಿವರಿಸುವುದಕ್ಕೆ ಮುನ್ನ ಹೇಳಿದ್ದಾರೆ.

ಕೇಶವ ಪ್ರಸಾದ್​ ಬಿ

View all posts by this author