ಹೂವಪ್ಪ. ಹೆಚ್ ಇ ಬೆಂಗಳೂರು
ಟೊಮೇಟೊ ಪೂರೈಕೆ ಪ್ರಮಾಣ ಕುಸಿತ
ಬೆಂಗಳೂರಿನಲ್ಲಿ 13 ಕೆ.ಜಿ ಬಾಕ್ಸ್‌ಗೆ 400-450 ಇದ್ದ ಬೆಲೆ 80-120 ರು.ಗೆ ಇಳಿಕೆ
ಏಷ್ಯಾದ ಅತೀ ದೊಡ್ಡ ಟೊಮೇಟೊ ಮಾರುಕಟ್ಟೆಗಳಲ್ಲಿ ಒಂದಾದ ನಮ್ಮ ರಾಜ್ಯದ ಕೋಲಾರ ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತ ಸಾಮಾನ್ಯವಾದರೂ, ಈ ಬಾರಿಯ ತೀವ್ರ ಬೆಲೆ ಕುಸಿತ ರೈತರನ್ನು ಹೆಚ್ಚು ಸಂಕಷ್ಟಕ್ಕೆ ತಳ್ಳಿದೆ. ಗ್ರಾಹಕರಿಗೆ ಟೊಮೇಟೊ ಕಡಿಮೆ ಬೆಲೆಗೆ ಸಿಗುತ್ತಿರುವುದು ಅನುಕೂಲವಾದರೂ ಅನ್ನದಾತರ ನಷ್ಟ ಬಹುದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಮಹಾರಾಷ್ಟ್ರ, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಿಗೆ ಕೋಲಾರದಿಂದ ಹೋಗುತ್ತಿದ್ದ ಟೊಮೇಟೊ ಪೂರೈಕೆಯ ಪ್ರಮಾಣ ತೀರಾ ಕುಸಿದಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಯಲ್ಲಿ ಹೆಚ್ಚುವರಿ ಸಂಗ್ರಹ ಉಂಟಾಗಿದೆ. ಸ್ಥಳೀಯ ಉತ್ಪಾದನೆ ಹೆಚ್ಚಾಗಿರುವುದು ಮತ್ತು ಬೇಡಿಕೆ ಕಡಿಮೆಯಾಗಿರುವುದು ಕೋಲಾರ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇದು ಮಾರುಕಟ್ಟೆಯಲ್ಲಿ ಬೆಲೆ ಕುಸಿಯಲು ಪ್ರಮುಖ ಕಾರಣವಾಗಿದೆ.
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಟೊಮೇಟೊ ಬೆಳೆಯುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ 80 ಸಾವಿರಕ್ಕೂ ಹೆಚ್ಚು ವೆಚ್ಚವಾಗಿ ದ್ದರೂ, ಮಾರುಕಟ್ಟೆಯಲ್ಲಿ ಟೊಮೇಟೊ ಧಾರಣೆ ಪಾತಾಳಕ್ಕೆ ಕುಸಿದಿದೆ. ಪ್ರತಿದಿನ ಬೆಲೆ ಕುಸಿಯುತ್ತಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಭಾರೀ ನಿರಾಶೆಗೊಳಗಾಗಿ ದ್ದಾರೆ. ಕೋಲಾರದಲ್ಲಿ ಕಳೆದ ತಿಂಗಳು 15 ಕೆ.ಜಿ ಬಾಕ್ಸ್‌ಗೆ ರು.300-400 ಇದ್ದ ದರವು ಇದೀಗ ಏಕಾಏಕಿ 50-130 ರು.ಗೆ ಕುಸಿತ ಕಂಡಿದೆ.
ಇದನ್ನೂ ಓದಿ: Tomato Price Hike: ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಹೆಚ್ಚಳ, ಗ್ರಾಹಕ ಕಂಗಾಲು
ಬೆಂಗಳೂರು ಮಾರುಕಟ್ಟೆಯಲ್ಲಿ 13 ಕೆ.ಜಿ ಬಾಕ್ಸ್‌ಗೆ 300-350 ಇದ್ದ ಬೆಲೆಯು ಇದೀಗ 80-120 ರು.ಗೆ ಕುಸಿತ ಕಂಡಿದೆ. ಎಲ್ಲಾ ರಾಜ್ಯಗಳಲ್ಲಿ ಹೆಚ್ಚು ಫಸಲಿನ ಆಗಮನವು ಹೊರ ರಾಜ್ಯ ಗಳಿಗೆ ಪೂರೈಕೆ ಸ್ಥಗಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಕೋಲಾರ ಎಪಿಎಂಸಿ ಮಂಡಿ ವ್ಯಾಪಾರಿಗಳು.
ಮಾರುಕಟ್ಟೆಗೆ ಆಗಮಿಸುತ್ತಿರುವ ಟೊಮೇಟೊ ಪ್ರಮಾಣ ಕಡಿಮೆ ಇದೆಯಾದರೂ ಬೆಲೆ ಮಾತ್ರ ಏರಿಕೆಯಾಗುತ್ತಿಲ್ಲ, ಎಲ್ಲಾ ರಾಜ್ಯಗಳಲ್ಲಿ ಟೊಮೇಟೊ ಬೆಳೆ ಹೆಚ್ಚಾಗುತ್ತಿರುವುದು ಮತ್ತು ಬೇಡಿಕೆ ಕಡಿಮೆಯಾಗುತ್ತಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಬೆಳೆಯುವ ವೆಚ್ಚ, ಸಾಗಾಣಿಕೆ ಮತ್ತು ಮಾರುಕಟ್ಟೆ ಶುಲ್ಕಗಳನ್ನು ಲೆಕ್ಕ ಹಾಕಿದರೆ ಪ್ರಸ್ತುತ ಬೆಲೆಯಲ್ಲಿ ಲಾಭ ಸಿಗುವುದು ಕಷ್ಟ. ಮುಂದಿನ ವಾರದಲ್ಲಿ ಮತ್ತಷ್ಟು ಬೆಲೆ ಕುಸಿತದ ಸಾಧ್ಯತೆಯಿದ್ದು ರೈತರು ಆತಂಕದಲ್ಲಿದ್ದಾರೆ. ಸರಕಾರ ಬೆಂಬಲ ಬೆಲೆ ಅಥವಾ ಇತರೆ ಸೌಲಭ್ಯಗಳನ್ನು ಘೋಷಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಮತ್ತೊಂದೆಡೆ ರಾಜ್ಯದ ಕೊಪ್ಪಳ ಗಂಗಾವತಿ ಲಕ್ಷ್ಮೀಶ್ವರ ರೈತರ ಗೋಳು ಹೇಳತೀರಾಗಿದೆ. ಒಂದು ಟ್ರೇ (20 ಕೆ.ಜಿ) ಕೇವಲ 20 ರಿಂದ 30 ರು.ಮಾತ್ರ ಲಭಿಸುತ್ತಿದೆ, ಅಂದರೆ ಕೆ.ಜಿಗೆ ಕೇವಲ ಒಂದರಿಂದ ಒಂದೂವರೆ ರು. ಮಾತ್ರ, ಹೀಗಾಗಿ ಟೊಮೇಟೊ ಕಟಾವು ಮಾಡಿ ಮಾರು ಕಟ್ಟೆಗೆ ತಂದ ವಾಹನದ ಬಾಡಿಗೆಯೂ ಲಭಿಸದ ಕಾರಣಕ್ಕೆ ಗಿಡದಲ್ಲಿಯೇ ಬಿಡುತ್ತಿದ್ದಾರೆ.
ಗೋವುಗಳಿಗೆ ಆಹಾರ: ಬೆಳೆದ ಟೊಮೇಟೊ ಹಾಳಾಗಬಾರದು ಎಂಬ ಕಾರಣಕ್ಕೆ ಸಾವಿರಾರು ಕೆ.ಜಿ ಟೊಮೇಟೊವನ್ನು ಗೋ ಶಾಲೆಯಲ್ಲಿರುವ ನೂರಾರು ಗೋವುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ತಾವು ಬೆಳೆದ ಟೊಮೇಟೊವನ್ನು ಮಾರುಕಟ್ಟೆಗೆ ತರಲೂ ರೈತರು ಹಿಂದೇಟು ಹಾಕುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ, ಹುಲಿಹೈದರ, ವೆಂಕಟಗಿರಿ, ನವಲಿ ಹೋಬಳಿಯಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ಬೆಳೆ ಯಲಾಗಿರುವ ಟೊಮೇಟೊವನ್ನು ಕೆಲ ರೈತರು ಕಟಾವು ಮಾಡದೇ ಗಿಡದಲ್ಲೇ ಬಿಟ್ಟಿದ್ದಾರೆ.
ಒಂದು ಎಕರೆ ಟೊಮೇಟೊ ಸಸಿ ತಂದು ನಾಟಿ ಮಾಡಲು ಸುಮಾರು 25 ಸಾವಿರ ಖರ್ಚಾ ಗುತ್ತದೆ. ಆಳುಗಳ ಕೂಲಿ, ಗೊಬ್ಬರ, ಕ್ರಿಮಿನಾಶಕ ಸಿಂಪಡಿಸುವ ಖರ್ಚು ಸೇರಿದಂತೆ ಲಕ್ಷಾಂತರ ದುಡ್ಡು ವೆಚ್ಚವಾಗುತ್ತದೆ. ಹಲವು ಕನಸು ಹೊತ್ತು ಸುಡು ಬೇಸಿಗೆಯಲ್ಲಿ ನೀರುಣಿಸಿ ಬೆಳೆದ ಟೊಮೇಟೊವನ್ನು ದಿಕ್ಕು ತೋಚದಂತೆ ರಸ್ತೆಯ ಪಕ್ಕದಲ್ಲಿ ಚೆಲ್ಲಿ ಹೋಗುವುದು ರೈತರ ಪಾಲಿಗೆ ಹೆತ್ತ ಮಗುವನ್ನು ಕತ್ತು ಹಿಸುಕಿ ಕೊಂದಂತೆ ಆಗುತ್ತದೆ ಎನ್ನುತ್ತಾರೆ ಟೊಮೇಟೊ ಬೆಳೆದು ಕೈ ಸುಟ್ಟುಕೊಂಡ ರೈತ ಅಬ್ದುಲ್ ಕರೀಮ್ ಸೂರಣಗಿ.
ರಸ್ತೆ ಪಾಲಾದ ಟೊಮೇಟೊ
ಲಕ್ಷ್ಮೀಶ್ವರ ತಾಲೂಕಿನಲ್ಲಿ ಬೆಲೆ ಕುಸಿತದಿಂದ ಕಂಗಾಲಾದ ರೈತರು ತಾವು ಬೆಳೆದ ಟೊಮೇಟೊವನ್ನು ರಸ್ತೆಯ ಪಕ್ಕದ ಚರಂಡಿಗೆ ಸುರಿದು ಹೋದ ಘಟನೆ ನಡೆದಿದೆ. ಸತತ ಒಂದು ವಾರದಿಂದ ಬೆಲೆ ನೆಲಕಚ್ಚಿದ್ದರಿಂದ ರೈತರು ಕಷ್ಟ ಪಟ್ಟು ಬೆಳೆದ ಟೊಮೇಟೊ ವನ್ನು ದೊಡ್ಡೂರ-ಲಕ್ಷ್ಮೇಶ್ವರ ಮಧ್ಯದ ರಸ್ತೆಯ ಪಕ್ಕದ ಚರಂಡಿಗೆ ಸುರಿದು ಹೋಗಿದ್ದಾರೆ. ಟೊಮೇಟೊ ಹಣ್ಣಿನ ಬೆಲೆ ಕಳೆದ ಒಂದು ವಾರದಿಂದ 20-25 ಕೆ.ಜಿ ಬಾಕ್ಸ್ ಒಂದಕ್ಕೆ ರು. 50-100ಕ್ಕೆ ಕುಸಿದಿದ್ದರಿಂದ ಟೊಮೇಟೊ ಹಣ್ಣನ್ನು ಕೀಳುವ ಆಳುಗಳ ಕೂಲಿಯೂ ಕೈಗೆ ಬಂದಂತಾಗುವುದಿಲ್ಲ ಎಂದು ರೈತರು ದಾರಿ ತೋಚದೆ ರಸ್ತೆಯ ಪಕ್ಕಕ್ಕೆ ಸುರಿದು ಹೋಗಿದ್ದಾರೆ.
![]()
ಎಲ್ಲಾ ರಾಜ್ಯಗಳಲ್ಲಿ ಟೊಮೇಟೊ ಬೆಳೆ ಈ ಸಲ ಭಾರೀ ಬಂದಿದೆ. ಹೀಗಾಗಿ ಹೊರ ರಾಜ್ಯ ಗಳಿಗೆ ಸರಬರಾಜಾಗುತ್ತಿದ್ದ ಟೊಮೇಟೊ ಬೇಡಿಕೆ ಭಾರೀ ಕುಸಿದಿದೆ. ಇದು ಈ ಸಲದ ತೀವ್ರ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ.
ಬಾಲಾಜಿ, ಟೊಮೇಟೊ ವರ್ತಕರು, ಕೋಲಾರ ಎಪಿಎಂಸಿ