ಇನ್ನು ಬ್ಯಾಂಕ್ ಗ್ರಾಹಕರಿಗೆ 4 ಜನ ನಾಮಿನಿಯನ್ನು ಹೆಸರಿಸಲು ಅವಕಾಶ
ನವೆಂಬರ್ 1ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರುತ್ತಿವೆ. ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ ಅಡಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಹೊಸ ನಿಯಮಗಳ ಅನ್ವಯ ಠೇವಣಿದಾರರಿಗೆ ಹೆಚ್ಚಿನ ನಮ್ಯತೆ ನೀಡಲಿವೆ. ಏನೇನು ಬದಲಾವಣೆ? ಸಂಪೂರ್ಣ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಕ್ಲೇಮ್ ಸೆಟಲ್‌ಮೆಂಟ್(claim settlement) ಅಥವಾ ಹಕ್ಕು ಕೋರಿಕೆಗಳ ಇತ್ಯರ್ಥದಲ್ಲಿ ಏಕರೂಪತೆ ಮತ್ತು ದಕ್ಷತೆ ತರಲು ಉದ್ದೇಶಿಸಿರುವ ಬ್ಯಾಂಕಿಂಗ್ ವ್ಯವಸ್ಥೆಯು, ಗ್ರಾಹಕರು ತಮ್ಮ ಖಾತೆಗಳಲ್ಲಿ ನಾಲ್ವರು ನಾಮಿನಿ(nominee)ಗಳನ್ನು ನಿಯೋಜಿಸಲು ಅವಕಾಶ ಕಲ್ಪಿಸಿದೆ. ನವೆಂಬರ್ 1ರಿಂದ ಬ್ಯಾಂಕಿಂಗ್ ಕಾನೂನು(ತಿದ್ದುಪಡಿ) ಅಧಿನಿಯಮ 2025ರಡಿ ನಾಮನಿರ್ದೇಶನ(nominee)ಕ್ಕೆ ಸಂಬಂಧಿಸಿದ ಪ್ರಮುಖ ನಿಬಂಧನೆಗಳು ಜಾರಿಗೆ ಬರಲಿವೆ ಎಂದು ಹಣಕಾಸು ಸಚಿವಾಲಯ(Finance Ministry) ಗುರುವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾಂಕಿಂಗ್ ಕಾನೂನುಗಳ(ತಿದ್ದುಪಡಿ) ಕಾಯ್ದೆ 2025 ಅನ್ನು 2025ರ ಏಪ್ರಿಲ್ 15ರಂದು ಪ್ರಕಟಿಸಲಾಗಿತ್ತು. ಇದು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1955 ಹಾಗೂ ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ಬದ್ಧತೆಗಳ ವರ್ಗಾವಣೆ) ಕಾಯ್ದೆ 1970 ಮತ್ತು 1980 ಈ ಐದು ಶಾಸನಗಳಿಗೆ ಒಟ್ಟು 19 ತಿದ್ದುಪಡಿಗಳನ್ನು ಒಳಗೊಂಡಿದೆ.
ಈ ಸುದ್ದಿಯನ್ನು ಓದಿ; Viral News: ದೀಪಾವಳಿಯಂದು ಪತ್ನಿ ಮನೆ ಬಾಗಿಲು ತೆಗೆಯದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ
ನಾಮಿನಿಗೆ ಸಂಬಂಧಿಸಿದ ಪ್ರಮುಖ ತಿದ್ದುಪಡಿಗಳು:
- ಬಹು ನಾಮ ನಿರ್ದೇಶನಕ್ಕೆ ಅವಕಾಶ: ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣಕ್ಕಾಗಿ ಆದ್ಯತೆಯ ಮೇರೆಗೆ ಏಕಕಾಲದಲ್ಲಿ ಅಥವಾ ಒಬ್ಬರ ನಂತರ ಒಬ್ಬರಂತೆ ಗರಿಷ್ಠ ನಾಲ್ಕು ಜನರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಇದು ಠೇವಣಿದಾರರಿಗೆ ಮತ್ತು ಅವರ ನಾಮಿನಿಗಳಿಗೆ ಕ್ಲೇಮ್ ಇತ್ಯರ್ಥಗಳನ್ನು ಸರಳಗೊಳಿಸುತ್ತದೆ.
- ಸುರಕ್ಷತಾ ಲಾಕರ್‌ಗಳಿಗೆ ನಾಮ ನಿರ್ದೇಶನ: ಸೇಫ್ಟಿ ಲಾಕರ್‌ಗಳಿಗೆ ಒಬ್ಬರ ನಂತರ ಇನ್ನೊಬ್ಬರಂತೆ ಮಾತ್ರ ನಾಮಿನಿಗಳನ್ನು ನಿಯೋಜಿಸಬಹುದು. ಏಕಕಾಲದಲ್ಲಿ ನಾಲ್ವರ ನಾಮ ನಿರ್ದೇಶನ ಮಾಡಿದರೆ ಮೊದಲ ನಾಮಿನಿಯ ನಿಧನದ ನಂತರವೇ ಎರಡನೇ ನಾಮಿನಿಗೆ ಹಕ್ಕುಗಳು ವರ್ಗಾವಣೆಯಾಗುತ್ತವೆ.
- ಒಂದೇ ಬಾರಿ ನಾಮ ನಿರ್ದೇಶನ: ಈ ಆಯ್ಕೆಯಡಿ ಠೇವಣಿದಾರರು ಗರಿಷ್ಠ ನಾಲ್ಕು ಜನರನ್ನು ನಾಮ ನಿರ್ದೇಶನ ಮಾಡಬಹುದು. ಪ್ರತಿ ನಾಮಿನಿಯ ಪಾಲನ್ನು ಅಥವಾ ಶೇಕಡಾವಾರು ಹಕ್ಕನ್ನು ಸ್ಪಷ್ಟವಾಗಿ ನಮೂದಿಸಬಹುದು (ಒಟ್ಟು ಪಾಲುಗಳು ಶೇ.100 ಆಗಿರಬೇಕು). ಇದು ಎಲ್ಲ ನಾಮಿನಿಗಳ ನಡುವೆ ವಿತರಣೆಯನ್ನು ಪಾರದರ್ಶಕಗೊಳಿಸುತ್ತದೆ.
- ನಾಮ ನಿರ್ದೇಶಿತರ ಆಯ್ಕೆಗೆ ಹೆಚ್ಚಿನ ಸ್ವಾತಂತ್ರ್ಯ: ಈ ಕ್ರಮ ಜಾರಿಗೆ ಬಂದರೆ ಠೇವಣಿದಾರರು ತಮ್ಮ ಇಚ್ಛೆಯ ಪ್ರಕಾರ ನಾಮನಿರ್ದೇಶಿತರ ಆಯ್ಕೆ ಮಾಡಲು ಹೆಚ್ಚಿನ ಸ್ವಾತಂತ್ರ್ಯ ದೊರೆಯುತ್ತದೆ ಮತ್ತು ಏಕರೂಪತೆ, ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಖಚಿತವಾಗುತ್ತದೆ.
ನಾಮ ನಿರ್ದೇಶನಕ್ಕೆ ಸಂಬಂಧಿಸಿದ ನಿಯಮಾವಳಿಗಳು ಶೀಘ್ರದಲ್ಲೇ ಪ್ರಕಟವಾಗಲಿದ್ದು, ಬಹು ನಾಮನಿರ್ದೇಶಿತರ ನೇಮಕ, ರದ್ದುಗೊಳಿಸುವುದು ಅಥವಾ ನಿಗದಿಪಡಿಸುವ ಕಾರ್ಯವಿಧಾನ ಮತ್ತು ನಿಗದಿತ ನಮೂನೆಗಳ ಬಗ್ಗೆ ವಿವರಿಸುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.