PM Narendra Modi Modi: ಟ್ರಂಪ್ ಭಾಗವಹಿಸುವ ಆಸಿಯಾನ್ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರು
ASEAN summit: ಭಾರತ ಮತ್ತು ಅಮೆರಿಕ ನಡುವೆ ಸಂಬಂಧದಲ್ಲಿ ಉದ್ವಿಗ್ನತೆ ಕಂಡು ಬಂದ ಬಳಿಕ ಮೊದಲ ಬಾರಿಗೆ ಮೋದಿ ಮತ್ತು ಟ್ರಂಪ್ ಭೇಟಿಯಾಗಬೇಕಿದ್ದ ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವುದಿಲ್ಲ ಎಂದು ನೇರವಾಗಿ ಮಲೇಷ್ಯಾ ಪ್ರಧಾನಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಟ್ರಂಪ್ ಮತ್ತು ಮೋದಿ ನಡುವೆ ನಡೆಯಬೇಕಿದ್ದ ಮಾತುಕತೆ ಊಹಾಪೋಹಗಳಿಗೆ ತೆರೆ ಬಿದ್ದಿದೆ.

-

ಮಲೇಷ್ಯಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( US President Donald Trump) ಭಾಗವಹಿಸಲಿರುವ 47ನೇ ಆಸಿಯಾನ್ ಶೃಂಗಸಭೆಯಲ್ಲಿ (47th ASEAN Summit) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಭಾಗವಹಿಸುವುದಿಲ್ಲ ಎನ್ನಲಾಗಿದೆ. ಈ ತಿಂಗಳ ಕೊನೆಯಲ್ಲಿ ಮಲೇಷ್ಯಾದಲ್ಲಿ ಆಸಿಯಾನ್ ಶೃಂಗಸಭೆ ನಡೆಯಲಿದೆ. ಇದರಲ್ಲಿ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಕುರಿತಾಗಿ ಚರ್ಚೆಗಳಾಗುವ ಸಾಧ್ಯತೆಗಳಿವೆ. ಕೌಲಾಲಂಪುರದಲ್ಲಿ ನಡೆಯುವ ಆಸಿಯಾನ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವುದಿಲ್ಲ. ಅವರು ವರ್ಚುವಲ್ ಆಗಿ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಸಾಕಷ್ಟು ಕುತೂಹಲ ಹೆಚ್ಚಿಸಿದ್ದ ಕೌಲಾಲಂಪುರದಲ್ಲಿ ನಡೆಯುವ ಶೃಂಗಸಭೆಯಲ್ಲಿ ಈಗ ಪ್ರಧಾನಿ ಮೋದಿ ಭಾಗವಹಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಮೂಲಕ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಬಹುದಾಗಿದ್ದ ಸಭೆಯ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ. ಒಂದು ವೇಳೆ ಮೋದಿ ಈ ಸಭೆಯಲ್ಲಿ ಭಾಗವಹಿಸಿದ್ದರೆ ಈ ವರ್ಷದ ಆರಂಭದಲ್ಲಿ ವಾಷಿಂಗ್ಟನ್ ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಲು ನಿರ್ಧರಿಸಿದ ಬಳಿಕ ಅವರ ಮೊದಲ ಭೇಟಿ ಮತ್ತು ಸಂವಾದ ಇದಾಗಿರುತ್ತಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಭಾರತದಲ್ಲಿ ದೀಪಾವಳಿ ಆಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾವು ವರ್ಚುವಲ್ ಮೂಲಕ ಸಭೆಗೆ ಹಾಜರಾಗುವುದಾಗಿ ಪ್ರಧಾನಿ ಮೋದಿ ತಮಗೆ ತಿಳಿಸಿದ್ದಾರೆ. ನಾನು ಅವರ ನಿರ್ಧಾರವನ್ನು ಗೌರವಿಸುತ್ತೇನೆ ಮತ್ತು ಅವರಿಗೆ ಮತ್ತು ಭಾರತದ ಎಲ್ಲಾ ಜನರಿಗೆ ದೀಪಾವಳಿ ಶುಭಾಶಯಗಳು ಎಂದು ತಿಳಿಸಿದರು.
ಪ್ರಧಾನಿ ಮೋದಿ ಕೂಡ ಮಲೇಷ್ಯಾ ಪ್ರಧಾನಿಯೊಂದಿಗಿನ ತಮ್ಮ ಸಂಭಾಷಣೆಯ ಕುರಿತಾಗಿ ಎಕ್ಸ್ ನಲ್ಲಿ ಬರೆದಿದ್ದು, ತಾವು ವರ್ಚುವಲ್ ಆಗಿ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ದೃಢಪಡಿಸಿದ್ದಾರೆ. ಮಲೇಷ್ಯಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಪ್ರಯತ್ನಗಳ ಕುರಿತು ಚರ್ಚಿಸಲು ಬುಧವಾರ ರಾತ್ರಿ ತಾವಿಬ್ಬರು ದೂರವಾಣಿ ಮೂಲಕ ಮಾತನಾಡಿರುವುದಾಗಿ ಹೇಳಿರುವ ಅನ್ವರ್, ಭಾರತವನ್ನು ತಂತ್ರಜ್ಞಾನ, ಶಿಕ್ಷಣ ಮತ್ತು ಪ್ರಾದೇಶಿಕ ಭದ್ರತೆಯಲ್ಲಿ ನಿಕಟ ಸಹಕಾರದ ಜೊತೆಗೆ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಪ್ರಮುಖ ಪಾಲುದಾರ ಎಂದು ಬಣ್ಣಿಸಿದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಆಸಿಯಾನ್ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ. ಕೌಲಾಲಂಪುರದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಮಲೇಷ್ಯಾವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಆಸಿಯಾನ್‌ನ ಸಂವಾದ ಪಾಲುದಾರ ರಾಷ್ಟ್ರಗಳ ಹಲವಾರು ಇತರ ನಾಯಕರಿಗೆ ಆಹ್ವಾನಗಳನ್ನು ನೀಡಿದೆ. ಅಕ್ಟೋಬರ್ 26 ರಿಂದ ಪ್ರಾರಂಭವಾಗುವ ಎರಡು ದಿನಗಳಸಭೆಯಲ್ಲಿ ಪಾಲ್ಗೊಳ್ಳಲು ಟ್ರಂಪ್ ಮಲೇಷ್ಯಾ ರಾಜಧಾನಿಗೆ ಆಗಮಿಸುವ ನಿರೀಕ್ಷೆಯಿದೆ.
Breaking: PM Modi will not travel to Malaysia for the ASEAN Summit after weeks of speculation about a possible meeting with Donald Trump in Malaysia pic.twitter.com/as5xq03v7B
— Shashank Mattoo (@MattooShashank) October 23, 2025
ಆಸಿಯಾನ್-ಭಾರತ ಪಾಲುದಾರಿಕೆ
1992ರಲ್ಲಿ ವಲಯ ಸಂವಾದದಿಂದ ಪ್ರಾರಂಭವಾದ ಆಸಿಯಾನ್ ಮತ್ತು ಭಾರತ ಪಾಲುದಾರಿಕೆ 1995 ರಲ್ಲಿ ಪೂರ್ಣ ಸಂವಾದ ಪಾಲುದಾರಿಕೆಗೆ ಮೇಲ್ದರ್ಜೆಗೇರಿಸಲಾಯಿತು. 2002ರಲ್ಲಿ ಶೃಂಗಸಭೆಯ ಮಟ್ಟಕ್ಕೆ ಏರಿಸಲಾಯಿತು. 2012 ರಲ್ಲಿ ಈ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾಗಿದ್ದು, ಇದೊಂದು ಪ್ರಾದೇಶಿಕ ರಾಜತಾಂತ್ರಿಕತೆಯಲ್ಲಿ ಮೈಲಿಗಲ್ಲಾಗಿ ಗುರುತಿಸಲ್ಪಟ್ಟಿದೆ.
ಇದನ್ನೂ ಓದಿ: ಡೇಟಿಂಗ್ ಆಪ್‌ನಲ್ಲಿ ನಕಲಿ ಪ್ರೊಫೈಲ್ ತಪ್ಪಿಸಲು "ಫೇಸ್‌ಚೆಕ್" ಲಾಗಿನ್ ಪರಿಚಯಿಸಿದ "ಟಿಂಡರ್"
ಆಸಿಯಾನ್ 10 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್, ಬ್ರೂನಿ, ವಿಯೆಟ್ನಾಂ, ಲಾವೋಸ್, ಮ್ಯಾನ್ಮಾರ್ ಮತ್ತು ಕಾಂಬೋಡಿಯಾ. ಇತ್ತೀಚಿನ ವರ್ಷಗಳಲ್ಲಿ, ಆಸಿಯಾನ್‌ನೊಂದಿಗಿನ ಭಾರತದ ಸಂಬಂಧಗಳು ಸ್ಥಿರವಾದ ಬೆಳವಣಿಗೆಯನ್ನು ಹೊಂದಿದ್ದು, ವ್ಯಾಪಾರ, ಹೂಡಿಕೆ, ಭದ್ರತೆ ಮತ್ತು ರಕ್ಷಣೆಯಲ್ಲಿ ಸಹಕಾರವನ್ನು ಹೆಚ್ಚಿಸಲು ಒತ್ತು ನೀಡಲಾಗುತ್ತಿದೆ.