ನವದೆಹಲಿ: ಮುಂದಿನ ದಿನಗಳಲ್ಲಿ ದೇಶದಲ್ಲಿ ಹಣದುಬ್ಬರ (inflation risk) ಅಪಾಯಕಾರಿಯಾಗಿ ಬೆಳವಣಿಗೆ ಹೊಂದಿದರೂ ಅಚ್ಚರಿ ಇಲ್ಲ. ಯಾಕೆಂದರೆ ಯುಎಸ್, ಇಸ್ರೇಲ್ ಮತ್ತು ಇರಾನ್ ಸಂಘರ್ಷದ ಪರಿಣಾಮ ದೇಶದ ಇಂಧನ ಮಾರುಕಟ್ಟೆಯ (Oil market) ಮೇಲೆ ತೀವ್ರ ಪ್ರಭಾವ ಬೀರಿದೆ. ಇದೀಗ ದುರ್ಬಲ ಮುಂಗಾರು (Weak monsoon) ಕೃಷಿ ಆರ್ಥಿಕತೆ (agricultural economy) ಮೇಲೆ ಹೊಡೆತ ಕೊಡುವ ಲಕ್ಷಣವನ್ನು ತೋರಿಸಿದೆ. ಇದು ಈಗ ದೇಶದ ಆರ್ಥಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಮಾಡಿದೆ. ನೈಋತ್ಯ ಮುಂಗಾರು (southwest monsoon) ದೇಶದ ವಾರ್ಷಿಕ ಮಳೆಯ ಶೇಕಡಾ 70ರಷ್ಟು ಪ್ರಮಾಣವನ್ನು ಹೊಂದಿರುತ್ತದೆ. ಇದರಿಂದ ಸುಮಾರು 300 ಶತಕೋಟಿ ಡಾಲರ್ ಮೌಲ್ಯದ ಕೃಷಿ ಚಟುವಟಿಕೆ ನಡೆಯುತ್ತದೆ. ಒಂದು ವೇಳೆ ಮುಂಗಾರು ದುರ್ಬಲವಾದರೆ ಆಹಾರ ಬೆಲೆಗಳು ಗಗನಕ್ಕೇರುವ ಸಾಧ್ಯತೆ ಇದೆ.
ಎಲ್ ನಿನೊ ಪರಿಣಾಮ ಭಾರತದಲ್ಲಿ ಮಳೆಯ ಕೊರತೆಯಾಗುವ ಸೂಚನೆಯನ್ನು ಮೊದಲೇ ಹವಾಮಾನ ಇಲಾಖೆ ನೀಡಿದೆ. ಇದರಿಂದ ದೇಶದಲ್ಲಿ ಬರಗಾಲದಂತಹ ಸನ್ನಿವೇಶ ಸೃಷ್ಟಿಯಾಗಬಹುದು ಎನ್ನಲಾಗಿದೆ. ದುರ್ಬಲ ಮುಂಗಾರು ಮಾರುಕಟ್ಟೆ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡುತ್ತದೆ. ದುರ್ಬಲ ಮುಂಗಾರಿನ ಕಾರಣದಿಂದ ಮೊದಲು ಹಣದುಬ್ಬರ ಉಂಟಾಗುತ್ತದೆ. ಬಳಿಕ ಹಬ್ಬದ ಋತುವಿನಲ್ಲಿ ಕಡಿಮೆ ಖರ್ಚು ಮಾಡಲು ಪ್ರೇರೇಪಿಸುತ್ತದೆ ಎನ್ನುತ್ತಾರೆ ಎಲ್ ಆಂಡ್ ಟಿ ಫೈನಾನ್ಸ್ ಲಿಮಿಟೆಡ್‌ನ ಅರ್ಥಶಾಸ್ತ್ರಜ್ಞ ರಜನಿ ಠಾಕೂರ್.
ಪಶ್ಚಿಮ ಏಷ್ಯಾದಲ್ಲಿ ಕರಗಿದ ಯುದ್ಧ ಕಾರ್ಮೋಡ; ವಾಣಿಜ್ಯ ಎಲ್‌ಪಿಜಿ ಮೇಲಿನ ನಿರ್ಬಂಧ ತೆಗೆದುಹಾಕಿದ ಕೇಂದ್ರ
ದುರ್ಬಲ ಮುಂಗಾರಿನ ಕಾರಣದಿಂದ ಉಂಟಾಗಬಹುದಾದ ಹಣದುಬ್ಬರದ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರುವುದಾಗಿ ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಕ್ವಾಂಟ್‌ಇಕೋ ರಿಸರ್ಚ್‌ನ ಅರ್ಥಶಾಸ್ತ್ರಜ್ಞ ಯುವಿಕಾ ಸಿಂಘಾಲ್ ಅವರು ನೀಡಿರುವ ಮಾಹಿತಿ ಪ್ರಕಾರ, ಶೇಕಡಾ 10ರಷ್ಟು ಮಳೆ ಕೊರತೆಯು ಆಹಾರ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ ಜೂನ್ 22ರ ವೇಳೆಗೆ ಭಾರತದ ಸಂಚಿತ ಮಳೆ ಸಾಮಾನ್ಯಕ್ಕಿಂತ ಶೇಕಡಾ 43ರಷ್ಟು ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂಗಾರು ಮಳೆ ಸಾಮಾನ್ಯವಾಗಿ ಭಾರತದ ಗ್ರಾಮೀಣ ಭಾಗಗಳಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯುತ್ತದೆ. ಇದರಲ್ಲಿ ವ್ಯತ್ಯಾಸಗಳಾದಾಗ ಕೃಷಿ ಸಂಬಂಧಿತ ಚಟುವಟಿಕೆಗಳು ಕೂಡ ವಿಳಂಬವಾಗುತ್ತದೆ. ಹೀಗಾಗಿ ಅಂಗಡಿಗಳಲ್ಲಿ ದಾಸ್ತಾನುಗಳು ಹೆಚ್ಚಾಗುತ್ತದೆ. ಇದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.
ಎಲ್ ನಿನೊ ಭಾರತಕ್ಕೆ ಮಾತ್ರವಲ್ಲ ಸಂಪೂರ್ಣ ಜಗತ್ತಿಗೆ ಆತಂಕವನ್ನು ಉಂಟು ಮಾಡಿದೆ. ವಿಳಂಬವಾದ ಮುಂಗಾರು ಅಕ್ಟೋಬರ್ ವರೆಗೆ ವಿಸ್ತರಣೆಯಾಗುವ ಅಪಾಯವಿದೆ. ಇದರಿಂದ ಕೊಯ್ಲಿಗೆ ಅಡ್ಡಿಯಾಗಬಹುದು ಮತ್ತು ಬೆಳೆಗಳಿಗೆ ಹನಿ ಉಂಟಾಗಬಹುದು. ಇದರಿಂದ ಅಕ್ಟೋಬರ್ ವೇಳೆಗೆ ಹಣದುಬ್ಬರವು ಶೇ. 5.5 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಕೃಷಿ ಸಚಿವಾಲಯ ಮತ್ತು ಐಸಿಎಆರ್ ನಡೆಸಿರುವ ಮೌಲ್ಯಮಾಪನದ ಪ್ರಕಾರ ಕಡಿಮೆ ಮಳೆ ಮತ್ತು ಅಸಮರ್ಪಕ ನೀರಾವರಿಯಿಂದ 315 ಜಿಲ್ಲೆಗಳು ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾಟಕ, ಬಿಹಾರ, ಜಾರ್ಖಂಡ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ 12 ರಾಜ್ಯಗಳಲ್ಲಿರುವ ಒಟ್ಟು 111 ಜಿಲ್ಲೆಗಳು ಹೆಚ್ಚಿನ ಆದ್ಯತೆಯ ವರ್ಗದಲ್ಲಿದ್ದು, ಇಲ್ಲಿ ನೀರಾವರಿ ಪ್ರಮಾಣ ಶೇಕಡಾ 25 ಕ್ಕಿಂತ ಕಡಿಮೆಯಿದೆ. ಇನ್ನೂ 76 ಜಿಲ್ಲೆಗಳನ್ನು ಮಧ್ಯಮ ವರ್ಗದಲ್ಲಿದ್ದು, ಇಲ್ಲಿ ನೀರಾವರಿ ಲಭ್ಯತೆಯು ಶೇಕಡಾ 25 ರಿಂದ 50 ರ ನಡುವೆ ಇದೆ. ಇನ್ನು 128 ಜಿಲ್ಲೆಗಳು ಬಲವಾದ ನೀರಾವರಿ ಸೌಲಭ್ಯವನ್ನು ಹೊಂದಿದೆ.
ಹೀಗಾಗಿ ಪ್ರಮುಖ ಕೃಷಿ ರಾಜ್ಯಗಳಲ್ಲಿ ಬೆಳೆ ಆಯ್ಕೆಗಳು, ನೀರಿನ ಬಳಕೆ ಮತ್ತು ತುರ್ತು ಕ್ರಮಗಳನ್ನು ಆಕಸ್ಮಿಕ ಯೋಜನೆಗಳ ಕುರಿತು ಮಾರ್ಗದರ್ಶನ ಹಾಗೂ ಬೆಳೆ ಉತ್ಪಾದನೆ, ಗ್ರಾಮೀಣ ಆದಾಯವನ್ನು ರಕ್ಷಿಸಲು ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಸಮನ್ವಯವನ್ನು ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.