ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL match ticket black market: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟಿಕೆಟ್‌ ಕಾಳಸಂತೆ ದಂಧೆ ಪತ್ತೆ, ಕ್ಯಾಂಟೀನ್‌ ನೌಕರ ಸೆರೆ

ಆರೋಪಿ ಚಂದ್ರಶೇಖರ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ನೀಡಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಸದಸ್ಯ ಎನ್ನಲಾದ ಗಣೇಶ್ ಹರಿಕೇಶ್ ಎಂಬವರು ತನಗೆ ಈ ಟಿಕೆಟ್‌ಗಳನ್ನು ನೀಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತೆ ಸೂಚಿಸಿದ್ದರು ಎಂದು ಆತ ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ಈ ದಂಧೆಯ ಬೇರುಗಳು ಬಹಳ ಆಳವಾಗಿರುವುದು ಸ್ಪಷ್ಟವಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ‌ ಐಪಿಎಲ್ ಟಿಕೆಟ್‌ ಕಾಳಸಂತೆ ದಂಧೆ ಪತ್ತೆ

ಆರೋಪಿ ನೌಕರ ಪಿ. ಚಂದ್ರಶೇಖರ್ -

ಹರೀಶ್‌ ಕೇರ
ಹರೀಶ್‌ ಕೇರ Apr 17, 2026 8:05 AM

ಬೆಂಗಳೂರು, ಏ.17: ಐಪಿಎಲ್ ಕ್ರೇಜ್ ಅನ್ನೇ ಬಂಡವಾಳ ಮಾಡಿಕೊಂಡು ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಕನ್ನ ಹಾಕುತ್ತಿದ್ದ ಬೃಹತ್ ಜಾಲವೊಂದನ್ನು ಸಿಸಿಬಿ (CCB) ಪೊಲೀಸರು ಭೇದಿಸಿದ್ದಾರೆ. ಕ್ರೀಡಾಂಗಣದ ಒಳಗೇ ಇದ್ದುಕೊಂಡು ಟಿಕೆಟ್ ಕಾಳದಂಧೆ ನಡೆಸುತ್ತಿದ್ದ ಕ್ಯಾಂಟೀನ್ ನೌಕರನನ್ನು ಬಂಧಿಸಲಾಗಿದ್ದು, ಆತನಿಂದ ನೂರಾರು ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ಕಾರ್ಯನಿರ್ವಹಿಸುವ ‘ಶ್ರೀ ಲಕ್ಷ್ಮಿ ಕ್ಯಾಂಟೀನ್’ ನೌಕರ ಪಿ. ಚಂದ್ರಶೇಖರ್ ಎಂಬಾತನೇ ಪೊಲೀಸರ ಅತಿಥಿಯಾದ ಆರೋಪಿ. ಈತ ಅಲ್ಪ ಬೆಲೆಯ ಟಿಕೆಟ್‌ಗಳನ್ನು ಗರಿಷ್ಠ ಬೆಲೆಗೆ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾಗ ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ.

ತನಿಖೆಯ ವೇಳೆ ಬಯಲಾದ ಟಿಕೆಟ್ ದರಗಳ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಅಂದಾಜು ಮುಖಬೆಲೆ ₹1,200 ಇರುವ ಟಿಕೆಟ್‌ಗಳನ್ನು ಈತನ ಮೂಲಕ ₹15,000 ದಿಂದ ₹19,000 ವರೆಗಿನ ಬ್ಲಾಕ್ ಮಾರ್ಕೆಟ್ ಬೆಲೆಗೆ ಮಾರಲಾಗುತ್ತಿತ್ತು. ಕೇವಲ 1,200 ರೂಪಾಯಿಯ ಟಿಕೆಟ್‌ ಅನ್ನು ಬರೋಬ್ಬರಿ 15 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಈ ಜಾಲ ಸಂಚು ರೂಪಿಸಿತ್ತು.

ಕೆಎಸ್‌ಸಿಎ ಸದಸ್ಯನ ಕೈವಾಡ?

ಆರೋಪಿ ಚಂದ್ರಶೇಖರ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ನೀಡಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಸದಸ್ಯ ಎನ್ನಲಾದ ಗಣೇಶ್ ಹರಿಕೇಶ್ ಎಂಬವರು ತನಗೆ ಈ ಟಿಕೆಟ್‌ಗಳನ್ನು ನೀಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತೆ ಸೂಚಿಸಿದ್ದರು ಎಂದು ಆತ ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ಈ ದಂಧೆಯ ಬೇರುಗಳು ಬಹಳ ಆಳವಾಗಿರುವುದು ಸ್ಪಷ್ಟವಾಗಿದೆ.

ಪೊಲೀಸರು ನಡೆಸಿದ ದಾಳಿಯಲ್ಲಿ ಮಾರ್ಚ್ 28ರ RCB vs SRH ಪಂದ್ಯದ 81 ಟಿಕೆಟ್‌ಗಳು, RCB vs LSG ಪಂದ್ಯದ 100 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಟಿಕೆಟ್ ಅಕ್ರಮ ಮಾರಾಟಕ್ಕೆ ಸಹಕರಿಸಿದ ಆರೋಪದ ಮೇಲೆ ಕೆಲವು ಖಾಸಗಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ (MD) ವಿರುದ್ಧವೂ ಸಿಸಿಬಿ ಎಫ್‌ಐಆರ್ ದಾಖಲಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಸಿಬಿ ಡಿಸಿಪಿ ಶ್ರೀಹರಿಬಾಬು ಅವರು, “ಐಪಿಎಲ್ ಟಿಕೆಟ್ ಬ್ಲಾಕ್ ಮಾರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಪ್ರಕರಣಗಳು ದಾಖಲಾಗಿವೆ. ಅಕ್ರಮ ಎಸಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ,” ಎಂದು ಎಚ್ಚರಿಸಿದ್ದಾರೆ.