ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

“ಅಮೆರಿಕ ಪ್ರಭಾವವಿಲ್ಲ”: ಯುಪಿಐ ಶುಲ್ಕದ ಮೇಲಿನ ಬಾಹ್ಯ ಒತ್ತಡ ಆರೋಪಕ್ಕೆ ಕೇಂದ್ರ ಸರ್ಕಾರ ತಿರುಗೇಟು

UPI Charges: ಯುಪಿಐ ಪಾವತಿಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ದರ ಪರಿಚಯಿಸುವ ನಿರ್ಧಾರವು ವಿದೇಶಿ ಪ್ರಭಾವದಿಂದ ಪ್ರೇರಿತವಾಗಿದೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರವು ತಳ್ಳಿಹಾಕಿದೆ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಹಣ ವರ್ಗಾವಣೆಗಳು ಯಾವಾಗಲೂ ಸಂಪೂರ್ಣ ಉಚಿತವಾಗಿರಲಿವೆ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಸೆ. 16: ಯುಪಿಐ ಪಾವತಿಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ದರ (MDR) ಪರಿಚಯಿಸುವ ನಿರ್ಧಾರವು ವಿದೇಶಿ ಪ್ರಭಾವದಿಂದ ಪ್ರೇರಿತವಾಗಿದೆ ಎಂಬ ವಿಪಕ್ಷಗಳ ಆರೋಪಗಳನ್ನು ಕೇಂದ್ರ ಸರ್ಕಾರವು ತಳ್ಳಿಹಾಕಿದೆ. ಈ ಕ್ರಮವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಮೆಚ್ಚಿಸಲು ಕೈಗೊಳ್ಳಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈ ಆರೋಪಗಳ ಕುರಿತು ಸ್ಪಷ್ಟನೆ ನೀಡಿದ ಹಣಕಾಸು ಸಚಿವಾಲಯ (Finance Ministry), ಭಾರತದ ಯುಪಿಐ ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ. ಅಲ್ಲದೆ, ಗ್ರಾಹಕರಿಗೆ ಯುಪಿಐ ಪಾವತಿ ಸೇವೆ ಉಚಿತವಾಗಿಯೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

“ಈ ಬದಲಾವಣೆಯು ವಿದೇಶಿ ಪ್ರಭಾವದಿಂದಾಗಿ ಆಗಿದೆ ಎಂಬ ಕೆಲವು ಆರೋಪಗಳು ಕೇಳಿ ಬರುತ್ತಿವೆ. ಆದರೆ ಇದು ಸತ್ಯವಲ್ಲ. ಭಾರತದ ಯುಪಿಐ ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳಲಾಗುತ್ತಿದ್ದು, ಸ್ವಾವಲಂಬಿ, ಎಲ್ಲರನ್ನೂ ಒಳಗೊಂಡ ಹಾಗೂ ಕೈಗೆಟುಕುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿರ್ಮಿಸುವುದು ಇದರ ಸ್ಪಷ್ಟ ಉದ್ದೇಶವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೊಸ ಯುಪಿಐ ಎಂಡಿಆರ್ ಶುಲ್ಕ ಎಷ್ಟು?

ಅಕ್ಟೋಬರ್ 15ರಿಂದ, 2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ಕೇವಲ ವ್ಯಾಪಾರಿಗಳು ಪಾವತಿಸಬೇಕಾಗುತ್ತದೆಯೇ ಹೊರತು, ಸಾಮಾನ್ಯ ಗ್ರಾಹಕರ ಮೇಲೆ ಇದರಿಂದ ಯಾವುದೇ ಪರಿಣಾಮ ಬೀರಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸ್ಪಷ್ಟಪಡಿಸಿದೆ.

ವ್ಯಾಪಾರಿಗಳು 2 ಸಾವಿರ ರೂಪಾಯಿಗಿಂತ ಅಧಿಕ ವ್ಯವಹಾರಕ್ಕೆ ಶುಲ್ಕ ಪಾವತಿಸಬೇಕು

ಉದಾಹರಣೆಗೆ, ಒಬ್ಬ ವ್ಯಾಪಾರಿಗೆ 10,000 ರೂ. ಮೊತ್ತದ ಯುಪಿಐ ಪಾವತಿಯನ್ನು ಸ್ವೀಕರಿಸಿದಾಗ, ಆತ 40 ರೂ. ಎಂಡಿಆರ್ (MDR) ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಗ್ರಾಹಕರಿಂದ ಯುಪಿಐ ಮೂಲಕ ತಿಂಗಳಿಗೆ 1 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸುವ ಅಂಗಡಿಯವರನ್ನು ಅಥವಾ ಸಂಸ್ಥೆಗಳನ್ನು ವ್ಯಾಪಾರಿ ಎಂದು ವರ್ಗೀಕರಿಸಲಾಗಿದ್ದು, ಇವರು ಈ ಶುಲಕ್‌ ಪಾವತಿಸಬೇಕು. ಆದರೆ ಪ್ರತಿ ವಹಿವಾಟಿಗೆ ಎಂಡಿಆರ್ ಶುಲ್ಕವನ್ನು 300 ರೂ.ಗೆ ಮಿತಿಗೊಳಿಸಲಾಗಿದೆ.

ಈ ಹೊಸ ನಿಯಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳ ತೀವ್ರ ಟೀಕೆಗಳ ನಡುವೆಯೂ, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಹಣ ವರ್ಗಾವಣೆಗಳು ಯಾವಾಗಲೂ ಸಂಪೂರ್ಣ ಉಚಿತವಾಗಿರಲಿವೆ ಎಂದು ಕೇಂದ್ರ ಸರ್ಕಾರವು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಹಾಗಂತ ವ್ಯಾಪಾರಿಗಳು ಈ ಹೆಚ್ಚುವರಿ ವೆಚ್ಚದ ಹೊರೆಯನ್ನು ಗ್ರಾಹಕರ ಮೇಲೆ ಹೇರದಂತೆ ನೋಡಿಕೊಳ್ಳಲು ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಸ್ನೇಹಿತರಿಗೆ ಹಣ ಕಳುಹಿಸುವುದು, ಅಂಗಡಿಗಳಲ್ಲಿ ಪಾವತಿಸುವುದು ಅಥವಾ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವುದು - ಇವೆಲ್ಲವೂ ಎಂದಿನಂತೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ, ಇದು ಅಮೆರಿಕದ ಕಾರ್ಡ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಈ ನಿರ್ಧಾರವನ್ನು ನರೇಂದ್ರ ಮೋದಿ ಅವರ ನಿರಂತರ ಟ್ರಂಪ್ ಓಲೈಕೆ ಎಂದು ಲೇವಡಿ ಮಾಡಿದ್ದಾರೆ.