UPI Charges: ವ್ಯಾಪಾರಿಗಳು 2 ಸಾವಿರ ರೂಪಾಯಿಗಿಂತ ಅಧಿಕ ವ್ಯವಹಾರಕ್ಕೆ ಶುಲ್ಕ ಪಾವತಿಸಬೇಕು: ಸಾಮಾನ್ಯ ಗ್ರಾಹಕರಿಗೆ ಎಂದಿನಂತೆ ಉಚಿತ
Merchant Discount Rate: ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಯುಪಿಐ ವ್ಯವಹಾರದ ನಿಯಮದಲ್ಲಿ ಹೊಸ ಬದಲಾವಣೆ ಘೋಷಿಸಿದೆ. ಮರ್ಚಂಟ್ ಡಿಸ್ಕೌಂಟ್ ರೇಟ್‌ನಡಿ ಯುಪಿಐ ವ್ಯವಹಾರಕ್ಕೆ ವ್ಯಾಪಾರಿಗಳು ಶುಲ್ಕ ಪಾವತಿಸಬೇಕು. ಅದಾಗ್ಯೂ ಸಾಮಾನ್ಯ ಗ್ರಾಹಕರು ಯಾವುದೇ ಶುಲ್ಕ ವಿಧಿಸಬೇಕಾಗಿಲ್ಲ. ವ್ಯಕ್ತಿಯಿಂದ ವ್ಯಕ್ತಿ ನಡುವಿನ ವ್ಯವಹಾರಕ್ಕೆ ಯಾವುದೇ ಫೀಸ್ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಸೆ. 15: ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ಯುಪಿಐ (UPI) ವ್ಯವಹಾರದ ನಿಯಮದಲ್ಲಿ ಹೊಸ ಬದಲಾವಣೆ ಘೋಷಿಸಿದೆ. ಮರ್ಚಂಟ್ ಡಿಸ್ಕೌಂಟ್ ರೇಟ್‌ನಡಿ (MDR) ಯುಪಿಐ ವ್ಯವಹಾರಕ್ಕೆ ವ್ಯಾಪಾರಿಗಳು ಶುಲ್ಕ ಪಾವತಿಸಬೇಕು. ಅಂದರೆ 2,000 ರೂಪಾಯಿ ಮತ್ತು ಅದಕ್ಕಿಂತ ಅಧಿಕ ವ್ಯವಹಾರ ನಡೆಸುವ ವರ್ತಕರು ಕನಿಷ್ಠ ಶೇಕಡಾ 0.4ರಷ್ಟು ಶುಲ್ಕ ಪಾವತಿಸಬೇಕು. ಅದಾಗ್ಯೂ ಸಾಮಾನ್ಯ ಗ್ರಾಹಕರು ಯಾವುದೇ ಶುಲ್ಕ ವಿಧಿಸಬೇಕಾಗಿಲ್ಲ. ವ್ಯಕ್ತಿಯಿಂದ ವ್ಯಕ್ತಿ ನಡುವಿನ ವ್ಯವಹಾರಕ್ಕೆ ಯಾವುದೇ ಫೀಸ್ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೊಸ ನಿಯಮಗಳ ಪ್ರಕಾರ 2,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಪರ್ಸನ್-ಟು-ಮರ್ಚೆಂಟ್ (P2M) ಯುಪಿಐ ಪಾವತಿಗಳಿಗೆ ಶೇಕಡಾ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ ಅನ್ವಯವಾಗುತ್ತದೆ. ಆದಾಗ್ಯೂ, ಒಂದು ವಹಿವಾಟಿಗೆ ಈ ಶುಲ್ಕವು 300 ರೂಪಾಯಿಗಿಂತ ಹೆಚ್ಚಿರುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ. ಎಂಆರ್‌ಡಿಯನ್ನು ಗ್ರಾಹಕರಿಂದ ಸಂಗ್ರಹಿಸುವುದಿಲ್ಲ. ಇದು ವ್ಯಾಪಾರಿಗಳಿಂದ ಸಂಗ್ರಹಿಸುವ ಶುಲ್ಕ.
ಎಂಆರ್‌ಡಿ ಲೆಕ್ಕಾಚಾರ:
ಆಯ್ದ ಕೆಲವು ಯುಪಿಐ ವಹಿವಾಟುಗಳ ಮೇಲಿನ ವ್ಯಾಪಾರಿ ರಿಯಾಯಿತಿ ದರ
— PIB in Karnataka (@PIBBengaluru) September 15, 2026
🚨ಪುನರಾವರ್ತಿತ ಪ್ರಶ್ನೆಗಳು🚨#UPI #UPIPayment@nsitharaman @nsitharamanoffc @mppchaudhary @FinMinIndia @UPI_NPCI @NPCI_NPCI @AshwiniVaishnaw @DrLMurugan @office_murugan @PIB_India @MIB_India @chanchal001 @DG_PIB @DDNewslive… https://t.co/2eE8dcRrGL pic.twitter.com/xgZr583w1T
75,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗೆ ಶುಲ್ಕದ ಗರಿಷ್ಠ ಮಿತಿ 300 ರೂಪಾಯಿ. ದೊಡ್ಡ ಮೊತ್ತದ ಪಾವತಿಗೆ ಚೌಕಟ್ಟನ್ನು ಸರ್ಕಾರ ಘೋಷಿಸಿದೆ. ಅಂದರೆ ಒಬ್ಬ ಗ್ರಾಹಕ ಅಂಗಡಿಯಲ್ಲಿ 10,000 ರೂಪಾಯಿ ಯುಪಿಐ ಮೂಲಕ ಪಾವತಿಸಿದರೆ, ಶೇ 0.4ರಷ್ಟು ಎಂಡಿಆರ್ ಅನ್ವಯ 40 ರೂಪಾಯಿ ಶುಲ್ಕ ವಸೂಲಿ ಮಾಡಲಾಗುತ್ತದೆ.
ಇನ್ನು 75,000 ರೂಪಾಯಿ ಪಾವತಿಸಿದರೆ ಶೇ. 0.4ರ ಅನ್ವಯ 300 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿದರೂ ಗರಿಷ್ಠ ಶುಲ್ಕ 300 ರೂಪಾಯಿಯೇ ಆಗಿರುತ್ತದೆ.
ಎಂಆರ್‌ಡಿ ಲೆಕ್ಕ
ಎಂಆರ್‌ಡಿ ಲೆಕ್ಕ ಹೇಗೆ?
| ವ್ಯಾಪಾರಿಗೆ ಪಾವತಿ ಮಾಡುವ ಹಣ | ವಿಧಿಸಲಾಗುವ ಎಂಡಿಆರ್ | ವ್ಯಾಪಾರಿಗೆ ವಿಧಿಸಲಾಗುವ ಶುಲ್ಕ |
|---|---|---|
| ₹ 2,000 | - | ೦ |
| ₹ 3,000 | 0.40% | ₹ 12 |
| ₹ 50,000 | 0.40% | ₹ 200 |
| ₹ 75,000 ಮತ್ತು ಅಧಿಕ | ₹ 300 ನಿಶ್ಚಿತ ಮೊತ್ತ | ₹ 300 |
ವ್ಯಕ್ತಿಯಿಂದ ವ್ಯಕ್ತಿಗೆ-ಮತ್ತು-ವ್ಯಾಪಾರಿ (P2PM) ಚೌಕಟ್ಟಿನ ವ್ಯಾಪ್ತಿಗೆ ಬರುವ ಸಣ್ಣ ವ್ಯಾಪಾರಿಗಳಿಗೆ ಎಂಆರ್‌ಡಿ ಶುಲ್ಕ ವಿಧಿಸಲಾಗುವುದಿಲ್ಲ. P2PM ಚೌಕಟ್ಟು ಎನ್ನುವುದು ಎನ್‌ಪಿಸಿಐ ಪರಿಚಯಿಸಿರುವ ಒಂದು ಪ್ರತ್ಯೇಕ ವರ್ಗವಾಗಿದ್ದು, ಇದು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿಗಳನ್ನು ಸ್ವೀಕರಿಸುವ ಸಣ್ಣ ಮಾರಾಟಗಾರರಿಗೆ ಅನ್ವಯವಾಗಲಿದೆ. ಯುಪಿಐ ಕ್ಯುಆರ್ ಮೂಲಕ ತಮ್ಮ ಖಾತೆಗಳಿಗೆ ನೇರವಾಗಿ ತಿಂಗಳಿಗೆ 1 ಲಕ್ಷ ರೂಪಾಯಿವರೆಗೆ ಪಾವತಿಗಳನ್ನು ಸ್ವೀಕರಿಸುವ ವ್ಯಾಪಾರಿಗಳು ಈ ಸಣ್ಣ ಮಾರಾಟಗಾರರ ವರ್ಗಕ್ಕೆ ಬರುತ್ತಾರೆ. ಅಸಂಘಟಿತ ಚಿಲ್ಲರೆ ವಲಯದ ಸಣ್ಣ ಉದ್ಯಮಗಳು ಮತ್ತು ಮಾರಾಟಗಾರರಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ವರ್ಗವನ್ನು ರೂಪಿಸಲಾಗಿದೆ.
ಎಲ್ಲ ಯುಪಿಐ ಪಾವತಿಗಳನ್ನು ಒಂದೇ ಆ್ಯಪ್‌ನಿಂದ ನಿರ್ವಹಿಸಿ: ಡಿಸೆಂಬರ್ 31ರಿಂದ ಹೊಸ ನಿಯಮ ಜಾರಿ
ಎಂಆರ್‌ಡಿ ಎಂದರೇನು?
ಮರ್ಚೆಂಟ್ ಡಿಸ್ಕೌಂಟ್ ರೇಟ್ ಎಂದರೆ ವ್ಯಾಪಾರಿಗಳಿಂದ ಬ್ಯಾಂಕ್‌ಗಳು ವಿಧಿಸುವ ವಹಿವಾಟು ಸಂಸ್ಕರಣೆ ಶುಲ್ಕ. ಸಾಮಾನ್ಯವಾಗಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗಳ ಮೇಲೆ ಶೇ. 1ರಿಂದ 3ರಷ್ಟು ಎಂಆರ್‌ಡಿ ವಿಧಿಸಲಾಗುತ್ತದೆ. ವಹಿವಾಟು ಸಂಸ್ಕರಣೆ, ಹಣದ ವಸಾಹತು ಮತ್ತು ಪಾವತಿ ಮೂಲ ಸೌಕರ್ಯದ ವೆಚ್ಚಗಳನ್ನು ಭರಿಸಲು ಈ ಶುಲ್ಕವನ್ನು ಬಳಸಲಾಗುತ್ತದೆ. ಸಣ್ಣ ಮೊತ್ತದ ಯುಪಿಐ ಪಾವತಿಗಳಿಗೆ ಶುಲ್ಕ ವಿನಾಯಿತಿ ಮುಂದುವರಿದಿದ್ದರೂ, 2,000 ರೂಪಾಯಿ ಮೇಲ್ಪಟ್ಟ ವಹಿವಾಟುಗಳ ಮೇಲೆ ಎಂಆರ್‌ಡಿ ವಿಧಿಸಲು ಕೇಂದ್ರ ಸರ್ಕಾರದ ತಿದ್ದುಪಡಿ ಅವಕಾಶ ಕಲ್ಪಿಸಲಾಗಿದೆ.
ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.