ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ: ರಫ್ತುಗಳ ಮೇಲೆ ಶೇಕಡಾ 18ರಷ್ಟು ಸುಂಕದೊಂದಿಗೆ ಭಾರತ ಯಾವ ಸ್ಥಾನದಲ್ಲಿದೆ?
India-US Trade Deal: ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಅಮೆರಿಕವು ಶೇಕಡಾ 18ಕ್ಕೆ ಇಳಿಸಲಿದೆ. ಪ್ರತಿಯಾಗಿ, ಭಾರತವೂ ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯ ನಂತರ ಈ ಘೋಷಣೆ ಹೊರಬಿದ್ದಿದೆ.
ಭಾರತ ಅಮೆರಿಕ ವ್ಯಾಪಾರ ಒಪ್ಪಂದ -
ನವದೆಹಲಿ, ಫೆ. 4: ಭಾರತ ಮತ್ತು ಅಮೆರಿಕ (India-US) ನಡುವೆ ಮಹತ್ವದ ವ್ಯಾಪಾರ ಒಪ್ಪಂದ (Trade Deal) ಏರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (America President Donald Trump) ಘೋಷಿಸಿದ್ದಾರೆ. ಈ ಒಪ್ಪಂದದಡಿ ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು (Tariff) ಅಮೆರಿಕವು ಶೇ. 18ಕ್ಕೆ ಇಳಿಸಲಿದೆ. ಪ್ರತಿಯಾಗಿ, ಭಾರತವೂ ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯ ನಂತರ ಈ ಘೋಷಣೆ ಹೊರ ಬಿದ್ದಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಆಮದಿಗೆ ಭಾರತ ಒಪ್ಪಿಗೆ ನೀಡಿದೆ ಎಂದು ಅಮೆರಿಕದ ಕೃಷಿ ಕಾರ್ಯದರ್ಶಿ ಬ್ರೂಕ್ ರೋಲಿನ್ಸ್ ತಿಳಿಸಿದ್ದಾರೆ.
ಕೃಷಿ, ಡೈರಿ ವಲಯಕ್ಕೆ ರಕ್ಷಣೆ: ಪಿಯೂಷ್ ಗೋಯಲ್
ಟ್ರಂಪ್ ಘೋಷಣೆಯ ಬೆನ್ನಲ್ಲೇ ಮಂಗಳವಾರ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, "ಒಪ್ಪಂದವು ಅಂತಿಮ ಹಂತದಲ್ಲಿದೆ. ಕೃಷಿ ಮತ್ತು ಡೈರಿಯಂತಹ ಸೂಕ್ಷ್ಮ ವಲಯಗಳ ಹಿತಾಸಕ್ತಿಯನ್ನು ಕಾಪಾಡಲಾಗುವುದು'' ಎಂದಿದ್ದಾರೆ.
ಹಿನ್ನೆಲೆ
2025ರ ಆಗಸ್ಟ್‌ನಲ್ಲಿ ಅಮೆರಿಕವು ಭಾರತೀಯ ರಫ್ತುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸಿತ್ತು. ಅಷ್ಟೇ ಅಲ್ಲದೆ, ರಷ್ಯಾದಿಂದ ಕಚ್ಚಾ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಿದ್ದಕ್ಕಾಗಿ ಹೆಚ್ಚುವರಿ ಶೇ. 25ರಷ್ಟು ದಂಡನಾತ್ಮಕ ಸುಂಕವನ್ನು ವಿಧಿಸಲಾಗಿತ್ತು. ಈಗ ಈ ಸುಂಕ ಶೇ. 18ಕ್ಕೆ ಇಳಿಕೆಯಾಗಿರುವುದು ಭಾರತಕ್ಕೆ ದೊಡ್ಡ ಸಮಾಧಾನ ತಂದಿದೆ.
ಭಾರತ- ಅಮೆರಿಕ ವ್ಯಾಪಾರ ಒಪ್ಪಂದದಿಂದ ಯಾವ ವಲಯಕ್ಕೆ ಹೆಚ್ಚಿನ ಲಾಭ?
ಜಾಗತಿಕ ಸುಂಕದ ಪಟ್ಟಿಯಲ್ಲಿ ಭಾರತದ ಸ್ಥಾನ
- ಬ್ರೆಜಿಲ್ - ಶೇ. 50 (ಅತಿ ಹೆಚ್ಚು)
- ಮ್ಯಾನ್ಮಾರ್, ಲಾವೋಸ್ - ಶೇ. 40
- ಚೀನಾ - ಶೇ. 37
- ಕೆನಡಾ - ಶೇ. 35
- ದಕ್ಷಿಣ ಆಫ್ರಿಕಾ - ಶೇ. 30
- ವಿಯೆಟ್ನಾಂ, ಬಾಂಗ್ಲಾದೇಶ - ಶೇ. 20
- ಭಾರತ - ಶೇ. 18 (ಪ್ರಸ್ತುತ)
- ಯುರೋಪಿಯನ್ ಯೂನಿಯನ್, ಜಪಾನ್ - ಶೇ. 15
- ಬ್ರಿಟನ್ - ಶೇ.10 (ಅತಿ ಕಡಿಮೆ)
ಸುಂಕ ಕಡಿತದಿಂದಾಗಿ ಯಾವ ವಲಯಕ್ಕೆ ಲಾಭ
ಈ ಸುಂಕ ಕಡಿತದಿಂದ ಭಾರತದ ಹಲವು ರಫ್ತು ವಲಯಗಳಿಗೆ ಬಲ ಸಿಗಲಿದೆ:
- ಸಿದ್ಧ ಉಡುಪುಗಳು (Apparel): ತಮಿಳುನಾಡಿನ ತಿರುಪುರ್‌ನಂತಹ ನಗರಗಳ ಜವಳಿ ಉದ್ಯಮ ವಿಯೆಟ್ನಾಂ ಮತ್ತು ಬಾಂಗ್ಲಾದೇಶದ ವಿರುದ್ಧ ಸ್ಪರ್ಧಿಸಲು ಸಹಕಾರಿ.
- ಎಲೆಕ್ಟ್ರಾನಿಕ್ಸ್: 2024-25ರಲ್ಲಿ 2 ಲಕ್ಷ ಕೋಟಿ ರು. ತಲುಪಿದ್ದ ಮೊಬೈಲ್ ಫೋನ್ ರಫ್ತು ಇನ್ನು ಮುಂದೆ ಮತ್ತಷ್ಟು ಏರಿಕೆಯಾಗಲಿದೆ.
- ಸಮುದ್ರ ಆಹಾರ (Marine Products): ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಸಿಗಡಿ ಸಾಕಣೆದಾರರು ಮತ್ತು ರಫ್ತುದಾರರಿಗೆ ಈ ನಿರ್ಧಾರ ವರದಾನವಾಗಲಿದೆ.
ಇನ್ನು ಡೈರಿ (ಹಾಲು ಮತ್ತು ಹಾಲಿನ ಉತ್ಪನ್ನಗಳು) ಮತ್ತು ಕೃಷಿ ವಲಯಗಳನ್ನು ಈ ಒಪ್ಪಂದದ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದ್ದು, ಎರಡೂ ದೇಶಗಳ ಜಂಟಿ ಪ್ರಕಟಣೆಯ ನಂತರ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂದು ವರದಿಗಳು ತಿಳಿಸಿವೆ.