Zomato: ಜೊಮಾಟೊ ಇನ್ಮುಂದೆ ಎಟರ್ನಲ್; ಯಾಕಾಗಿ ಈ ಬದಲಾವಣೆ?
ಆನ್‌ಲೈನ್ ಆಹಾರ, ದಿನಸಿ ಸಾಮಗ್ರಿ ವಿತರಣಾ ವೇದಿಕೆ ಜೊಮಾಟೊ ಇನ್ನುಮುಂದೆ ಎಟರ್ನಲ್ ಲಿ. ಎನಿಸಿಕೊಳ್ಳಲಿದೆ. ಹೆಸರು ಬದಲಾವಣೆಗೆ ಜೊಮಾಟೊದ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ ಎಂದು ಸಂಸ್ಥೆ ತಿಳಿಸಿದೆ. ಆದರೆ ಫುಡ್ ಆ್ಯಪ್ನಲ್ಲಿನ ಜೊಮಾಟೊ ಹೆಸರು ಹಾಗೇ ಇರಲಿದೆ. ಅಂದರೆ ಜೊಮಾಟೋ ಆ್ಯಪ್ನ ಹೆಸರಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
ಹೊಸದಿಲ್ಲಿ: ಆನ್‌ಲೈನ್ ಆಹಾರ, ದಿನಸಿ ಸಾಮಗ್ರಿ ವಿತರಣಾ ವೇದಿಕೆ ಜೊಮಾಟೊ (Zomato) ಇನ್ನುಮುಂದೆ ಎಟರ್ನಲ್ (Eternal Ltd) ಲಿ. ಎನಿಸಿಕೊಳ್ಳಲಿದೆ. ಹೌದು, ಗುರುವಾರ (ಫೆ. 6) ಈ ಬಗ್ಗೆ ಪ್ರಕಟನೆ ಹೊರಡಿಸಿದ ಕಂಪನಿ ಹೊಸ ಲಾಂಛನ (Logo)ವನ್ನೂ ಪರಿಚಯಿಸಿದೆ. ಹೆಸರು ಬದಲಾವಣೆಗೆ ಜೊಮಾಟೊದ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ ಎಂದು ಸಂಸ್ಥೆ ತಿಳಿಸಿದೆ. ಆದರೆ ಫುಡ್ ಆ್ಯಪ್ನಲ್ಲಿನ ಜೊಮಾಟೊ ಹೆಸರು ಹಾಗೇ ಇರಲಿದೆ. ಅಂದರೆ ಜೊಮಾಟೋ ಆ್ಯಪ್ನ ಹೆಸರಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
"ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಕಂಪನಿಯ ಹೆಸರನ್ನು ಜೊಮಾಟೊ ಲಿಮಿಟೆಡ್‌ನಿಂದ ಎಟರ್ನಲ್ ಲಿಮಿಟೆಡ್ ಎಂದು ಬದಲಾಯಿಸಲು ಮತ್ತು ಅದನ್ನು ಜಾರಿಗೆ ತರಲು ಅನುಮೋದನೆ ನೀಡಲಾಗಿದೆʼʼ ಎಂದು ಕಂಪನಿ ತಿಳಿಸಿದೆ.
ಈ ಮರುಬ್ರ್ಯಾಂಡಿಂಗ್ ಜೊಮಾಟೊ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಯೋಜನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ. ಈ ಕಂಪನಿಯು ತನ್ನ ಆಹಾರ ವಿತರಣೆಯನ್ನೂ ಮೀರಿ ಈಗ ಬ್ಲಿಂಕಿಟ್, ಡಿಸ್ಟ್ರಿಕ್ಟ್ ಮತ್ತು ಹೈಪರ್‌ಪ್ಯೂರ್ ಸೇರಿದಂತೆ ವಿವಿಧ ವ್ಯವಹಾರಗಳನ್ನೂ ನಡೆಸುತ್ತಿದೆ.
ಮರುಬ್ರ್ಯಾಂಡಿಂಗ್
ʼʼಮರುಬ್ರ್ಯಾಂಡಿಂಗ್ ಭಾಗವಾಗಿ ಜೊಮಾಟೊ ತನ್ನ ಕಾರ್ಪೊರೇಟ್ ವೆಬ್‌ಸೈಟ್ ಅನ್ನು ಜೊಮಾಟೊ.ಕಾಮ್ (zomato.com)ನಿಂದ ಎಟರ್ನಲ್.ಕಾಮ್ (eternal.com)ಗೆ ಪರಿವರ್ತಿಸಿದೆ. ಜತೆಗೆ ಸ್ಟಾಕ್ ಟಿಕ್ಕರ್ ಅನ್ನು ಜೊಮಾಟೊದಿಂದ ಎಟರ್ನಲ್‌ಗೆ ಬದಲಿಸಿದೆ. ಎಟರ್ನಲ್ ಈಗ 4 ಪ್ರಮುಖ ವ್ಯವಹಾರಗಳಾದ ಜೊಮಾಟೊ, ಬ್ಲಿಂಕಿಟ್, ಡಿಸ್ಟ್ರಿಕ್ಟ್ ಮತ್ತು ಹೈಪರ್‌ಪ್ಯೂರ್ ಅನ್ನು ಒಳಗೊಂಡಿದೆʼʼ ಎಂದು ಸಿಇಒ ದೀಪಿಂದರ್ ಗೋಯಲ್ ತಿಳಿಸಿದ್ದಾರೆ.
ಬ್ಲಿಂಕಿಟ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಕಂಪನಿ ಬ್ರ್ಯಾಂಡ್/ಆ್ಯಪ್ ನಡುವೆ ವ್ಯತ್ಯಾಸವನ್ನು ಗುರುತಿಸಲು ಜೊಮಾಟೊ ಬದಲಿಗೆ ಎಟರ್ನಲ್ ಹೆಸರನ್ನು ಆಂತರಿಕವಾಗಿ ಬಳಸಲಾಗುತ್ತಿತ್ತು.
ಯಾಕಾಗಿ ಈ ಬದಲಾವಣೆ?
ಜೊಮಾಟೊ ಸಂಸ್ಥೆ ಮೂಲತಃ ಫುಡ್ ಡೆಲಿವರಿ ಕಂಪನಿ. ನಂತರ ಅದು ತನ್ನ ಕಾರ್ಯಕ್ಷೇತ್ರ ವಿಸ್ತರಿಸುತ್ತಾ ಬಂದಿದೆ. ಅದರ ಭಾಗವಾಗಿ ಬ್ಲಿಂಕಿಟ್ ಎನ್ನುವ ಕ್ವಿಕ್ ಕಾಮರ್ಸ್ ಕಂಪನಿಯನ್ನು ಖರೀದಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಕಂಪನಿಗೆ ಪ್ರತ್ಯೇಕ ಗುರುತಿನ ಅವಶ್ಯಕತೆ ಇತ್ತು. ಹೀಗಾಗಿ ಎಟರ್ನಲ್ ಎಂದು ಹೆಸರು ಬದಲಾಯಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: TDS Returns: ಟಿಡಿಎಸ್ ರಿಟರ್ನ್ಸ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ- ಕ್ಲೈಮ್ ಮಾಡುವುದು ಹೇಗೆ?
ಯಾವೆಲ್ಲ ಸೇವೆ?
ಜೊಮಾಟೊ ಫುಡ್ ಡೆಲಿವರಿ ಮಾಡುತ್ತಿದ್ದರೆ, ಬ್ಲಿಂಕಿಟ್ ಕ್ವಿಕ್ ಕಾಮರ್ಸ್ ಸೇವೆ ನೀಡುತ್ತಿದೆ. ಡಿಸ್ಟ್ರಿಕ್ಟ್ ಬುಕ್ ಮೈ ಶೋ ರೀತಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸಿನಿಮಾ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಟಿಕೆಟ್ ಬುಕ್ ಮಾಡಬಹುದು. ಇನ್ನು ಹೋಟೆಲ್ಗಳಿಗೆ ಬೇಕಾದ ತರಕಾರಿ, ದಿನಸಿ ಇತ್ಯಾದಿ ಆಹಾರವಸ್ತುಗಳನ್ನು ಹೋಲ್ಸೇಲ್ ದರದಲ್ಲಿ ಸರಬರಾಜು ಮಾಡುವ ಸೇವೆ ಹೈಪರ್‌ಪ್ಯೂರ್.
2007ರಲ್ಲಿ ಆರಂಭವಾದ ಫೂಡಿಬೇ (FoodieBay) 2010ರಲ್ಲಿ ತನ್ನ ಹೆಸರನ್ನು ಜೊಮಾಟೊ ಎಂದು ಬದಲಾಯಿಸಿಕೊಂಡಿತ್ತು. ಇದು 2022ರಲ್ಲಿ ಬ್ಲಿಂಕಿಟ್ ಅನ್ನು ಖರೀದಿಸಿತ್ತು. ಗುರುವಾರ ಜೊಮಾಟೊ ಷೇರುಗಳು 229.05 ರೂ.ಗಳಲ್ಲಿ ಮುಕ್ತಾಯಗೊಂಡಿವೆ.