ಮುಂಬೈ, ಫೆ. 2: ಭಾರತದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಮುಂಬೈಯಲ್ಲಿ (Mumbai) ಅಪ್ರಾಪ್ತ ಮಕ್ಕಳ ನಾಪತ್ತೆ ಪ್ರಕರಣಗಳು ಗಂಭೀರ ಮತ್ತು ಆತಂಕಕಾರಿ ಬಿಕ್ಕಟ್ಟಾಗಿ ಹೊರ ಹೊಮ್ಮಿದೆ. ಕಳೆದ 36 ಗಂಟೆಗಳಲ್ಲಿ ನಗರದ ಏಳು ವಿಭಿನ್ನ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 12 ಅಪ್ರಾಪ್ತ ಮಕ್ಕಳು ನಾಪತ್ತೆಯಾಗಿದ್ದಾರೆ (Missing children) ಎಂದು ತಿಳಿದುಬಂದಿದೆ. ನಗರದ ಬೀದಿಗಳು, ಕೊಳೆಗೇರಿಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಡಿಪೋಗಳಲ್ಲಿ ಕಾಣೆಯಾದ ಮಕ್ಕಳ ಹುಡುಕಾಟ ತೀವ್ರಗೊಂಡಿದೆ. ಈ ಪೈಕಿ ಎಂಟು ಮಂದಿ ಬಾಲಕಿಯರು ಸೇರಿದ್ದಾರೆ.
ಪೋಷಕರು ಸಲ್ಲಿಸಿದ ದೂರುಗಳ ಆಧಾರದ ಮೇಲೆ, ಅಪಹರಣದ ಶಂಕೆಯ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 137(2)ರ ಅಡಿಯಲ್ಲಿ 12 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟಿತ ಮಕ್ಕಳ ಕಳ್ಳಸಾಗಣೆ ಜಾಲಗಳ ಬಗ್ಗೆ ಮತ್ತಷ್ಟು ಕಳವಳವನ್ನು ಹುಟ್ಟುಹಾಕಿದೆ.
ಗಂಡನನ್ನು ಕೊಂದು ಆತ್ಮಹತ್ಯೆ ಎಂದು ನಂಬಿಸಿದ್ದ ಪತ್ನಿಯ ಅಸಲಿ ಮುಖ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ!
ಮಕ್ಕಳನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮುಂಬೈ ಪೊಲೀಸರು ಕುಟುಂಬಗಳಿಗೆ ಭರವಸೆ ನೀಡಿದ್ದಾರೆ. ಆದರೂ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಮತ್ತು ಕಾನೂನು ಜಾರಿ ಸಂಸ್ಥೆಗಳಲ್ಲಿ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ಹಲವು ನಾಪತ್ತೆ ಪ್ರಕರಣಗಳ ಹಿಂದೆ ಮಾನವ ಕಳ್ಳಸಾಗಣೆ ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲವು ಪ್ರಕರಣಗಳು ಕೌಟುಂಬಿಕ ಕಲಹಗಳು ಅಥವಾ ಮನೆಯಿಂದ ಓಡಿಹೋಗಿರುವ ಕಾರಣ ಇರಬಹುದು. ಆದರೆ ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಏರುತ್ತಿರುವ ಸಂಖ್ಯೆ ಹಾಗೂ ಹೆಣ್ಣುಮಕ್ಕಳೇ ಹೆಚ್ಚು ನಾಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ಸಂಘಟಿತ ದುಷ್ಕರ್ಮಿಗಳ ಗ್ಯಾಂಗ್ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮುಂಬೈಯಂತಹ ಮಹಾನಗರದಲ್ಲಿ ಕೊಳಗೇರಿ, ಜನದಟ್ಟಣೆಯ ಮಾರುಕಟ್ಟೆಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳಲ್ಲಿ ಮಕ್ಕಳನ್ನು ಸುಲಭವಾಗಿ ಅಪಹರಣ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಮುಂಬೈ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಸಿಸಿಟಿವಿ ಕಣ್ಗಾವಲು, ಪಾದಚಾರಿ ಗಸ್ತು ಮತ್ತು ತಾಂತ್ರಿಕ ಮೇಲ್ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಕೆಲವು ಮಕ್ಕಳನ್ನು ತ್ವರಿತವಾಗಿ ಪತ್ತೆಹಚ್ಚಲಾಗಿದ್ದರೂ, ಉಳಿದ ಪ್ರಕರಣಗಳ ತನಿಖೆ ಮುಂದುವರಿದಿದೆ.
ಪೊಲೀಸ್ ಠಾಣೆವಾರು ಪ್ರಕರಣಗಳು
ಪೊಲೀಸ್ ದಾಖಲೆಗಳ ಪ್ರಕಾರ, ಶಿವಾಜಿ ನಗರ (ನಾಲ್ಕು ಪ್ರಕರಣಗಳು), ಸಕಿನಾಕಾ (ಎರಡು ಪ್ರಕರಣಗಳು), ಆಂಟೋಪ್ ಹಿಲ್ (ಎರಡು ಪ್ರಕರಣಗಳು), ಮತ್ತು ಓಶಿವಾರಾ, ಮನ್ಖುರ್ಡ್, ಬಂಗೂರ್ ನಗರ ಮತ್ತು ಘಾಟ್ಕೋಪರ್ (ತಲಾ ಒಂದು ಪ್ರಕರಣ)ಗಳಿಂದ ಮಕ್ಕಳು ಕಾಣೆಯಾದ ಬಗ್ಗೆ ವರದಿಯಾಗಿದೆ.
ಪೊಲೀಸ್ ಮೂಲಗಳು ತಿಳಿಸಿರುವ ಪ್ರಕಾರ, ಇಲ್ಲಿಯವರೆಗೆ ಯಾವುದೇ ಕುಟುಂಬಗಳಿಗೆ ಸುಲಿಗೆ ಕರೆಗಳು ಬಂದಿಲ್ಲ. ಮಕ್ಕಳ ಸುರಕ್ಷತೆಯೇ ಪ್ರಾಥಮಿಕ ಗಮನ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ನಗರದಾದ್ಯಂತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು, ನಾಪತ್ತೆಯಾದ ಮಕ್ಕಳ ಫೋಟೊಗಳನ್ನು ಜನನಿಬಿಡ ಮಾರುಕಟ್ಟೆಗಳು, ಸಾರ್ವಜನಿಕ ಉದ್ಯಾನಗಳು, ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಆಸ್ಪತ್ರೆಗಳು, ಮಕ್ಕಳ ಮನೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗಿದೆ.