ಬೆಂಗಳೂರು: ಐವಿ ಡ್ರಿಪ್ (IV drip) ತೆಗೆಯುವಾಗ 6 ತಿಂಗಳ ಮಗುವಿನ ಬೆರಳಿಗೆ ಹಾನಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ (Indiranagar Chinmaya Mission Hospital) ವೈದ್ಯಕೀಯ ನಿರ್ಲಕ್ಷ್ಯದ ಘಟನೆ ನಡೆದಿದೆ. ಆರು ತಿಂಗಳ ಮಗುವಿಗೆ ಹಾಕಿದ್ದ ಐವಿ ಡ್ರಿಪ್ ತೆಗೆಯುವಾಗ ಎಡಗೈಯ ಕೊನೆಯ ಬೆರಳಿಗೆ ಹಾನಿಯಾಗಿದ್ದು, ಇದರಿಂದ ಮಗು ಬೆರಳನ್ನೇ ಕಳೆದುಕೊಂಡಿದೆ. ಈ ಕುರಿತು ಆಸ್ಪತ್ರೆ ನರ್ಸ್, ವೈದ್ಯರು ಮತ್ತು ಆಡಳಿತ ಮಂಡಳಿಯ ವಿರುದ್ಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೆಬ್ರವರಿ 24 ರಂದು ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆ ನಡುವೆ ಈ ಘಟನೆ ನಡೆದಿರುವುದಾಗಿ ದೂರುದಾರರಾದ ವಿಜಯ್ ಕುಮಾರ್ ಜೆ. ತಿಳಿಸಿದ್ದಾರೆ. ಅವರು ನೀಡಿರುವ ದೂರಿನಲ್ಲಿ ಫೆಬ್ರವರಿ 19 ರಂದು ತೀವ್ರ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಜೆ. ಅವರ ಆರು ತಿಂಗಳ ಮಗುವನ್ನು ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿ 19 ರಿಂದ ಫೆಬ್ರವರಿ 24 ರವರೆಗೆ ಡಾ. ಮೀನಾಕ್ಷಿ ಅವರು ಮಗುವಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಗಣಿ ಇಲಾಖೆ ಅಧಿಕಾರಿ ಮನೆಗೆ ವಿಜಿಲೆನ್ಸ್ ತಂಡ ದಾಳಿ, 4 ಕೋಟಿ ರೂ. ನಗದು ವಶ
ಫೆಬ್ರವರಿ 24 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಗುವಿನ ಆರೋಗ್ಯ ಸುಧಾರಿಸಿದ್ದರಿಂದ ಮಗುವನ್ನು ಡಿಸ್ಚಾರ್ಜ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಆಸ್ಪತ್ರೆಯ ಬಿಲ್ ಪಾವತಿಸಿದ ಬಳಿಕ ಡಿಸ್ಚಾರ್ಜ್ ಔಪಚಾರಿಕತೆಗಳು ನಡೆಯುತ್ತಿದ್ದವು. ಈ ವೇಳೆ ನರ್ಸ್ ಅನಿತಾ ಮಗುವಿನ ಕೈಗೆ ಹಾಕಿದ್ದ ಐವಿ ಡ್ರಿಪ್ ತೆಗೆಯುವಾಗ ಎಡಗೈಯ ಕಿರು ಬೆರಳನ್ನೇ ಕತ್ತರಿಸಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಇದರಿಂದ ತೀವ್ರ ಗಾಯಗೊಂಡ ಮಗುವನ್ನು ತಕ್ಷಣವೇ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಮಗುವಿಗೆ ಗಂಭೀರ ಗಾಯವಾಗಿದ್ದು, ಕಿರು ಬೆರಳನ್ನು ಕತ್ತರಿಸಿ ತೆಗೆಯುವಂತಾಗಿದೆ. ನರ್ಸ್, ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಚಿನ್ಮಯ ಮಿಷನ್ ಆಸ್ಪತ್ರೆಯ ಆಡಳಿತದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮೇಯೋಹಾಲ್‌ನಲ್ಲಿರುವ 10 ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಈ ಪ್ರಕರಣವನ್ನು ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.