ಕೋಲ್ಕತ್ತಾ, ಮಾ.20: ಆರು ತಿಂಗಳ ಗರ್ಭಿಣಿಯಾಗಿದ್ದ 24 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಪೂಜಾ ಮೊಂಡಲ್ ಎಂದು ಗುರುತಿಸಲಾದ ಮಹಿಳೆ ಮೃತ ದುರ್ದೈವಿ. ಬುಧವಾರ (ಮಾ.18) ಸಂಜೆ ಗರುಲಿಯಾದ ಲೆನಿನ್ ನಗರ (Crime News) ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಹಾಸಿಗೆಯ ಕೆಳಗೆ ಮರೆಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪತಿ ರಿಷಿ ಹರಿಚಂದ್, ತಾಯಿ ಮತ್ತು ಮತ್ತೊಬ್ಬ ಕುಟುಂಬ ಸದಸ್ಯ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಪೂಜಾ ತನ್ನ ಪತಿಗೆ ಹಣ ನೀಡಲು ನಿರಾಕರಿಸಿದ ಕಾರಣ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಹರಿಚಂದ್ ಆಕೆಯ ಕುತ್ತಿಗೆಯನ್ನು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಶವವನ್ನು ಮರೆಮಾಚುವ ಮೂಲಕ ಅಪರಾಧವನ್ನು ಮರೆಮಾಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
Physical Abuse: 58 ಮಹಿಳೆಯರಿಗೆ 3 ವರ್ಷ ಅತ್ಯಾಚಾರ, ರಹಸ್ಯ ಕ್ಯಾಮೆರಾ ಇಟ್ಟು ಬ್ಲ್ಯಾಕ್‌ಮೇಲ್: ಜ್ಯೋತಿಷಿಯ ಸೆರೆ
ಸ್ಥಳೀಯ ಮೂಲಗಳ ಪ್ರಕಾರ, ಮೊಂಡಲ್ ಮತ್ತು ಹರಿಚಂದ್ ಮದುವೆಯಾಗಿ ಸುಮಾರು ಎರಡು ವರ್ಷಗಳಾಗಿವೆ. ಮದುವೆಯಾದಾಗಿನಿಂದ ಆಕೆಯ ಪತಿ ಮತ್ತು ಅತ್ತೆ-ಮಾವರಿಂದ ಹಣದ ವಿಚಾರದಲ್ಲಿ ಪದೇ ಪದೇ ಕಿರುಕುಳ ಅನುಭವಿಸುತ್ತಿದ್ದರು ಎಂದು ಆಕೆಯ ಕುಟುಂಬ ಆರೋಪಿಸಿದೆ. ಆಕೆ ಗರ್ಭಿಣಿಯಾಗಿದ್ದರೂ, ಕಿರುಕುಳ ಮುಂದುವರೆದಿದೆ ಎಂದು ಅವರು ಹೇಳಿದರು. ಬುಧವಾರ (ಮಾ.18) ಬೆಳಗ್ಗೆ, ಆಕೆ ಹಣ ನೀಡಲು ನಿರಾಕರಿಸಿದ ನಂತರ ದಂಪತಿಗಳ ನಡುವೆ ಜಗಳ ನಡೆದಿದ್ದು, ನಂತರ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮೊಂಡಲ್ ಅವರ ಕುಟುಂಬವು ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಅವರು ಮಧ್ಯಾಹ್ನದ ನಂತರ ಆಕೆಯ ಗಂಡನ ಮನೆಗೆ ಹೋಗಿದ್ದಾರೆ. ಆದರೆ ಮೊಂಡಲ್ ಸಿಗದೇ ಇದ್ದ ಕಾರಣ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಹಾಸಿಗೆಯ ಕೆಳಗೆ ಮರೆ ಮಾಡಿದ್ದ ಶವವನ್ನು ವಶಪಡಿಸಿಕೊಂಡರು.
ರಿಷಿಯು ತನ್ನ ಸೊಸೆ ಪೂಜಾಳಿಂದ ಹಣ ಕೇಳುತ್ತಿದ್ದರು. ಅವರು ನಮ್ಮ ಒಪ್ಪಿಗೆಯಿಲ್ಲದೆ ಪರಸ್ಪರ ಮದುವೆಯಾದರು. ನಮ್ಮ ಕುಟುಂಬದ ಯಾರೂ ಅವರನ್ನು ಸ್ವೀಕರಿಸಿರಲಿಲ್ಲ. ನಂತರ ಅವಳು ಗರ್ಭಿಣಿಯಾಗಿದ್ದಾಳೆಂದು ನಮಗೆ ತಿಳಿಯಿತು. ಆ ನಂತರ ನಾವು ದಂಪತಿಗಳನ್ನು ಒಪ್ಪಿಕೊಂಡೆವು ಎಂದು ಮೃತ ಮಹಿಳೆಯ ಮಾವ ಗೌತಮ್ ಬಿಸ್ವಾಸ್ ತಿಳಿಸಿದರು.
ಆಕೆಯ ಪತಿ ಯಾವುದೇ ಕೆಲಸ ಮಾಡುವುದಿಲ್ಲ. ಆದ್ದರಿಂದ ಅವನು ಆಗಾಗ ಹಣಕ್ಕಾಗಿ ಬೇಡಿಕೆ ಇಡುತ್ತಾನೆ. ಫೋನ್ ಕರೆ ಬಂದ ನಂತರ, ನಾವು ಸ್ಥಳಕ್ಕೆ ತಲುಪಿದಾಗ ಶವ ಹಾಸಿಗೆಯ ಕೆಳಗೆ ಪತ್ತೆಯಾಗಿದೆ. ಪ್ರಕರಣ ಸಂಬಂಧ ಮೃತ ಮಹಿಳೆಯ ಪತಿ, ಅತ್ತೆ ಹಾಗೂ ಇತರರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.