ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Bollywood actor Tiger Shroff) ಅವರ ಕಾರಿನ ಮೇಲೆ ಇತ್ತೀಚೆಗೆ ನಡೆದ ಗುಂಡಿನ ದಾಳಿ (Tiger Shroff Firing Case) ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ರಿತಿಕ್ ಕುರ್ಮಿ ಅಲಿಯಾಸ್ ರೋಶನ್ ಎಂಬಾತ ವಿಚಾರಣೆ ವೇಳೆ ಅನೇಕ ಸ್ಪೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ. ರಾಪಿಡೋ ರೈಡರ್ (Rapido Rider) ಸೋಗಿನಲ್ಲಿ ತಾನು ಮುಂಬೈನಲ್ಲಿ (Mumbai) ಸೆಲೆಬ್ರಿಟಿಗಳ ಮೇಲೆ ಕಣ್ಣಿಟ್ಟಿದ್ದಾಗಿ ತಿಳಿಸಿದ್ದಾನೆ. ಈತ ಬಿಷ್ಣೋಯ್ ಗ್ಯಾಂಗ್ನ (Bishnoi Gang) ಸ್ಲೀಪರ್ ಸೆಲ್ ಆಗಿ ದಾಳಿಗೂ ಮುನ್ನ ಸೆಲೆಬ್ರಿಟಿಗಳ ಮನೆಗಳ ಬಗ್ಗೆ ಮಾಹಿತಿ ಕಲೆಹಾಕಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಈ ಕುರಿತು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜುಹು ಪ್ರದೇಶದ ಫುಟ್ಬಾಲ್ ಕ್ಲಬ್ನಿಂದ ಹೊರಡುತ್ತಿದ್ದ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಅಕ್ಟೋಬರ್ 18ರ ಸಂಜೆ ಏಳು ಗಂಟೆಯ ಸುಮಾರಿಗೆ ಮೂವರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ನಟ ಯಾವುದೇ ಅಪಾಯವಿಲ್ಲದೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಅವರ ಕಾರು ಚಾಲಕ ಮತ್ತು ಸ್ಥಳದಲ್ಲಿದ್ದ ಯುಟ್ಯೂಬ್ ವ್ಲಾಗರ್ ಉಮೇಶ್ ಚೌಹಾಣ್ ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಒಟ್ಟು ೧೦ ಮಂದಿಯನ್ನು ಬಂಧಿಸಲಾಗಿದೆ. ಈ ಕೃತ್ಯದ ಹಿಂದೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸಂಪರ್ಕವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ರಿತಿಕ್ ಕುರ್ಮಿ ಅಲಿಯಾಸ್ ರೋಶನ್ ಕಳೆದ ಒಂದು ವರ್ಷದಿಂದ ಡೆಲಿವರಿ ಏಜೆಂಟ್ ಮತ್ತು ಬೈಕ್-ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸೋಗಿನಲ್ಲಿ ನಗರದಾದ್ಯಂತ ಸಂಚರಿಸುತ್ತಿದ್ದನು. ಈ ಸಂದರ್ಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ವಾಸಿಸುವ ಪ್ರತಿಷ್ಠಿತ ಪ್ರದೇಶಗಳಲ್ಲಿ ಕಣ್ಗಾವಲು ನಡೆಸಿ ಆ ಸ್ಥಳಗಳ ವಿಡಿಯೊಗಳನ್ನು ಗ್ಯಾಂಗ್ನ ಸದಸ್ಯರಿಗೆ ಕಳುಹಿಸುತ್ತಿದ್ದನು. ಮುಂಬೈನಲ್ಲಿ ತನ್ನ ಖರ್ಚು-ವೆಚ್ಚಗಳನ್ನು ನಿಭಾಯಿಸಲು ರಿತಿಕ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಹಣ ಪಡೆಯುತ್ತಿದ್ದನು ಎಂದು ಪೊಲೀಸರು ಶಂಕಿಸಿದ್ದಾರೆ.
ಮುಂಬೈನಲ್ಲಿ ರಿತಿಕ್ನ ಚಲನವಲನಗಳ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಅಂಧೇರಿ ಪೂರ್ವದಲ್ಲಿನ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಆತ ಜುಹು ಮತ್ತು ಗೋರೆಗಾಂವ್ನಲ್ಲಿ ಕೆಲವು ತಿಂಗಳುಗಳ ಕಾಲ ವಾಸವಾಗಿದ್ದನು. ಅಲ್ಲಿ ಆತ ಆಧಾರ್ ಕಾರ್ಡ್ ಕೂಡ ಮಾಡಿಸಿದ್ದನು ಎನ್ನಲಾಗಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ಮೂಲದವನಾದ ಮತ್ತು ಮುಂಬೈನಲ್ಲಿ ವಾಸಿಸುತ್ತಿದ್ದ ರಿತಿಕ್ ಕುರ್ಮಿ ಬುಧವಾರ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾದ ಮೂವರು ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಹರಿಯಾಣದ ಸೋನಿಪತ್ನ ರೆಹಾನ್ ಅಲಿಯಾಸ್ ಸುಕ್ಕಾ ಮತ್ತು ಫೂಲ್ ಸಿಂಗ್ ಸೇರಿದಂತೆ ಮೂವರಿಗೆ ಅಕ್ಟೋಬರ್ 31ರವರೆಗೆ ಪೊಲೀಸ್ ಕಸ್ಟಡಿಯಲ್ಲಿರಿಸಲು ಆದೇಶಿಸಲಾಗಿದೆ.
ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಿದ ಆರೋಪಿ ಪಿಸ್ತೂಲ್, ಬ್ಯಾಗ್ ಹಿಡಿದು ಹೊಟೇಲ್ನಿಂದ ಹೊರಬಂದ ವಿಡಿಯೊ ವೈರಲ್
ಟೈಗರ್ ಶ್ರಾಫ್ ಮೇಲೆ ನಡೆದ ದಾಳಿಯ ಹೊಣೆಯನ್ನು ಗ್ಯಾಂಗ್ಸ್ಟರ್ ಅನಿಲ್ ಪಂಡಿತ್ ಹೊತ್ತುಕೊಂಡಿದ್ದಾನೆ. ಈತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸಹಚರ ಎನ್ನಲಾಗಿದೆ. ಅಮೆರಿಕದಲ್ಲಿ ಕುಳಿತು ದಾಳಿಯ ಯೋಜನೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.