ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿಗೂ ಮುನ್ನ ಶೂಟಿಂಗ್ ಅಭ್ಯಾಸ ಮಾಡಿದ್ದ ಆರೋಪಿಗಳು; ಹೊಟೇಲ್ನಲ್ಲಿ ಮಿಸ್ಫೈರ್ ಆಗಿದ್ದ ಗನ್
Tiger Shroff Firing Case: ಟೈಗರ್ ಶ್ರಾಫ್ ಕಾರಿನ ಮೇಲಿನ ಗುಂಡಿನ ದಾಳಿ ಪ್ರಕರಣದ ತನಿಖೆ ತೀವ್ರಗೊಂಡಿದೆ. ದಾಳಿಗೂ ಮುನ್ನ ಆರೋಪಿಗಳು ಫೈರಿಂಗ್ ತಾಲೀಮು ನಡೆಸಿದ್ದ ವಿಚಾರ ಬಹಿರಂಗವಾಗಿದ್ದು, ಹರಿಯಾಣದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಂಪರ್ಕದ ಶಂಕೆಯಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟೈಗರ್ ಶ್ರಾಫ್ ದಾಳಿ ನಡೆಸಿದ ಆರೋಪಿಗಳು ಮತ್ತು ಟೈಗರ್ ಶ್ರಾಫ್ (ಸಂಗ್ರಹ ಚಿತ್ರ) -
ಮುಂಬೈ, ಅ. 22: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ತೀವ್ರಗೊಂಡಿದ್ದು (Tiger Shroff Firing Case), ಆರೋಪಿಗಳು ಕೃತ್ಯಕ್ಕೂ ಮುನ್ನ ನಡೆಸಿರುವ ಪೂರ್ವ ಸಿದ್ಧತೆಗಳ ಕುರಿತು ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ. ದಾಳಿಗೆ ಮುಂಚಿತವಾಗಿ ಮುಂಬೈ ಸಮೀಪದ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಗುಂಡು ಹಾರಿಸಿ ತಾಲೀಮು ನಡೆಸಿದ್ದರು. ವಿಚಾರಣೆ ವೇಳೆ ಒಬ್ಬ ಆರೋಪಿ ಎರಡು ಸುತ್ತು ಹಾಗೂ ಮತ್ತೊಬ್ಬ ಒಂದು ಸುತ್ತು ಗುಂಡು ಹಾರಿಸಿದ್ದಾಗಿ ಬಾಯಿಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಅಂಧೇರಿಯ ಹೊಟೇಲ್ ಕೊಠಡಿಯಲ್ಲಿ ಬಂದೂಕನ್ನು ಪರಿಶೀಲಿಸುವಾಗ ಆಕಸ್ಮಿಕವಾಗಿ ಮಿಸ್ಫೈರ್ ಆಗಿ ಗುಂಡು ಮಂಚಕ್ಕೆ ತಗುಲಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಹರಿಯಾಣದಲ್ಲಿ ಮತ್ತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಈ ಹಿಂದೆ ವಶಕ್ಕೆ ಪಡೆದಿದ್ದ ಕುನಾಲ್, ಸುಮಿತ್, ರಾಧಾ ಹಾಗೂ ಬಬಿತಾ ಎಂಬ ನಾಲ್ವರು ಪ್ರಮುಖ ಆರೋಪಿಗಳನ್ನು ಮುಂಬೈಯ ಆ್ಯಂಟಿ ಎಕ್ಸ್ಟಾರ್ಶನ್ ಸೆಲ್ಗೆ ಕರೆತರಲಾಗಿದೆ. ಮಹಿಳಾ ಆರೋಪಿಗಳನ್ನು ಆಜಾದ್ ಮೈದಾನ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಕೃತ್ಯದ ಹಿಂದೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸಂಪರ್ಕವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಹರಿಯಾಣದ ಪಾಣಿಪತ್ ಮೂಲದ 32 ವರ್ಷದ ಗ್ಯಾಂಗ್ಸ್ಟರ್ ಅನಿಲ್ ಪಂಡಿತ್ ಸೂಚನೆಯ ಮೇರೆಗೆ ಈ ಇಡೀ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಪಂಡಿತ್ ಆದೇಶದಂತೆ ಅಮೃತಸರದಿಂದ ಬಂದೂಕು ಮತ್ತು ಇಪ್ಪತ್ತು ಜೀವಂತ ಗುಂಡುಗಳನ್ನು ತರಿಸಿಕೊಂಡಿದ್ದ ಆರೋಪಿಗಳು, ರೈಲಿನ ಮೂಲಕ ಮಹಿಳೆಯರ ನೆರವಿನಿಂದ ಶಸ್ತ್ರಾಸ್ತ್ರಗಳನ್ನು ಮುಂಬೈಗೆ ಸಾಗಿಸಿ ಶೂಟರ್ಗಳಿಗೆ ಹಸ್ತಾಂತರಿಸಿದ್ದರು. ಇತ್ತೀಚೆಗೆ ಬಂಧಿತನಾದ ಆರೋಪಿ ಶೂಟರ್ಗಳಿಗೆ ಸ್ಥಳೀಯವಾಗಿ ಅಗತ್ಯ ನೆರವು ಹಾಗೂ ಆಶ್ರಯ ಒದಗಿಸಿದ್ದನು.
ಟೈಗರ್ ಶ್ರಾಫ್ ಪ್ರಕರಣ: ಇಬ್ಬರು ಮಹಿಳೆಯರು ಸೇರಿದಂತೆ ಇನ್ನೂ ನಾಲ್ವರು ಬಂಧನ
ಅಕ್ಟೋಬರ್ 18ರ ಸಂಜೆ ಏಳು ಗಂಟೆಯ ಸುಮಾರಿಗೆ ಜುಹು ಪ್ರದೇಶದ ಫುಟ್ಬಾಲ್ ಕ್ಲಬ್ನಿಂದ ಹೊರಡುತ್ತಿದ್ದಾಗ ಟೈಗರ್ ಶ್ರಾಫ್ ಕಾರಿನ ಮೇಲೆ ಮೂವರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ನಟ ಯಾವುದೇ ಅಪಾಯವಿಲ್ಲದೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಅವರ ಕಾರು ಚಾಲಕ ಮತ್ತು ಸ್ಥಳದಲ್ಲಿದ್ದ ಯುಟ್ಯೂಬ್ ವ್ಲಾಗರ್ ಉಮೇಶ್ ಚೌಹಾಣ್ ಗಾಯಗೊಂಡಿದ್ದರು.
ಗಾಯಾಳು ಉಮೇಶ್ ಅವರಿಗೆ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಂಡನ್ನು ಹೊರತೆಗೆಯಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ. ದುಷ್ಕರ್ಮಿಗಳು ದಾಳಿಗೆ ಬಳಸಿದ್ದ ಬೈಕ್ ಅಂಧೇರಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಹೇಳಿಕೆಗಳು ಹಾಗೂ ಎಐ ನಿರ್ಮಿತ ವಿಡಿಯೊಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಶ್ರಾಫ್ ಅವರ ಅಧಿಕೃತ ತಂಡ ಎಚ್ಚರಿಕೆ ನೀಡಿದೆ.