ರಾಯ್‌ಪುರ, ಅ. 6: ತನಗಿಂತ ಕಿರಿಯ ವಯಸ್ಸಿನ ಯುವಕನ ವಿವಾಹ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ 22 ವರ್ಷದ ಯುವತಿಯೊಬ್ಬಳ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಛತ್ತೀಸ್‌ಗಢದ (Chhattisgarh) ಬಲೋಡ್ ಜಿಲ್ಲೆಯಲ್ಲಿ ಸಂಭವಿಸಿದೆ (Crime news). ಸೋಮವಾರ (ಅಕ್ಟೋಬರ್ 5) ಸಂಜೆ ಈ ಘಟನೆ ನಡೆದಿದೆ. ಇಬ್ಬರು ಆರೋಪಿಗಳನ್ನು 20 ವರ್ಷದ ಯಶ್ ಕುಮಾರ್ ಸೋಂಕರ್ ಮತ್ತು ಆತನ ಸ್ನೇಹಿತ ಕರಣ್ ಕುಂಜಮ್ (20) ಎಂದು ಗುರುತಿಸಲಾಗಿದೆ. ಸದ್ಯ ಕೃತ್ಯ ಎಸಗಿದ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ಗ್ರಂಥಾಲಯದಲ್ಲಿ ಓದಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯ ಮೇಲೆ ಆ್ಯಸಿಡ್ ಎರಚಲಾಗಿದೆ. ಆರಂಭದಲ್ಲಿ ಆಕೆಯನ್ನು ಬಲೋಡ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ರಾಯ್‌ಪುರದ ಡಿಕೆಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಕೆಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಯ ಕಿರುಚಾಟ ಕೇಳಿ ಹತ್ತಿರದ ನಿವಾಸಿಗಳು ಸಹಾಯ ಮಾಡಲು ಧಾವಿಸಿ ಪೊಲೀಸ್ ಅಧಿಕಾರಿಯೂ ಆಗಿರುವ ಆಕೆಯ ತಂದೆಗೆ ಕೂಡಲೇ ಮಾಹಿತಿ ನೀಡಿದರು.
ತನ್ನ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದರೂ ಸೋಂಕರ್ ಆಕೆಯನ್ನು ಮದುವೆಯಾಗಲು ಬಯಸಿದ್ದ. ಆಕೆ ಬೇರೆ ಪುರುಷನೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಅವನಿಗೆ ಅನುಮಾನವಿತ್ತು. ಇದರಿಂದ ಅಸಮಾಧಾನಗೊಂಡ ಸೋಂಕರ್ ಕುಂಜಮ್ ಜತೆ ಸೇರಿ ದಾಳಿ ಯೋಜಿಸಿದ್ದ ಎಂದು ಬಲೋದ್ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವ್ಹಾಣ್ ಹೇಳಿದ್ದಾರೆ.
ಅಸ್ಸಾಂ ವಿದ್ಯಾರ್ಥಿನಿ ನಿಮಿಷಾ ಕೊಲೆ ಆರೋಪಿ ಆಸಿಫ್ ಅಲಿ ಪರಾರಿಯಾಗಲು ಯತ್ನ; ಗುಂಡೇಟು
ಘಟನೆ ನಡೆಯುವ ಒಂದು ವಾರದ ಮೊದಲು ಇಬ್ಬರು ಆರೋಪಿಗಳು ನೆರೆಯ ದುರ್ಗ್ ಜಿಲ್ಲೆಯಿಂದ ಆ್ಯಸಿಡ್ ಖರೀದಿಸಿದ್ದರು ಮತ್ತು ಅಂದಿನಿಂದ ಯುವತಿಯ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಉಪವಿಭಾಗೀಯ ಪೊಲೀಸ್ ಅಧಿಕಾರಿ ವಿನಯ್ ಸಾಹು ನೇತೃತ್ವದ ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಪಟ್ಟಣದ ವಿವಿಧ ಭಾಗಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿತು. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ, ಪೊಲೀಸರು ಬಲೋಡ್ ಪಟ್ಟಣದ ಕುಂದೇರುಪಾರ ನಿವಾಸಿ ಸೋಂಕರ್‌ನನ್ನು ಗುರುತಿಸಿದರು.
ಸೋಂಕರ್ ಆರಂಭದಲ್ಲಿ ತನಿಖಾಧಿಕಾರಿಗಳನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ನಂತರ ಆ ಯುವತಿಯೊಂದಿಗೆ ತನಗೆ ಸಂಬಂಧವಿತ್ತು. ಆಕೆ ತನ್ನ ಮದುವೆಯ ಪ್ರಸ್ತಾವವನ್ನು ನಿರಾಕರಿಸಿದ್ದರಿಂದ ಕೋಪಗೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆಕೆ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅವನು ಶಂಕಿಸಿದ್ದಾಗಿ ಹೇಳಿದ್ದಾನೆ.
ಮೂರು ತಿಂಗಳ ಹಿಂದೆಯೇ ತಾನು ಮತ್ತು ಬಿಜಾಪುರ್ ನಿವಾಸಿ ಕುಂಜಮ್ ಆ್ಯಸಿಡ್ ದಾಳಿಗೆ ಯೋಜನೆ ರೂಪಿಸಿದ್ದಾಗಿ ಸೋಂಕರ್ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತೆ ಗ್ರಂಥಾಲಯದಿಂದ ಹಿಂತಿರುಗುತ್ತಿದ್ದಾಗ, ಸೋಂಕರ್ ನಿರ್ದೇಶನದ ಮೇರೆಗೆ ಕುಂಜನ್ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.