ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಸ್ಸಾಂ ವಿದ್ಯಾರ್ಥಿನಿ ನಿಮಿಷಾ ಕೊಲೆ ಆರೋಪಿ ಆಸಿಫ್ ಅಲಿ ಪರಾರಿಯಾಗಲು ಯತ್ನ; ಗುಂಡೇಟು

Female Student Death Case: ಅಸ್ಸಾಂನ ಗುವಾಹಟಿ ವಿಶ್ವವಿದ್ಯಾಲಯದ 22 ವರ್ಷದ ವಿದ್ಯಾರ್ಥಿನಿ ನಿಮಿಷಾ ಠಾಕುರಿಯಾ ಸಾವಿನ ಪ್ರಕರಣದ ಪ್ರಮುಖ ಆರೋಪಿ ಆಸಿಫ್ ಅಲಿ, ಪೊಲೀಸ್ ಗುಂಡೇಟಿಗೆ ಗಾಯಗೊಂಡಿದ್ದಾನೆ. 26 ವರ್ಷದ ಆರೋಪಿ ಆಸಿಫ್‌ನ ಬಲಗಾಲಿಗೆ ಗುಂಡೇಟು ತಗುಲಿದ್ದು, ಆತನನ್ನು ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿ ಆಸಿಫ್ ಅಲಿಗೆ ಗುಂಡೇಟು

ಮೃತಪಟ್ಟ ವಿದ್ಯಾರ್ಥಿನಿ ನಿಮಿಷಾ ಹಾಗೂ ಆರೋಪಿ ಆಸಿಫ್ ಅಲಿ (ಸಂಗ್ರಹ ಚಿತ್ರ) -

Priyanka P
Priyanka P Oct 6, 2026 6:28 PM

ಗುವಾಹಟಿ, ಅ. 6: ಅಸ್ಸಾಂನ ಗುವಾಹಟಿ ವಿಶ್ವವಿದ್ಯಾಲಯದ (Gauhati University) 22 ವರ್ಷದ ವಿದ್ಯಾರ್ಥಿನಿ ನಿಮಿಷಾ ಠಾಕುರಿಯಾ ಸಾವಿನ ಪ್ರಕರಣದ ಪ್ರಮುಖ ಆರೋಪಿ ಆಸಿಫ್ ಅಲಿ ಪೊಲೀಸ್ ಗುಂಡೇಟಿಗೆ ಗಾಯಗೊಂಡಿದ್ದಾನೆ. ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆತನ ಮೇಲೆ ಗುವಾಹಟಿಯಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ (crime news). 26 ವರ್ಷದ ಆರೋಪಿ ಆಸಿಫ್‌ನ ಬಲಗಾಲಿಗೆ ಗುಂಡೇಟು ತಗುಲಿದ್ದು, ಆತನನ್ನು ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸಿಫ್‌ನ ಎಂಟು ದಿನಗಳ ಪೊಲೀಸ್ ಕಸ್ಟಡಿ ಮಂಗಳವಾರ ಮುಕ್ತಾಯಗೊಳ್ಳಬೇಕಿತ್ತು. ಬಳಿಕ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿತ್ತು.

ಮಂಗಳವಾರ (ಅಕ್ಟೋಬರ್‌ 6) ಬೆಳಗ್ಗೆ 5.35ರ ಸುಮಾರಿಗೆ ಪೊಲೀಸರು ಆಸಿಫ್‌ನನ್ನು ಆಸ್ಪತ್ರೆಗೆ ದಾಖಲಿಸಿದರು. ಆತನ ಬಲಗಾಲಿನ ಪಾದದ ಸುತ್ತ ಎರಡು ಗುಂಡುಗಳ ಗಾಯಗಳು ಪತ್ತೆಯಾಗಿದ್ದು, ದೇಹದ ಬೇರೆಡೆ ಯಾವುದೇ ಗಾಯಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಗಾಯಗಳಿಂದಾಗಿ ಕೀಲು ಮತ್ತು ಮೂಳೆಗಳಿಗೆ ಸ್ವಲ್ಪ ಹಾನಿಯಾಗಿದ್ದರೂ, ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 25ರಂದು ಗುವಾಹಟಿಯ ಅಜಾರಾ ಪ್ರದೇಶದ ರುದ್ರನ ಕಿಚನ್ ಹೋಂಸ್ಟೇಯಲ್ಲಿ ನಿಮಿಷಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ನಿಮಿಷಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಗುವಾಹಾಟಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿದ್ಯಾರ್ಥಿನಿ ಮತ್ತು ಧಾರಾಪುರ ನಿವಾಸಿಯಾಗಿದ್ದ ಅವರು ಸೆಪ್ಟೆಂಬರ್ 20ರಿಂದ ಹೋಂಸ್ಟೇಯಲ್ಲಿ ಆಸಿಫ್‌ ವಾಸಿಸುತ್ತಿದ್ದರು ಎನ್ನಲಾಗಿದೆ.

ಹಣಕಾಸಿನ ವಿಚಾರದಲ್ಲಿ ವಿವಾದ: ಬೆಂಗಳೂರಿನಲ್ಲಿ ಜಿಮ್ ತರಬೇತುದಾರನ ಕೊಂದ ಸಹೋದ್ಯೋಗಿಗಳು

ಆಸಿಫ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಹೋಂಸ್ಟೇಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ಆಸಿಫ್‌ನ ಈ ಹೇಳಿಕೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ. ʼʼಆ ಹೇಳಿಕೆ ನಿಜವೋ ಸುಳ್ಳೋ ಎಂಬುದು ತನಿಖೆಯ ಮೂಲಕ ನಿರ್ಧರಿಸಲ್ಪಡುತ್ತದೆ. ನಾವು ಯಾರ ಹೇಳಿಕೆಯನ್ನೂ ಕುರುಡಾಗಿ ನಂಬುವುದಿಲ್ಲʼʼ ಎಂದು ಡಿಸಿಪಿ ವೆಸ್ಟ್ ಬೋಲಿನ್ ಡಿಯೋರಿ ತಿಳಿಸಿದರು.

ಮೂವರು ಪುರುಷರು ನಿಮಿಷಾಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿಂದ ಆಕೆಯನ್ನು ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲು ಶಿಫಾರಸು ಮಾಡಲಾಗಿತ್ತು. ಆಸಿಫ್ ಜತೆಗಿದ್ದ ಉಳಿದ ಇಬ್ಬರು ಪುರುಷರು ಹೋಂಸ್ಟೇಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಿಮಿಷಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು, ಏನಾಯಿತು ಎಂಬುದನ್ನು ತಿಳಿಯಲು ಆಕೆಯ ವಸ್ತುಗಳು ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ.

ತಮ್ಮ ಮಗ ಮತ್ತು ನಿಮಿಷಾ ಸುಮಾರು ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಆಸಿಫ್‌ನ ತಂದೆ ಆಶಿಕ್ ಅಲಿ ತಿಳಿಸಿದ್ದಾರೆ. ಘಟನೆ ನಡೆದ ದಿನ ನಿಮಿಷಾ ಆಸಿಫ್‌ಗೆ ಕರೆ ಮಾಡಿ, ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದಳು ಎಂದು ಅವರು ಹೇಳಿದ್ದಾರೆ. ಈದ್ ಹಬ್ಬದ ಸಂದರ್ಭದಲ್ಲಿ ನಿಮಿಷಾ ಒಮ್ಮೆ ತಮ್ಮ ಮನೆಗೆ ಬಂದಿದ್ದಳು ಎಂದು ಆಸಿಫ್‌ನ ತಾಯಿ ತಿಳಿಸಿದ್ದಾರೆ. ತಮ್ಮ ಮಗ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ಜೀವನೋಪಾಯಕ್ಕಾಗಿ ಕೆಲವೊಮ್ಮೆ ಬೈಕ್‌ ಟ್ಯಾಕ್ಸಿ ಚಲಾಯಿಸುತ್ತಿದ್ದ ಎಂದು ಅವರು ಹೇಳಿದ್ದಾರೆ.

ನಿಮಿಷಾಗೆ ನ್ಯಾಯ ಸಿಗಬೇಕು. ತನಿಖೆಯಲ್ಲಿ ತನ್ನ ಮಗ ತಪ್ಪಿತಸ್ಥ ಎಂದು ಸಾಬೀತಾದರೆ ಆತನಿಗೆ ಶಿಕ್ಷೆಯಾಗಬೇಕು ಎಂದು ಆಸಿಫ್‌ನ ತಾಯಿ ಹೇಳಿದ್ದಾರೆ.