ಭುವನೇಶ್ವರ, ಸೆ. 22: ಬಿಹಾರದಲ್ಲಿ ಬಾಲಕಿಯ ಮೇಲೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಅಂತಹದ್ದೇ ಮತ್ತೊಂದು ಘಟನೆ ಒಡಿಶಾದ (Odisha) ಧೆಂಕನಲ್ ಜಿಲ್ಲೆಯಲ್ಲಿ ನಡೆದಿದೆ. ದಂಪತಿಯ ಮೇಲೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿ, ಕಿರುಕುಳ ನೀಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಒಡಿಶಾದ ಧೆಂಕನಲ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣ ಕಪಿಲಾಶ್ ಕಡೆಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ದಂಪತಿ ಬೈಕ್‌ನಲ್ಲಿ ಆ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದಾಗ ಜನರ ಗುಂಪೊಂದು ಅವರನ್ನು ತಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಹಲವು ಜನರು ಇಬ್ಬರನ್ನು ಸುತ್ತುವರಿದಿದ್ದು, ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇತರ ಕೆಲವರು, ಮಹಿಲೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ಕಂಡು ಬಂದಿದೆ. ಸುತ್ತಮತ್ತಲು ನೆರೆದಿದ್ದ ಜನರಲ್ಲಿ ತಮ್ಮನ್ನು ಬಿಟ್ಟುಬಿಡುವಂತೆ ಗೋಗರೆದಿದ್ದಾಳೆ. ಆದರೆ, ಗುಂಪು ಕಿರುಕುಳ ಮುಂದುವರಿಸಿದೆ.
ಇಲ್ಲಿದೆ ವಿಡಿಯೊ:
ಆ ದಂಪತಿಯನ್ನು ಗುಂಪು ಏಕೆ ತಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೆಯೇ, ಆ ಗುಂಪಿನಲ್ಲಿದ್ದವರಿಗೆ ಮತ್ತು ದಂಪತಿಗೆ ಈ ಹಿಂದೆ ಪರಿಚಯವಿತ್ತೇ ಅಥವಾ ವಿಡಿಯೊ ಚಿತ್ರೀಕರಣ ಆರಂಭವಾಗುವ ಮೊದಲು ಅವರ ನಡುವೆ ಯಾವುದಾದರೂ ಮಾತುಕತೆ, ವಾಗ್ವಾದ ಅಥವಾ ವಿವಾದ ನಡೆದಿತ್ತೇ ಎಂಬುದೂ ಇನ್ನೂ ಖಚಿತವಾಗಿಲ್ಲ.
ಜಮುಯಿ ಬಾಲಕಿ ಮೇಲಿನ ದೌರ್ಜನ್ಯ; ಆರೋಪಿ ನಂದನ್ ಯಾದವ್‌ಗೆ ಎನ್‌ಕೌಂಟರ್‌ನಲ್ಲಿ ಕಾಲಿಗೆ ಗುಂಡು
ಇನ್ನು ಘಟನೆಗೆ ಸಂಬಂಧಿಸಿದ ಕೆಲವು ವ್ಯಕ್ತಿಗಳ ಗುರುತು ಪತ್ತೆಯಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೋಂಡಿಯಾ ಬ್ಲಾಕ್‌ನ ಇನ್‌ಸ್ಪೆಕ್ಟರ್-ಇನ್-ಚಾರ್ಜ್ (IIC) ಪ್ರತಾಪ್ ದಲೇಯಿ ತಿಳಿಸಿದ್ದಾರೆ.
ಬಿಹಾರದ ಜಮುಯಿಯಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಯ ಮೇಲೆ ನಡೆದ ಆಘಾತಕಾರಿ ದೌರ್ಜನ್ಯ ಘಟನೆ ನಡೆದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಸೋಮವಾರ (ಸೆಪ್ಟೆಂಬರ್ 21) ಮೂವರನ್ನು ಬಂಧಿಸಿದ್ದಾರೆ. ಇಬ್ಬರು ಅಪ್ರಾಪ್ತ ವಯಸ್ಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಇತರ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಈ ಘಟನೆ ಸೆಪ್ಟೆಂಬರ್ 19ರ ಸಂಜೆ ನಡೆದಿದೆ ಎಂದು ಜಮುಯಿ ಪೊಲೀಸ್ ವರಿಷ್ಠಾಧಿಕಾರಿ ಬಿಶ್ವಜೀತ್ ದಯಾಳ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲರನ್ನು ಗುರುತಿಸಲು ಮತ್ತು ಬಂಧಿಸಲು ಮಹಿಳಾ ಪೊಲೀಸ್ ಅಧಿಕಾರಿ ನೇತೃತ್ವದ ವಿಶೇಷ ತನಿಖಾ ತಂಡವು ದಾಳಿ ನಡೆಸುತ್ತಿದೆ.