ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಒಡಿಶಾ ಕಾಡಿನಲ್ಲಿ ಸ್ಥಳೀಯವಲ್ಲದ 5 ಅಪರೂಪದ ಒರಾಂಗುಟಾನ್ ಪತ್ತೆ; ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಜಾಲದ ಕೈವಾಡ ಶಂಕೆ

Orangutans Found In Odisha Forest: ಸ್ಥಳೀಯವಲ್ಲದ, ವಿದೇಶ ತಳಿಯ ಐದು ಒರಾಂಗುಟಾನ್‌ಗಳು ಒಡಿಶಾದ ಬಾಲಸೋರ್ ಜಿಲ್ಲೆಯ ಬಿಚಿತ್ರಾಪುರ ಅರಣ್ಯದಲ್ಲಿ ಪತ್ತೆಯಾಗಿದ್ದು, ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಜಾಲದ ಕೈವಾಡ ಇದರ ಹಿಂದಿರುವ ಶಂಕೆ ವ್ಯಕ್ತವಾಗಿದೆ. WCCB ತನಿಖೆಗೆ ಮನವಿ ಮಾಡಲಾಗಿದ್ದು, ಸದ್ಯ ಪ್ರಾಣಿಗಳ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.

ಒಡಿಶಾ ಕಾಡಿನಿಂದ 5 ಒರಾಂಗುಟಾನ್‌ಗಳ ರಕ್ಷಣೆ

ಒಡಿಶಾ ಕಾಡಿನಲ್ಲಿ 5 ಒರಾಂಗುಟಾನ್‌ಗಳ ರಕ್ಷಣೆ -

Profile
Sushmitha Jain Sep 8, 2026 10:22 PM

ಭುವನೇಶ್ವರ, ಸೆ. 8: ಭಾರತಕ್ಕೆ ಸ್ಥಳೀಯವಲ್ಲದ ಹಾಗೂ ತೀವ್ರ ಅಳಿವಿನಂಚಿನಲ್ಲಿರುವ ಐದು ಒರಾಂಗುಟಾನ್‌ಗಳನ್ನು(Orangutans) ಒಡಿಶಾದ ಬಾಲಸೋರ್ (Balasore) ಜಿಲ್ಲೆಯ ಬಿಚಿತ್ರಾಪುರ ಅರಣ್ಯ ಪ್ರದೇಶದಿಂದ ಅರಣ್ಯ ಇಲಾಖೆ ರಕ್ಷಿಸಿದೆ. ಈ ಪ್ರಾಣಿಗಳು ಅಚಾನಕ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಜಾಲದ ಕೈವಾಡವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅರಣ್ಯ ಗಸ್ತು ತಂಡವು ಮಂಗಳವಾರ ಬೆಳಗ್ಗೆ ಐದು ಒರಾಂಗುಟಾನ್‌ಗಳನ್ನು ರಕ್ಷಿಸಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಗಣೇಶ್ ರಾಮ್ ಸಿಂಗ್‌ಖುಂಟಿಯಾ ತಿಳಿಸಿದ್ದಾರೆ.

ಒರಾಂಗುಟಾನ್‌ಗಳು ಭಾರತದಲ್ಲಿ ಸ್ವಾಭಾವಿಕವಾಗಿ ಕಂಡುಬರುವುದಿಲ್ಲ. ಮಲೇಷ್ಯಾ, ಇಂಡೋನೇಷ್ಯಾ, ಬೋರ್ನಿಯೊ ಹಾಗೂ ಸುಮಾತ್ರಾದ ಆಗ್ನೇಯ ಏಷ್ಯಾದ ಮಳೆಕಾಡುಗಳಲ್ಲಿ ಅವು ಹೆಚ್ಚಾಗಿ ಕಂಡುಬರುತ್ತವೆ. ಬಾಲಸೋರ್ ಜಿಲ್ಲೆಯ ಕಾಡಿನಲ್ಲಿ ಅವುಗಳನ್ನು ಯಾರೋ ಬಿಟ್ಟುಹೋಗಿರುವ ಸಾಧ್ಯತೆಯಿದ್ದು, ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಜಾಲದ ಬಗ್ಗೆ ಅನುಮಾನವಿದೆ ಎಂದು ಸಚಿವರು ಹೇಳಿದ್ದಾರೆ.

ಒಡಿಶಾ ಕಾಡಿನಲ್ಲಿ ಒರಾಂಗುಟಾನ್‌ ಪತ್ತೆ:



ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಒರಾಂಗುಟಾನ್‌ನ ಬೆಲೆ ಸುಮಾರು ₹20ರಿಂದ ₹25 ಲಕ್ಷ ಇರಬಹುದು ಎಂದು ಅವರು ತಿಳಿಸಿದ್ದಾರೆ. ಅವುಗಳನ್ನು ವಿಮಾನ, ರೈಲು ಅಥವಾ ಜಲಮಾರ್ಗದ ಮೂಲಕ ಒಡಿಶಾಕ್ಕೆ ತರಲಾಗಿರಬಹುದು ಎಂಬ ಶಂಕೆಯಿದೆ.

2027ಕ್ಕೆ ಸ್ವದೇಶಿ ನಿರ್ಮಿತ ಬುಲೆಟ್ ರೈಲು ಪ್ರಾಯೋಗಿಕ ಸಂಚಾರ

ಘಟನೆಯ ಕುರಿತು ತನಿಖೆ ನಡೆಸುವಂತೆ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋಗೆ (WCCB) ರಾಜ್ಯ ಸರ್ಕಾರ ಮನವಿ ಮಾಡಿದೆ. ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಹಾಗೂ ಬಂದರುಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯರ ತಂಡ ಸ್ಥಳಕ್ಕೆ ತೆರಳಿ ಒರಾಂಗುಟಾನ್‌ಗಳ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದೆ. ಸದ್ಯ ಐದು ಪ್ರಾಣಿಗಳೂ ಆರೋಗ್ಯವಾಗಿದ್ದು, ಆಹಾರ ಸೇವಿಸುತ್ತಿವೆ ಎಂದು ಬಾಲಸೋರ್ ಡಿಎಫ್‌ಒ ಪ್ರತಿಕ್ ಪ್ರಕಾಶ್ ಇಂದಲ್ಕರ್ ತಿಳಿಸಿದ್ದಾರೆ.

ಅಗತ್ಯ ವೀಕ್ಷಣೆ ಪೂರ್ಣಗೊಂಡ ಬಳಿಕ ಅವುಗಳನ್ನು ಭುವನೇಶ್ವರದ ನಂದನ್‌ಕಾನನ್ ಮೃಗಾಲಯಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಒರಾಂಗುಟಾನ್‌ಗಳನ್ನು ನೋಡಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಪ್ರದೇಶಕ್ಕೆ ಆಗಮಿಸಿದ್ದಾರೆ. ಜನರ ಉಪಸ್ಥಿತಿಯಿಂದ ಪ್ರಾಣಿಗಳು ಯಾವುದೇ ತೊಂದರೆಗೆ ಒಳಗಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅವುಗಳಿಗೆ ತೊಂದರೆ ನೀಡದಂತೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಒರಾಂಗುಟಾನ್‌ಗಳು ಮುಖ್ಯವಾಗಿ ಹಣ್ಣುಗಳನ್ನು ತಿನ್ನುತ್ತವೆ. ಇದಲ್ಲದೆ ಎಲೆಗಳು, ಮರದ ತೊಗಟೆ, ಕೀಟಗಳು ಹಾಗೂ ಪಕ್ಷಿಗಳ ಮೊಟ್ಟೆಗಳನ್ನೂ ಆಹಾರವಾಗಿ ಸೇವಿಸುತ್ತವೆ.