ಒಡಿಶಾ: ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಪೊಂದು ಥಳಿಸಿ ಕೊಂದಿರುವ ಘಟನೆ ಬುಧವಾರ ಒಡಿಶಾದ ಖೋರ್ಧಾ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಕಾನ್‌ಸ್ಟೆಬಲ್ ಸೌಮ್ಯ ರಂಜನ್ ಸ್ವೈನ್ ಅವರನ್ನು ಕಟ್ಟಿ ಹಾಕಿ ಗುಂಪೊಂದು ಥಳಿಸಿ ಕೊಂದಿದೆ. ಇದು ಈಗ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು,ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸೌಮ್ಯ ರಂಜನ್ ಸ್ವೈನ್ ಅವರು ಕಳೆದ 12 ವರ್ಷಗಳಿಂದ ಜಿಆರ್‌ಪಿ ಕಟಕ್‌ನಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಖೋರ್ಧಾ ಜಿಲ್ಲೆಯ ಬಲಿಯಾಂತ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬೆನುಪುರ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಸೌಮ್ಯ ರಂಜನ್ ಸ್ವೈನ್ ಅವರು ಸಹೋದ್ಯೋಗಿ ಓಂ ಪ್ರಕಾಶ್ ರೌತ್ ಅವರೊಂದಿಗೆ ಅಧಿಕೃತ ಕಾರ್ಯದ ನಿಮಿತ್ತ ಹಿರಿಯ ರೈಲ್ವೆ ಅಧಿಕಾರಿಯನ್ನು ಭೇಟಿಯಾಗಲು ಪ್ರಯಾಣಿಸುತ್ತಿದ್ದ ವೇಳೆ ಗುಂಪೊಂದು ಅವರನ್ನು ಕೊಂದು ಹಾಕಿದೆ ಎನ್ನಲಾಗಿದೆ.
ಟಿಸಿಎಸ್ ಮತಾಂತರ ಪ್ರಕರಣ; ಕೊನೆಗೂ ಸಿಕ್ಕಿಬಿದ್ದ ಕಿಂಗ್‌ಪಿನ್ ನಿದಾ ಖಾನ್
ಸ್ಥಳೀಯರು ಮಹಿಳೆಯರಿಬ್ಬರು ಸೌಮ್ಯ ರಂಜನ್ ವಿರುದ್ಧ ಅನುಚಿತ ಹೇಳಿಕೆಗಳನ್ನು ನೀಡಿದ್ದು, ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಬೈಕ್ ನಲ್ಲಿ ಬಂದ ಪೊಲೀಸ್ ಅಧಿಕಾರಿ ಸೌಮ್ಯ ರಂಜನ್ ಹಾಗೂ ಇನ್ನೊಬ್ಬರು ಮಹಿಳೆಯರನ್ನು ಹೊಡೆದು ಸ್ವಲ್ಪ ದೂರ ಎಳೆದೊಯ್ದಿದ್ದಾರೆ ಎಂದು ಅವರು ಆರೋಪಿಸಿದ್ದರು.
ಈ ಸುದ್ದಿ ತೀವ್ರವಾಗಿ ಪ್ರದೇಶದಲ್ಲಿ ಹರಡಿದ್ದು, ಇದರಿಂದ ದೊಡ್ಡ ಜನ ಸಮೂಹವೇ ಸೇರಿಕೊಂಡಿತ್ತು. ಬಳಿಕ ಗುಂಪೊಂದು ಬೈಕ್ ಅನ್ನು ಅಡ್ಡಗಟ್ಟಿ ಸೌಮ್ಯ ರಂಜನ್ ಮೇಲೆ ಹಲ್ಲೆ ನಡೆಸಿದರು. ಇದರಿಂದ ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಜೊತೆಗಿದ್ದ ಇನ್ನೋರ್ವ ಸಿಬ್ಬಂದಿ ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಸೌಮ್ಯ ರಂಜನ್ ಅವರ ಕುಟುಂಬ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ಮುಂದೆಯೇ ಮಗನನ್ನು ಹೊಡೆದು ಕೊಂದರೂ ಯಾರೂ ಕೂಡ ಆತನನ್ನು ಉಳಿಸಲು ಮುಂದೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಮೇಲೆ ನಡೆಸಿರುವ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಉಪ ಆಯುಕ್ತ ಜಗಮೋಹನ್ ಮೀನಾ, ಘಟನೆಯ ಕುರಿತು ಎರಡು ಕಡೆಯವರು ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಲಾಗಿದೆ. ಸ್ಥಳೀಯರು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತದೆ. ಸದ್ಯ ಘಟನೆಯ ಕುರಿತು ಏನೂ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವವರನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.