ಟಿಸಿಎಸ್ ಮತಾಂತರ ಪ್ರಕರಣ; ಕೊನೆಗೂ ಸಿಕ್ಕಿಬಿದ್ದ ಕಿಂಗ್‌ಪಿನ್ ನಿದಾ ಖಾನ್
ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಮತ್ತು ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಅಮಾನತುಗೊಂಡ ಟಿಸಿಎಸ್ ಉದ್ಯೋಗಿ ನಿದಾ ಖಾನ್‌ಳನ್ನು ಗುರುವಾರ ತಡರಾತ್ರಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ. ಬರೋಬ್ಬರಿ 40 ದಿನಗಳ ಬಳಿಕ ಆಕೆಯ ಬಂಧನವಾಗಿದೆ.
ಸಂಗ್ರಹ ಚಿತ್ರ -
ಮುಂಬೈ: ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಮತ್ತು ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಅಮಾನತುಗೊಂಡ ಟಿಸಿಎಸ್ ಉದ್ಯೋಗಿ (Nashik TCS Conversion Case) ನಿದಾ ಖಾನ್‌ಳನ್ನು ಗುರುವಾರ ತಡರಾತ್ರಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ. ನಾಸಿಕ್ ಎಸ್‌ಐಟಿ, ಛತ್ರಪತಿ ಸಂಭಾಜಿನಗರ ಅಪರಾಧ ವಿಭಾಗ ಮತ್ತು ಛತ್ರಪತಿ ಸಂಭಾಜಿನಗರ ಪೊಲೀಸ್ ಆಯುಕ್ತರು ಜಂಟಿ ಕಾರ್ಯಾಚರಣೆ ನಡೆಸಿ ಆಕೆಯನ್ನು ಬಂಧಿಸಿದ್ದಾರೆ.
ಖಾನ್ ಕಳೆದ ನಾಲ್ಕು ದಿನಗಳಿಂದ ನರೇಗಾಂವ್‌ನ ಕೈಸರ್ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ಪೊಲೀಸರು ಫ್ಲಾಟ್ ಮೇಲೆ ನಿಗಾ ಇಟ್ಟಿದ್ದರು. ಪ್ಲಾಟ್‌ನಲ್ಲಿ ನಿದಾ ತನ್ನ ಪೋಷಕರು, ಸಹೋದರ ಮತ್ತು ಚಿಕ್ಕಮ್ಮನೊಂದಿಗೆ ವಾಸವಿದ್ದಳು ಎಂದು ತಿಳಿದು ಬಂದಿದೆ. ಬಂಧನದ ಬಳಿಕ ಆಕೆಯನ್ನು ನ್ಯಾಯಾಧೀಶರ ನಿವಾಸದಲ್ಲಿ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಗರ್ಭಧಾರಣೆಯನ್ನು ಬಂಧನ ಪೂರ್ವ ರಕ್ಷಣೆಗೆ ಆಧಾರವಾಗಿ ಉಲ್ಲೇಖಿಸಿದ್ದರೂ, ಕೋರ್ಟ್ ಆಕೆಗೆ ವಿನಾಯಿತಿ ನೀಡಿಲ್ಲ. ಪ್ರಾಸಿಕ್ಯೂಷನ್ ಪ್ರಕಾರ, ಖಾನ್ ಮಹಿಳಾ ಸಹೋದ್ಯೋಗಿಗಳಿಗೆ ಇಸ್ಲಾಮಿಕ್ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಳು. ಇದರಲ್ಲಿ ಡ್ರೆಸ್ಸಿಂಗ್ ಮತ್ತು ಆಹಾರ ಪದ್ಧತಿಗಳ ಬದಲಾವಣೆ ಸಹ ಸೇರಿದೆ.
ಆಕೆ ತನ್ನ ಹೆಸರನ್ನು ಬದಲಾವಣೆ ಮಾಡಿಕೊಂಡು ಮಲೇಷಿಯಾಕ್ಕೆ ತೆರಳುವ ಯೋಜನೆ ರೂಪಿಸಿಕೊಂಡಿದ್ದಳು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪೊಲೀಸರು ಮೊಬೈಲ್ ಫೋನ್ ಮತ್ತು ಡೈರಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಬಗೆದಷ್ಟು ಬಯಲಾಗುತ್ತಿದೆ TCS ಮತಾಂತರ ದಂಧೆ: ಲೈಂಗಿಕ ಕಿರುಕುಳ, ಮತಾಂತರದ ಬೃಹತ್ ಜಾಲ ಬಯಲು; ಬೆಚ್ಚಿಬಿದ್ದ ದೇಶ!
ಏನಿದು ಪ್ರಕರಣ?
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನಾಸಿಕ್ ಶಾಖೆಯ ಹಲವು ಮಹಿಳಾ ಉದ್ಯೋಗಿಗಳು ಲೈಂಗಿಕ ಕಿರುಕುಳ ಮತ್ತು ಮತಾಂತರದ ಆರೋಪ ಮಾಡಿದ್ದು, ಇದು ಮಹಾರಾಷ್ಟ್ರದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಎಂಟು ಮಹಿಳಾ ಉದ್ಯೋಗಿಗಳು ನೀಡಿದ ದೂರಿನ ಮೇರೆಗೆ ಹಲವು ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ನಿಬಂಧನೆಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅತ್ಯಾಚಾರ, ಲೈಂಗಿಕ ಕಿರುಕುಳ, ಮಹಿಳಾ ಘನತೆಗೆ ಧಕ್ಕೆ ತರುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದ್ದು, ಸದ್ಯ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 26 ರಿಂದ ಏಪ್ರಿಲ್ 3 ರ ನಡುವೆ ಒಟ್ಟು ಒಂಬತ್ತು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.