ಅಮರಾವತಿ, ಮಾ. 16: ಆಂಧ್ರ ಪ್ರದೇಶದ (Andhra Pradesh) ಚಿತ್ತೂರು (Chittoor) ಜಿಲ್ಲೆಯ ಪುಂಗನೂರು (Punganuru) ಪಟ್ಟಣದಲ್ಲಿ ಮೆಕ್ಯಾನಿಕ್ ನೀಡಿದ ಒಂದು ತಪ್ಪು ಸಲಹೆಯಿಂದಾಗಿ ಒಂದೇ ಕುಟುಂಬದ ನಾಲ್ವರು ನಿದ್ದೆಯಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ರಾತ್ರಿ ಇಡೀ ಚಾಲನೆಯಲ್ಲಿದ್ದ ಬೈಕ್‌ನಿಂದ ಹೊರಬಂದ ಕಾರ್ಬನ್ ಮೊನಾಕ್ಸೈಡ್ (Carbon Monoxide) ವಿಷಗಾಳಿಯು ಗಾಢ ನಿದ್ದೆಯಲ್ಲಿದ್ದ ಎಂಟು ವರ್ಷದ ಅವಳಿ ಹೆಣ್ಣು ಮಕ್ಕಳು, ಅವರ ಹದಿನೈದು ವರ್ಷದ ಸಹೋದರ ಮತ್ತು ಅವರ ಅಜ್ಜನ ಪ್ರಾಣವನ್ನು ಬಲಿ ಪಡೆದಿದೆ.
ಹೇರ್ ಸಲೂನ್ ನಡೆಸುತ್ತಿರುವ ಮುರಳಿ ಇತ್ತೀಚೆಗಷ್ಟೇ ತಮ್ಮ ಬೈಕ್ ಅನ್ನು ರಿಪೇರಿ ಮಾಡಿಸಿದ್ದರು. ಮೆಕ್ಯಾನಿಕ್ ಎಂಜಿನ್ ಟ್ಯೂನ್ ಮಾಡಿದ ನಂತರ, ಅದರ ಕಾರ್ಯಕ್ಷಮತೆ ಸರಿಯಾಗಲು ಬೈಕ್ ಅನ್ನು ಇಡೀ ರಾತ್ರಿ ಚಾಲನೆಯಲ್ಲಿಯೇ (Running mode) ಇಡುವಂತೆ ಮುರಳಿ ಅವರಿಗೆ ಮೆಕ್ಯಾನಿಕ್ ತಿಳಿಸಿದ್ದರು. ಮೆಕ್ಯಾನಿಕ್ ಮಾತನ್ನು ಗಂಭೀರವಾಗಿ ಪರಿಗಣಿಸಿದ ಮುರಳಿ, ಶನಿವಾರ (ಮಾ. 14) ರಾತ್ರಿ ತಮ್ಮ ಮನೆಯ ಒಳಗಡೆಯೇ ಬೈಕ್ ನಿಲ್ಲಿಸಿ ಎಂಜಿನ್ ಆನ್ ಮಾಡಿ ಮಲಗಿದ್ದರು. ಮುರಳಿ ಮತ್ತು ಅವರ ಪತ್ನಿ ಮನೆಯ ತಾರಸಿಯ ಮೇಲೆ ಮಲಗಲು ಹೋಗಿದ್ದರು. ಬೈಕ್ ಇದ್ದ ಮನೆಯ ಒಳಗಿನ ಸಣ್ಣ ಕೊಠಡಿಯ ಬಳಿ ಮುರಳಿ ಅವರ ತಂದೆ ರಾಮಚಂದ್ರಯ್ಯ (70), ಮಗ ಕಾರ್ತಿಕ್ (15) ಮತ್ತು ಎಂಟು ವರ್ಷದ ಅವಳಿ ಹೆಣ್ಣು ಮಕ್ಕಳಾದ ಚಂದನಾ ಮತ್ತು ಚರಿತಾ ಮಲಗಿದ್ದರು.
ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಉಸಿರುಗಟ್ಟಿಸಿದ ಕಾರ್ಬನ್ ಮೊನಾಕ್ಸೈಡ್
ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿದ್ದರಿಂದ ಬೈಕ್‌ನಿಂದ ನಿರಂತರವಾಗಿ ಹೊರಬರುತ್ತಿದ್ದ ಹೊಗೆ ಕೊಠಡಿಯನ್ನೆಲ್ಲಾ ಆವರಿಸಿಕೊಂಡಿದೆ. ಮುಚ್ಚಿದ ಜಾಗದಲ್ಲಿ ಎಂಜಿನ್ ಚಾಲೂ ಆಗುದ್ದರಿಂದ ಆಮ್ಲಜನಕದ ಮಟ್ಟ ಕುಸಿದು ಅತ್ಯಂತ ವಿಷಕಾರಿಯಾದ 'ಕಾರ್ಬನ್ ಮೊನಾಕ್ಸೈಡ್' ಉತ್ಪತ್ತಿಯಾಗಿದೆ. ಈ ಅನಿಲಕ್ಕೆ ಯಾವುದೇ ವಾಸನೆ ಅಥವಾ ಬಣ್ಣ ಇಲ್ಲದ ಕಾರಣ, ಗಾಢ ನಿದ್ದೆಯಲ್ಲಿದ್ದ ಅಜ್ಜ ಮತ್ತು ಮಕ್ಕಳಿಗೆ ತಮ್ಮ ಉಸಿರು ನಿಲ್ಲುತ್ತಿರುವುದು ಅರಿವಿಗೇ ಬಂದಿಲ್ಲ. ಭಾನುವಾರ ಬೆಳಗ್ಗೆ ಪೋಷಕರು ಬಂದು ನೋಡಿದಾಗ ನಾಲ್ವರೂ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಚಳಿಗಾಲದಲ್ಲಿ ರೂಮ್ ಹೀಟರ್‌ಗಳನ್ನು ಬಳಸುವಾಗ ಅಥವಾ ಇಂತಹ ಇಂಧನ ಚಾಲಿತ ಯಂತ್ರಗಳನ್ನು ಮುಚ್ಚಿದ ಕೊಠಡಿಯಲ್ಲಿ ಬಳಸುವಾಗ ಉಂಟಾಗುವ ಈ ರೀತಿಯ ವಿಷಬಾಧೆಯ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.