ತಿರುವನಂತಪುರ, ಜ.11: ಕೇರಳ ಶಾಸಕ ರಾಹುಲ್ ಮಮ್‌ಕೂಟತಿಲ್ (Kerala MLA Rahul Mamkootathil) ವಿರುದ್ಧ ಮೂರನೇ ಅತ್ಯಾಚಾರ ದೂರು ದಾಖಲಾಗಿದ್ದು, ಅವರನ್ನು ಪೊಲೀಸರು (police) ವಶಕ್ಕೆ ಪಡೆದಿದ್ದಾರೆ. ಪೊಲೀಸರಿಗೆ ಇಮೇಲ್ ಮೂಲಕ ಹೊಸ ದೂರು ಬಂದ ನಂತರ ಶುಕ್ರವಾರ ಅವರನ್ನು ವಶಕ್ಕೆ ಪಡೆಯಲಾಗಿದೆ.
ಶಾಸಕರ ವಿರುದ್ಧ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ಬಂಧನದಿಂದ ರಕ್ಷಣೆ ಪಡೆದು ನಿರೀಕ್ಷಣಾ ಜಾಮೀನು ಪಡೆದಿದ್ದರು. ಪತ್ತನಂತಿಟ್ಟ ಜಿಲ್ಲೆಯಲ್ಲಿ ವಿಶೇಷ ತಂಡವೊಂದು ಆತನನ್ನು ವಿಚಾರಣೆ ನಡೆಸುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದೂರಿನ ಪ್ರಕಾರ, ಶಾಸಕ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ತನ್ನ ದಾಂಪತ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಶಾಸಕನ ಸಂಪರ್ಕಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ.
MLA Rahul Mamkootathil: ಮಹಿಳೆಯರಿಗೆ ಕಿರುಕುಳ ಆರೋಪ: ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಪಕ್ಷದಿಂದ ಅಮಾನತು
ನಂತರ ಅವರಿಬ್ಬರ ನಡುವೆ ಸಂಬಂಧ ಬೆಳೆದಿದ್ದು, ಆ ಸಮಯದಲ್ಲಿ ಶಾಸಕರು ತಮ್ಮನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ. ಗರ್ಭಿಣಿಯಾದರೆ ಮದುವೆ ಸುಲಭವಾಗುತ್ತದೆ ಎಂದು ಶಾಸಕರು ಹೇಳಿದ್ದರು ಎಂದು ಅವರು ಹೇಳಿದ್ದಾರೆ.
ಆದರೆ, ನಂತರ ಅವನು ಗರ್ಭಪಾತ ಮಾಡಿಸಲು ಒತ್ತಾಯಿಸಿದನು. ಹುಟ್ಟಲಿರುವ ಮಗುವಿನ ಪಿತೃತ್ವವನ್ನು ಪ್ರಶ್ನಿಸಿದನು ಎಂದು ದೂರಿನಲ್ಲಿ ಹೇಳಲಾಗಿದೆ. ಇದರಿಂದ ಉಂಟಾದ ಮಾನಸಿಕ ಒತ್ತಡ ಮತ್ತು ಆಘಾತವು ಗರ್ಭಪಾತಕ್ಕೆ ಕಾರಣವಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ. ತಮ್ಮಿಬ್ಬರ ನಡುವಿನ ಸಂಬಂಧದ ಸಮಯದಲ್ಲಿ ಶಾಸಕರು ತಮ್ಮಿಂದ ಆರ್ಥಿಕ ಸಹಾಯವನ್ನು ಕೋರಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಇನ್ನು ಈ ಸಂಬಂಧ ತನಿಖೆ ಮುಂದುವರೆದಿದ್ದು, ದೂರಿನ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೇರಳ ಅಪರಾಧ ವಿಭಾಗವು ಪಾಲಕ್ಕಾಡ್‌ನ ಸಸ್ಪೆಂಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಸ್ಟಾಕಿಂಗ್ ಮತ್ತು ಕ್ರಿಮಿನಲ್ ಕಿರುಕುಳ ನೀಡಿದ ಆರೋಪದ ಮೇಲೆ ಈ ಹಿಂದೆ ಎಫ್‌ಐಆರ್ ದಾಖಲಿಸಿತ್ತು. ಈ ಪ್ರಕರಣವನ್ನು ನ್ಯಾಯಾಲಯಕ್ಕೂ ಸಲ್ಲಿಸಲಾಗಿತ್ತು. ಎಫ್‌ಐಆರ್ ಪ್ರಕಾರ, 18ರಿಂದ 60 ವರ್ಷದವರೆಗಿನ ಸಂತ್ರಸ್ತರ ಮೇಲೆ ರಾಹುಲ್ ಸಾಮಾಜಿಕ ಮಾಧ್ಯಮದ ಮೂಲಕ ಹಿಂಬಾಲಿಸುವುದು, ಸಂದೇಶಗಳು, ಚಾಟ್‌ಗಳ ಮೂಲಕ ಕಿರುಕುಳ, ಮತ್ತು ಗರ್ಭಪಾತಕ್ಕೆ ಒತ್ತಾಯಿಸುವ ಬೆದರಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‍ನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಹಲವು ಮಹಿಳೆಯರು ರಾಹುಲ್ ಮಮ್‌ಕೂಟತಿಲ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದಲೂ ರಾಹುಲ್ ಮಮ್‌ಕೂಟತಿಲ್ ಅನ್ನು ಅಮಾನತುಗೊಳಿಸಲಾಗಿತ್ತು. ಈ ಹಿಂದೆ ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿತ್ತು. ಇದೀಗ ಶಾಸಕನ ವಿರುದ್ಧ ಮತ್ತೊಂದು ಅತ್ಯಾಚಾರದ ಹೊಸ ದೂರು ಕೇಳಿಬಂದಿದೆ.