ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇರಳಂ ನೌಕಾ ಅಕಾಡೆಮಿಯಲ್ಲಿ ಭಾರಿ ಭದ್ರತಾ ಲೋಪ: ನಕಲಿ ದಾಖಲೆ ಬಳಸಿ 1 ವರ್ಷದಿಂದ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶ ಪ್ರಜೆ

Kerala Naval Academy: ಕೇರಳಂನ ಕಣ್ಣೂರಿನಲ್ಲಿರುವ ಏಳಿಮಲ ನೌಕಾ ಅಕಾಡೆಮಿಯಲ್ಲಿ ನಕಲಿ ಭಾರತೀಯ ಗುರುತಿನ ಚೀಟಿಯನ್ನು ಬಳಸಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಪ್ರಜೆಯನ್ನು ನೌಕಾಪಡೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.

ಬಿಪ್ಲಬ್‌ ಸೋರೆನ್‌ (ಸಂಗ್ರಹ ಚಿತ್ರ)

ತಿರುವನಂತಪುರಂ, ಸೆ. 19: ಭಾರತದ ಅತ್ಯಂತ ಪ್ರಮುಖ ಹಾಗೂ ರಕ್ಷಣಾತ್ಮಕ ದೃಷ್ಟಿಯಿಂದ ಮಹತ್ವ ಪಡೆದಿರುವ ಕೇರಳಂನ ಕಣ್ಣೂರಿನಲ್ಲಿರುವ ಏಳಿಮಲ ನೌಕಾ ಅಕಾಡೆಮಿಯಲ್ಲಿ (Ezhimala Naval Academy) ಭದ್ರತಾ ಲೋಪ ಕಂಡುಬಂದಿದೆ. ನಕಲಿ ಭಾರತೀಯ ಗುರುತಿನ ಚೀಟಿಯನ್ನು ಬಳಸಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಪ್ರಜೆಯನ್ನು ನೌಕಾಪಡೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ. ಈ ಘಟನೆಯು ದೇಶದ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಭದ್ರತಾ ಲೋಪ ಆತಂಕವನ್ನು ಹಟ್ಟುಹಾಕಿದೆ.

ಬಂಧಿತ ಆರೋಪಿಯನ್ನು 32 ವರ್ಷದ ಬಿಪ್ಲಬ್‌ ಸೋರೆನ್‌ ಎಂದು ಗುರುತಿಸಲಾಗಿದ್ದು. ಈತ ಒಂದು ವರ್ಷದಿಂದ ಅಕಾಡೆಮಿಯ ಲಾಂಡ್ರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ನಕಲಿ ಆಧಾರ್‌ ಕಾರ್ಡ್‌, ನಕಲಿ ಪೊಲೀಸ್‌ ವೆರಿಫಿಕೇಶನ್‌

ತನಿಖೆ ನಂತರ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಆರೋಪಿ ಬಿಪ್ಲಬ್‌ ಸೋರೆನ್‌ ನಕಲಿ ಭಾರತೀಯ ಆಧಾರ್‌ ಕಾರ್ಡ್‌ ಹಾಗೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಪೊಲೀಸ್‌ ಠಾಣೆಯ ಹೆಸರಿನಲ್ಲಿ ನಕಲಿ ಪೊಲೀಸ್‌ ವೆರಿಫಿಕೇಶನ್‌ ಸರ್ಟಿಫಿಕೇಟ್‌ ಸಲ್ಲಿಸಿ ನೌಕಾ ಅಕಾಡೆಮಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ.

ಇತ್ತೀಚಿಗೆ ಅಪರಾಧಿಯ ಅನುಮಾನಾಸ್ಪದ ನಡವಳಿಕೆ ಹಾಗೂ ಆಂತರಿಕ ಗುಪ್ತಚರ ವಿಭಾಗ ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಅಕಾಡೆಮಿಯ ಅಧಿಕಾರಿಗಳು ಈತನನ್ನು ಹಲವು ದಿನಗಳಿಂದ ತೀವ್ರ ನಿಗಾದಲ್ಲಿಟ್ಟಿದ್ದರು. ಬಳಿಕ ಆತನ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಆತ ಬಾಂಗ್ಲಾದೇಶಿ ಪೌರತ್ವವನ್ನು ಮರೆಮಾಚಿ ನಕಲಿ ದಾಖಲೆ ಸೃಷ್ಟಿಸಿರುವುದು ದೃಢಪಟ್ಟಿದೆ.

ಜೆಸ್ಸೋರ್-ಬೆನಾಪೋಲ್ ಗಡಿಯಲ್ಲಿ ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಬಾಂಗ್ಲಾ ಪ್ರಜೆಗಳ ಬಂಧನ

ಸರಣಿ ಬಂಧನ; ಕಣ್ಣೂರಿನಲ್ಲಿ ಸಿಕ್ಕಿಬಿದ್ದ 6ನೇ ಬಾಂಗ್ಲಾದೇಶಿ ಪ್ರಜೆ

ನೌಕಾಪಡೆಯ ಅಧಿಕಾರಿಗಳು ಆರೋಪಿಯನ್ನು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಪಯ್ಯನ್ನೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ವಿದೇಶಿಗರ ಕಾಯ್ದೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ವಿಶೇಷವೆಂದರೆ, 4 ದಿನಗಳಲ್ಲಿ ಕಣ್ಣೂರು ಜಿಲ್ಲೆಯೊಂದರಲ್ಲೇ ಅಕ್ರಮವಾಗಿ ನೆಲೆಸಿದ್ದ ಒಟ್ಟು 6 ಜನ ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಕಣ್ಣೂರು ನಗರದ ಸ್ಪಾ ಒಂದರಲ್ಲಿ ನಕಲಿ ಭಾರತೀಯ ದಾಖಲೆಗಳೊಂದಿಗೆ ಕೆಲಸ ಮಾಡುತ್ತಿದ್ದ 5 ಬಾಂಗ್ಲಾದೇಶಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದರು.

ಅತ್ಯಂತ ಭದ್ರತೆ ಹೊಂದಿರುವ ನೌಕಾ ಅಕಾಡೆಮಿಯೊಳಗೆ ಬಾಂಗ್ಲಾದೇಶಿ ಪ್ರಜೆಯೊಬ್ಬ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದುದು ದೇಶದ ರಕ್ಷಣಾ ಕ್ಷೇತ್ರದಲ್ಲಿ ಭಾರಿ ಆತಂಕ ಮೂಡಿಸಿದೆ. ಆರೋಪಿ ಕೇವಲ ಕೆಲಸದ ಉದ್ದೇಶಕ್ಕಾಗಿ ಬಂದಿದ್ದನೋ ಅಥವಾ ರಕ್ಷಣಾ ಪಡೆಗಳ ರಹಸ್ಯ ಮಾಹಿತಿ ಸೋರಿಕೆ ಮಾಡುವ ಯಾವುದಾದರೂ ಗೂಢಚರ್ಯೆ ಜಾಲದ ಭಾಗವಾಗಿದ್ದನೇ ಎಂಬ ದೃಷ್ಟಿಯಲ್ಲೂ ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಮತ್ತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author