ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

3 ಕೋಟಿ ರೂ. ನೀಡುವಂತೆ ಬ್ಲ್ಯಾಕ್‌ಮೇಲ್‌; ಮಹಿಳೆ ಸೇರಿ ನಾಲ್ವರ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರು

ಮಹಿಳೆಗೆ ಹಣ ನೀಡದ ಕಾರಣ ಸುಳ್ಳು ಆರೋಪ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಫೆಬ್ರವರಿ 11ರಂದು ನಾನು ಕಗ್ಗೋಡದಿಂದ ಬರುವಾಗ ವಾಹನವನ್ನು ಅಡ್ಡಗಟ್ಟಿದ್ದರು. ನನ್ನನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣ ನನ್ನ ಕಾರಿನ ಗ್ಲಾಸ್‌ಗೆ ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.

ಮಹಿಳೆ ಸೇರಿ ನಾಲ್ವರ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರು

ಜಯಮೃತ್ಯುಂಜಯ ಸ್ವಾಮೀಜಿ. -

Prabhakara R
Prabhakara R Apr 7, 2026 10:27 PM

ವಿಜಯಪುರ: ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸಿಎಂ ಮತ್ತು ಗೃಹಸಚಿವರಿಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸ್ವಾಮೀಜಿ, ಇದು ತಮ್ಮ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಸಂಚು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಂತ್ರಸ್ತ ಮಹಿಳೆ ವಿರುದ್ಧವೇ ಸ್ವಾಮೀಜಿ ಕಡೆಯಿಂದ ಪ್ರತಿದೂರು ದಾಖಲಾಗಿದೆ.

ಹೌದು, ಮೃತ್ಯುಂಜಯ ಸ್ವಾಮೀಜಿ ಅವರ ಮೇಲೆ ಹಲ್ಲೆ ನಡೆಸಿ, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಅವರ ಶಿಷ್ಯ ಸಂತೋಷ ಮಂಜಣ್ಣಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ಫೆಬ್ರವರಿ 11 ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಸ್ವಾಮೀಜಿಗಳು ಕಾರಿನಲ್ಲಿ ತೆರಳುತ್ತಿದ್ದಾಗ ತ್ರಿವೇಣಿ ಎಂಬ ಮಹಿಳೆ ಮತ್ತು ಇತರರು ಕಾರು ತಡೆದು ಹಲ್ಲೆ ನಡೆಸಿದ್ದರು. ಆಗ ಭಕ್ತರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಆದರೆ, ಈ ಘಟನೆಯ ನಂತರ ಮಹಿಳೆಯು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮೀಜಿಗಳ ವಿರುದ್ಧ ಅಪಪ್ರಚಾರ ಆರಂಭಿಸಿ, ರಾಜಕುಮಾರ್ ಎಂಬುವವರ ಮೂಲಕ 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಇಡೀ ಪ್ರಕರಣದ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದೆ. ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಸ್ವಾಮೀಜಿಗಳಿಂದ ಎಲ್ಲ ಕೆಲಸ ಮಾಡಿಸಿಕೊಂಡು ಈಗ ಪೀಠದಿಂದ ಉಚ್ಚಾಟನೆ ಮಾಡಲು ಸಂಚು ರೂಪಿಸುತ್ತಿದ್ದಾರೆ. ಇದು 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ಎಂದು ಆರೋಪಿಸಿದ್ದಾರೆ.

ಇಷ್ಟು ದಿನ ಸುಮ್ಮನಿದ್ದ ಮಹಿಳೆ, ಸ್ವಾಮೀಜಿಗಳು ದೂರು ನೀಡಿದ ಬಳಿಕವಷ್ಟೇ ಯಾಕೆ ದೂರು ನೀಡಿದ್ದಾರೆ? ಇದು ಕೇವಲ ಹಣಕ್ಕಾಗಿ ಮಾಡುತ್ತಿರುವ ಬೆದರಿಕೆ ಎಂದು ಪ್ರಶ್ನಿಸಿದ್ದಾರೆ.

ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು?

ಬ್ಲ್ಯಾಕ್‌ಮೇಲ್‌ ಹಾಗೂ ಹಲ್ಲೆ ವಿಚಾರವಾಗಿ ಏಪ್ರಿಲ್ 4ರಂದೇ ಮಹಿಳೆ ಸೇರಿ ನಾಲ್ವರ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ದೂರು ನೀಡಿದ್ದರು. ವಿಜಯಪುರ ತಾಲೂಕಿನ ಕಗ್ಗೊಡ ಬಳಿ ಫೆಬ್ರವರಿ 11ರಂದು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬೆಂಗಳೂರು ಮೂಲದ ತ್ರಿವೇಣಿ, ಪೃಥ್ವಿ ಗೌಡ, ಯಶವಂತ ಹಾಗೂ ಸ್ಪೀಡ್ ನ್ಯೂಸ್ ಎಂಡಿ ವೀರೇಶ್ ವಿರುದ್ಧ ಜಯ ಮೃತ್ಯುಂಜಯ ಶ್ರೀಗಳು ವಿಜಯಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮೀಜಿ, ಎರಡು ಮೂರು ವರ್ಷಗಳ ಹಿಂದೆ ಬೆಂಗಳೂರಿನ ತ್ರಿವೇಣಿ ನನ್ನನ್ನು ಭೇಟಿಯಾಗಿದ್ದಳು. ನಾನು ಲಿಂಗಾಯತ ಸಮಾಜದವಳು. ಆಶ್ರೀತ ಫೌಂಡೇಶನ್ ಮುಖ್ಯಸ್ಥೆ ಎಂದು ಹೇಳಿದ್ದಳು. ಬಡ ಹಾಗೂ ಅನಾಥ ಮಕ್ಕಳನ್ನು ಸಾಕುತ್ತೇನೆ ಎಂದು ನನ್ನನ್ನು ಭೇಟಿಯಾಗಿದ್ದಳು. ಪಂಚಮಸಾಲಿ ಹೋರಾಟಕ್ಕೂ ಸಾತ್ ನೀಡುತ್ತೇನೆ ಎಂದು ಹೇಳಿದಳು.

ನಂತರ ಫೌಂಡೇಶನ್‌ಗಾಗಿ ಹಣ ನೀಡಬೇಕು ಎಂದು ಆಕೆ ಬೇಡಿಕೆ ಇಟ್ಟಿದ್ದಳು. ಯಾರಾದರೂ ದಾನಿಗಳಿದ್ದರೆ ಸಹಾಯ ಮಾಡಿಸುವುದಾಗಿ ನಾನು ಆಕೆಗೆ ಹೇಳಿದೆ. ನಂತರ ಹಣಕ್ಕಾಗಿ ಪೀಡಿಸುತ್ತಿದ್ದಳು. ಹಣ ನೀಡದ ಕಾರಣ ಇಲ್ಲದ ಆರೋಪ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಫೆಬ್ರವರಿ 11ರಂದು ನಾನು ಕಗ್ಗೋಡದಿಂದ ಬರುವಾಗ ವಾಹನವನ್ನು ಅಡ್ಡಗಟ್ಟಿದ್ದರು. ವಾಹನ ಅಡ್ಡಗಟ್ಟಿ ನನ್ನನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣ ನನ್ನ ಕಾರಿನ ಗ್ಲಾಸ್‌ಗೆ ಗುದ್ದಿ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಬೆಂಗಾಗಲು ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ನನ್ನ ಶಿಷ್ಯ ರಾಜಕುಮಾರಗೆ ಕರೆ ಮಾಡಿ ಮೂರು ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದಿದ್ದರೆ ಕೆಟ್ಟದಾಗಿ ಪ್ರಸಾರ ಮಾಡುತ್ತೇನೆ ಎಂದು ಹೇಳಿದ್ದಾಳೆ. ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ತ್ರಿವೇಣಿ ಬೆದರಿಕೆ ಹಾಕಿದ್ದಾಳೆ. ಆ ಕಾರಣಕ್ಕೆ ಬೆಂಗಳೂರು ಮೂಲದ ತ್ರಿವೇಣಿ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.