ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೂವರು ಮಕ್ಕಳನ್ನು ಕೊಂದಿದ್ದ ಆರೋಪಿ, ಆಶ್ರಯ ನೀಡಿದ್ದ ಮಹಿಳೆಯನ್ನೂ ಬಿಡಲಿಲ್ಲ; ಭೀಕರವಾಗಿ ಹತ್ಯೆಗೈದು ಸಾವಿಗೆ ಶರಣು

ತನ್ನ ಮೂವರು ಪುತ್ರರನ್ನು ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಮತ್ತೆ ಭೀಕರ ಕೃತ್ಯ ಎಸಗಿ, ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದು ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ.

ಆರೋಪಿ ಪ್ರೀತಮ್ ಕುಶ್ವಾಹ ಮತ್ತು ಸಂತ್ರಸ್ತೆ ದುರ್ಗಾ

ಭೋಪಾಲ್‌, ಫೆ. 17: ಮಧ್ಯಪ್ರದೇಶದ (Madhya Pradesh) ಭೋಪಾಲ್‌ನಲ್ಲಿ (Bhopal) ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ತನ್ನ ಸ್ವಂತ ಮೂವರು ಮಕ್ಕಳನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ (Murder) ಮಾಡಿ, 18 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ ವ್ಯಕ್ತಿಯೊಬ್ಬ, ಈಗ ತನಗೆ ಆಸರೆಯಾಗಿದ್ದ ಮಹಿಳೆಯನ್ನೇ ಬಲಿ ಪಡೆದು ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.

ಆರೋಪಿ ಪ್ರೀತಮ್ ಕುಶ್ವಾಹ ಮಧ್ಯ ಪ್ರದೇಶದ ತೆಂದುಖೇಡಾ ಮೂಲದವನು. ಹಲವು ವರ್ಷಗಳ ಹಿಂದೆ ತನ್ನ ಮೂವರು ಗಂಡು ಮಕ್ಕಳನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದಕ್ಕಾಗಿ ಈತನಿಗೆ ಜೈಲು ಶಿಕ್ಷೆಯಾಗಿತ್ತು. ಕಳೆದ ವರ್ಷ ಶಿಕ್ಷೆ ಮುಗಿಸಿ ಹೊರಬಂದಾಗ, ಈತನ ಕ್ರೂರ ಇತಿಹಾಸ ತಿಳಿದಿದ್ದ ಗ್ರಾಮಸ್ಥರು ಈತನನ್ನು ಊರಿಗೆ ಸೇರಿಸಿಕೊಳ್ಳದೆ ಬಹಿಷ್ಕರಿಸಿದ್ದರು. ಆ ಸಮಯದಲ್ಲಿ ಸಂಬಂಧಿಕ ಹಾಗೂ ಒಟ್ಟಿಗೆ ಆಧ್ಯಾತ್ಮಿಕ ಗುರುವನ್ನು ಪಾಲಿಸುತ್ತಿದ್ದ 50 ವರ್ಷದ ದುರ್ಗಾ ಎಂಬ ಮಹಿಳೆ ಮಾನವೀಯತೆಯ ದೃಷ್ಟಿಯಿಂದ ಭೋಪಾಲ್‌ನ ಗೌತಮ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಈತನಿಗೆ ಆಶ್ರಯ ನೀಡಿದ್ದರು.

ಬೈಕ್ ನಿಲ್ಲಿಸಿದ್ದಕ್ಕೆ ಆರು ಜನರ ತಲೆಗೆ ಗಂಭೀರ ಪೆಟ್ಟು..!!

ನಂಬಿಕೆ ದ್ರೋಹ ಮಾಡಿ ಹತ್ಯೆ

ಕಳೆದ ಒಂದು ವರ್ಷದಿಂದ ದುರ್ಗಾ ಅವರ ಮನೆಯಲ್ಲೇ ಇದ್ದ ಪ್ರೀತಮ್ ತರಕಾರಿ ಗಾಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಕಳೆದ ಆರು ತಿಂಗಳಿಂದ ದುರ್ಗಾ ಅವನಿಗೆ ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಪ್ರೀತಮ್ ಕೃತ್ಯ ಎಸಗಲು ಸಂಚು ರೂಪಿಸಿದ್ದ. ಕೊಲೆ ಮಾಡುವ ಎರಡು ದಿನಗಳ ಮೊದಲೇ ಆತ ತನ್ನ ತರಕಾರಿ ಗಾಡಿಯನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ. ಘಟನೆಯ ದಿನ, ನಿರ್ಮಾಣ ಹಂತದಲ್ಲಿದ್ದ ತಮ್ಮ ಮನೆಗೆ ಸ್ವಚ್ಛಗೊಳಿಸುವ ನೆಪದಲ್ಲಿ ದುರ್ಗಾ ಅವರನ್ನು ಕರೆದೊಯ್ದ ಪ್ರೀತಮ್, ಅಲ್ಲಿ ಚೂಪಾದ ಆಯುಧದಿಂದ ಅವರ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಮನಬಂದಂತೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ದುರ್ಗಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೃತ್ಯದ ಬಳಿಕ ಆತ್ಮಹತ್ಯೆಗೆ ಶರಣಾದ ಕಿರಾತಕ

ಮಹಿಳೆಯನ್ನು ಹತ್ಯೆಗೈದ ನಂತರ ಅಲ್ಲಿಂದ ಪರಾರಿಯಾದ ಪ್ರೀತಮ್, ನಿಶತ್‌ಪುರ ರೈಲ್ವೆ ಹಳಿಗಳ ಬಳಿ ಹೋಗಿ ಚಲಿಸುವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಮಹೇಂದ್ರ ಸಿಂಗ್ ಠಾಕೂರ್, "ಆರೋಪಿ ಈ ಮೊದಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದವನು. ಈಗ ಆಶ್ರಯ ನೀಡಿದವರನ್ನೇ ಕೊಂದಿದ್ದಾನೆ" ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಸ್ತುತ ಈ ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ನಡೆಸುತ್ತಿದ್ದು, ಸಾವಿನ ಮುನ್ನ ಅವನು ಯಾರಿಗಾದರೂ ಕರೆ ಮಾಡಿದ್ದನೇ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.