ಪಟನಾ: ಐದು ತಿಂಗಳ ಹಿಂದಷ್ಟೇ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 28 ವರ್ಷದ ಯುವತಿಯೊಬ್ಬಳು ನ್ಯಾಯಕ್ಕಾಗಿ ಹೋರಾಡುತ್ತಿದ್ದ ವೇಳೆ, ಅತ್ಯಾಚಾರ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿ ಆರೋಪಿಗಳು ಸಂತ್ರಸ್ತೆಗೆ ಪದೇ (Physical assault Case) ಪದೇ ಬೆದರಿಕೆ ಹಾಕಿದ್ದಾರೆ. ಪ್ರಕರಣ ಹಿಂಪಡೆಯದ ಕಾರಣ ಇದೀಗ ಮತ್ತೊಮ್ಮೆ ಆಕೆಯ ಮೇಲೆ ಹಲ್ಲೆ ನಡೆಸಿ ಮನೆಯ ಮಹಡಿಯಿಂದ ಕೆಳಗೆ ತಳ್ಳಿ ಕೊಲೆಗೆ ಯತ್ನಿಸಿದ್ದಾರೆ. ಇದರಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಆರೋಪ ಬಿಹಾರದ ಬೆಗುಸರಾಯ್‌ನಲ್ಲಿ ಕೇಳಿಬಂದಿದೆ.
2026ರ ಜೂನ್‌ನಲ್ಲಿ ಬಿಹಾರದ ಬೆಗುಸರಾಯ್ ಎಂಬಲ್ಲಿ 28 ವರ್ಷದ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಳು. ಈ ವೇಳೆ ಮಹಿಳೆಯ ಖಾಸಗಿ ಅಂಗಗಳಿಗೆ ದುಷ್ಕರ್ಮಿಗಳು ಕಲ್ಲು, ಮರದ ತುಂಡು ಹಾಕಿ ಅಮಾನುಷವಾಗಿ ಅತ್ಯಾಚಾರ ಎಸಗಿದ್ದರು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರದಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಪಡೆದು ಪ್ರಕರಣ ದಾಖಲಿಸಿದ್ದಳು. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದ ಈ ಪ್ರಕರಣವನ್ನು ಹಿಂಪಡೆಯುವಂತೆ ಆರೋಪಿಗಳ ಕಡೆಯವರು ಸಂತ್ರಸ್ತೆ ಹಾಗೂ ಆಕೆಯ ಬಡ ಕುಟುಂಬಕ್ಕೆ ನಿರಂತರವಾಗಿ ಜೀವಬೆದರಿಕೆ ಹಾಕುತ್ತಿದ್ದರು. ಹಣದ ಆಮಿಷ ಹಾಗೂ ಬೆದರಿಕೆಗೆ ಸಂತ್ರಸ್ತೆ ಮಣಿದಿರಲಿಲ್ಲ. ಬೆದರಿಕೆಗಳಿಗೆ ಜಗ್ಗದ ಕಾರಣ ಸಂತ್ರಸ್ತೆಯನ್ನು ಮುಗಿಸಲು ಸಂಚು ರೂಪಿಸಿದ್ದ ದುಷ್ಕರ್ಮಿಗಳು, ಆಕೆ ಮನೆಯ ಮಹಡಿಯ ಮೇಲೆ ಒಬ್ಬಂಟಿಯಾಗಿದ್ದ ಸಮಯ ನೋಡಿ ಸೋಮವಾರ ಮಧ್ಯರಾತ್ರಿ ಆಕೆಯ ಮೊಬೈಲ್‌ಗೆ ಕರೆ ಮಾಡಿ, ಹೊರಗೆ ಬರುವಂತೆ ಹೇಳಿದ್ದಾರೆ. ಯುವತಿ ಬಾಗಿಲು ತೆರೆದ ಕೂಡಲೇ, ಅವರು ಆಕೆಯ ಮೊಬೈಲ್ ಕಸಿದುಕೊಂಡು, ಅವಳ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಿ, ಛಾವಣಿಯ ಮೇಲೆ ನಿಲ್ಲಿಸಿ ಕೆಳಗೆ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾರೆ. ಇದರಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರ ಆಕ್ರೋಶ
"ಆರೋಪಿಗಳಿಂದ ನಮಗೆ ಜೀವ ಬೆದರಿಕೆ ಇದೆ ಎಂದು ನಾವು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದೆವು. ಆದರೆ ಪೊಲೀಸರು ಯಾವುದೇ ಭದ್ರತೆ ನೀಡಿರಲಿಲ್ಲ. ಪೊಲೀಸರ ನಿರ್ಲಕ್ಷ್ಯವೇ ಇಂದಿನ ಈ ಘಟನೆಗೆ ಕಾರಣ" ಎಂದು ಸಂತ್ರಸ್ತೆಯ ಪೋಷಕರು ಕಣ್ಣೀರಿಡುತ್ತಾ ಗಂಭೀರ ಆರೋಪ ಮಾಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರು, ಸಂತ್ರಸ್ತೆಗೆ ಉನ್ನತ ಮಟ್ಟದ ಚಿಕಿತ್ಸೆ ಮತ್ತು ಕುಟುಂಬಕ್ಕೆ ತಕ್ಷಣವೇ ಪೊಲೀಸ್ ಭದ್ರತೆ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು ಸರಣಿ ಕೊಲೆ ಕೇಸ್; ಇನ್ನೂ ಹಲವರ ಜೀವ ಉಳಿಸಿದ್ದ ಒಂದೇ ಒಂದು ಕನ್ನಡ ಮೆಸೇಜ್
ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಒಬ್ಬನನ್ನು ಬಂಧಿಸಿದ್ದಾರೆ. ಭೋಗಲ್ ಕುಮಾರ್ ಎಂಬಾತನನ್ನು ಬಂಧಿಸಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ವಿಷಯವನ್ನು ಎಲ್ಲಾ ಆಯಾಮಗಳಿಂದಲೂ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಬೇಗುಸರಾಯ್‌ನ ಪೊಲೀಸ್ ಉಪ ಅಧೀಕ್ಷಕ ನಿಖಿಲ್ ಕುಮಾರ್ ತಿಳಿಸಿದ್ದಾರೆ.