ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ಸರಣಿ ಕೊಲೆ ಕೇಸ್‌; ಇನ್ನೂ ಹಲವರ ಜೀವ ಉಳಿಸಿದ್ದ ಒಂದೇ ಒಂದು ಕನ್ನಡ ಮೆಸೇಜ್‌

ರಾಜಾಜಿನಗರದಲ್ಲಿ ನಡೆದ ಏಳು ಮಂದಿಯ ಸರಣಿ ಹತ್ಯೆ ಪ್ರಕರಣದ ಕುರಿತು ಹಲವು ಮಹತ್ವದ ಸಂಗತಿಗಳು ಬಯಲಾಗಿವೆ. ಹತ್ಯೆಯಾದ ಶಂಕರ್ ಅವರ ಮೊಬೈಲ್‌ನಿಂದ ಕನ್ನಡದಲ್ಲಿ ಕಳುಹಿಸಲಾದ ರಿಪ್ಲೈ ಸಂದೇಶವನ್ನು ಗಮನಿಸಿದ ಸ್ನೇಹಿತರು ಅನುಮಾನಗೊಂಡಿದ್ದೇ ಪ್ರಕರಣದ ಭೇದಿಸಲು ನೆರವಾಗಿದೆ.

ಬೆಂಗಳೂರು ಸರಣಿ ಕೊಲೆ ಕೇಸ್‌; ಪ್ರಕರಣ ಬೆಳಕಿಗೆ ಬಂದಿದ್ದೇಗೆ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 7, 2026 11:13 AM

ಬೆಂಗಳೂರು: ರಾಜಾಜಿನಗರದಲ್ಲಿ ನಡೆದ ಏಳು ಮಂದಿಯ ಸರಣಿ ಹತ್ಯೆ ಪ್ರಕರಣದ ಕುರಿತು ಹಲವು ಮಹತ್ವದ ಸಂಗತಿಗಳು ಬಯಲಾಗಿವೆ. ಹತ್ಯೆಯಾದ ಶಂಕರ್ ಅವರ ಮೊಬೈಲ್‌ನಿಂದ ಕನ್ನಡದಲ್ಲಿ ಕಳುಹಿಸಲಾದ ರಿಪ್ಲೈ ಸಂದೇಶವನ್ನು ಗಮನಿಸಿದ ಸ್ನೇಹಿತರು ಅನುಮಾನಗೊಂಡಿದ್ದೇ ಪ್ರಕರಣದ ಭೇದಿಸಲು ನೆರವಾಗಿದೆ. ಶಂಕರ್‌ ಮೊಬೈಲ್ ಬಳಸಿ ಆರೋಪಿ ಇಂದುಶೇಖರ್ ಸ್ನೇಹಿತರಿಗೆ ಕನ್ನಡದಲ್ಲಿ ರಿಪ್ಲೈ ಸಂದೇಶ ಕಳುಹಿಸಿದ್ದ. ಆದರೆ, ಶಂಕರ್ ಈ ಹಿಂದೆ ತಮ್ಮ ಸ್ನೇಹಿತರಿಗೆ ಸಾಮಾನ್ಯವಾಗಿ ಕನ್ನಡದಲ್ಲಿ ಸಂದೇಶಗಳಿಗೆ ಉತ್ತರಿಸುತ್ತಿರಲಿಲ್ಲ. ಇದು ಸ್ನೇಹಿತರ ಗಮನಕ್ಕೆ ಬಂದಿದೆ.

ಕನ್ನಡ ಸಂದೇಶಗಳು ಅನುಮಾನ ಹುಟ್ಟಿಸಿದ್ದರಿಂದ, ಸ್ನೇಹಿತರು ನಳಿನಿ ಅವರ ತಾಯಿಗೆ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಇದೇ ವೇಳೆ, ಕುಟುಂಬದವರು ಪ್ರವಾಸಕ್ಕೆ ತೆರಳಿದ್ದಾರೆ ಎಂಬ ರೀತಿಯಲ್ಲಿ ಪರಿಸ್ಥಿತಿಯನ್ನು ಬಿಂಬಿಸಲು ಆರೋಪಿ ಹಲವು ಪ್ರಯತ್ನಗಳನ್ನು ನಡೆಸಿದ್ದ ಎಂಬ ಆರೋಪವೂ ಕೇಳಿಬಂದಿದೆ. ನಳಿನಿ ತಾಯಿಗೆ ಮೊಮ್ಮಗನ ಮೂಲಕ ವಾಯ್ಸ್ ನೋಟ್ ಕಳುಹಿಸಲಾಗಿತ್ತು. ‘‘ಅಜ್ಜಿ, ನಾವೆಲ್ಲ ಟೂರ್‌ಗೆ ಬಂದಿದ್ದೇವೆ. ಮೊಬೈಲ್ ಅಧಿಕಾರಿಗಳ ಬಳಿ ಇರುತ್ತದೆ. ನಾವಿಲ್ಲಿ ಆರಾಮಾಗಿದ್ದೇವೆ. ಫ್ರೀ ಆದಾಗ ನಾವೇ ಕರೆ ಮಾಡುತ್ತೇವೆ’’ ಎಂಬ ಮಾತುಗಳನ್ನು ಬಾಲಕನಿಂದ ಹೇಳಿಸಿ ವಾಯ್ಸ್ ನೋಟ್ ಕಳುಹಿಸಿದ್ದ.

ಒಂದೇ ಕುಟುಂಬದ ಆರು ಮಂದಿ ನಾಪತ್ತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇಂದುಶೇಖರ್ ನ ಬಗ್ಗೆ ಮಾಹಿತಿ ಕೆದಕಿ ಮೊಬೈಲ್ ನ ಲೊಕೇಶ್ ವಿವರಗಳು ಪತ್ತೆಹಚ್ಚಿದಾಗ ಹಲವು ದಟ್ಟ ಅನುಮಾನಗಳು ಹುಟ್ಟಿಕೊಂಡಿದ್ದವು. ಕೂಡಲೇ ಕಾರ್ಯಾಚರಣೆ ಆರಂಭಿಸಿ ಹಲಸೂರು ಗೇಟ್ ಸಮೀಪ ಕಾರಿನಲ್ಲಿಸುತ್ತಾಡುತ್ತಿದ್ದ ಇಂದುಶೇಖರ್ ನನ್ನು ವಶಕ್ಕೆ ಪಡೆದಿದ್ದರು. ಆತನ ಜತೆ ಇದ್ದ 11 ವರ್ಷದ ಬಾಲಕನನ್ನು ರಕ್ಷಿಸಿದ್ದರು.

ಇಂದುಶೇಖರ್ ನನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಆರು ಮಂದಿಯ ಬಗ್ಗೆ ತನಗೇನೂ ಗೊತ್ತಿಲ್ಲಎಂದು ನಿರಾಕರಿಸುತ್ತಿದ್ದ. ಕೆಲವು ಗಂಟೆಗಳ ಬಳಿಕ ತಾನೇ ಆರು ಮಂದಿಯ ಹತ್ಯೆ ನಡೆಸಿದ್ದ ಸತ್ಯ ಬಾಯ್ಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 20 ವರ್ಷಗಳ ಹಿಂದೆ ಸುನೀತಾರನ್ನು ಮದುವೆಯಾಗಿದ್ದ ಇಂದುಶೇಖರ್ ದಂಪತಿಗೆ 17 ವರ್ಷದ ಮಗಳು ಇದ್ದಾಳೆ.

ದಂಪತಿ ನಡುವೆ ಕೆಲವು ವಿಚಾರಗಳಿಗೆ ಜಗಳ ನಡೆಯುತ್ತಿತ್ತು. ಪ್ರತಿ ಬಾರಿ ಪತ್ನಿಯ ಕುಟುಂಬಸ್ಥರು ಪತ್ನಿ ಕಡೆಯೇ ನಿಲ್ಲುತ್ತಿದ್ದರು. ಹೀಗಾಗಿ, ಪ್ರತಿಯೊಬ್ಬರನ್ನೂ ಕೊಲ್ಲಲು ನಿರ್ಧರಿಸಿದ್ದ. ಪತ್ನಿ ಸುನೀತಾರನ್ನು ರುಬ್ಬು ಕಲ್ಲಿನಿಂದ ಕೊಂದು ಮೃತದೇಹ ಎಸೆದ ಬಳಿಕ ಅತ್ತೆ, ಬಾಮೈದ ಹಾಗೂ ಅವರ ಪತ್ನಿಯರನ್ನು ಪ್ರತ್ಯೇಕ ದಿನಗಳಂದು ಮನೆಗೆ ಕರೆಸಿಕೊಂಡಿದ್ದ. ಊಟ, ಮದ್ಯಪಾನದ ಆಮಿಷವೊಡ್ಡಿ ಕರೆಸಿಕೊಂಡು ಹಂತ-ಹಂತವಾಗಿ ಕೊಂದಿದ್ದಾನೆ.