ರಾಯ್ಪುರ್, ಜು.1 8: ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿ ಒಂದೇ ಕುಟುಂಬದ ಐವರು ಬಾಡಿಗೆ ಮನೆಯೊಳಗೆ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಛತ್ತೀಸ್‌ಗಢದಲ್ಲಿ (Chhattisgarh) ನಡೆದಿದೆ. ಇದು ಕೊಲೆ-ಆತ್ಮಹತ್ಯೆಯ ಶಂಕಿತ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬಕ್ಕೆ ಪದೇ ಪದೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮತ್ತು ನೆರೆಹೊರೆಯವರು ಬೀಗ ಹಾಕಿದ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನಂತರ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ (ಜುಲೈ 17) ತಡರಾತ್ರಿ ರಾಯ್‌ಪುರದ ವಸತಿ ಪ್ರದೇಶದಲ್ಲಿ ಮೃತದೇಹಗಳು ಪತ್ತೆಯಾಗಿವೆ (crime news).
ಮೃತರನ್ನು ಸಾಜಿದ್ ಅಲಿ ಅಲಿಯಾಸ್ ಸಜ್ಜು (50), ಅವರ ಪತ್ನಿ ರಬಿಯಾ ಬಾನೋ (45), ಮಗ ಇರ್ಷಾದ್ ಅಲಿ (20) ಮತ್ತು ಇಬ್ಬರು ಅಪ್ರಾಪ್ತ ಪುತ್ರಿಯರು ಎಂದು ಗುರುತಿಸಲಾಗಿದೆ. ಮನೆ ಮಾಲಕರು ಮತ್ತು ನೆರೆಹೊರೆಯವರು ಕುಟುಂಬವನ್ನು ಸಂಪರ್ಕಿಸಲು ವಿಫಲವಾದ ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಪೊಲೀಸರು ಬಾಗಿಲು ಒಡೆದು ನೋಡಿದಾಗ, ಸಾಜಿದ್ ಸೀಲಿಂಗ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ಆದರೆ ಅವರ ಪತ್ನಿ, ಮಗ ಮತ್ತು ಇಬ್ಬರು ಹೆಣ್ಣುಮಕ್ಕಳ ಮೃತದೇಹಗಳು ನೆಲದ ಮೇಲೆ ಪತ್ತೆಯಾಗಿವೆ.
ಸಾಜಿದ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಕುಟುಂಬ ಸದಸ್ಯರಿಗೆ ವಿಷ ನೀಡಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ, ಮರಣೋತ್ತರ ಪರೀಕ್ಷೆಗಳು ಮತ್ತು ವಿಧಿವಿಜ್ಞಾನ ವಿಶ್ಲೇಷಣೆಯ ನಂತರವೇ ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ಲಿವ್ ಇನ್ ಸಂಗಾತಿಯನ್ನು ಕೊಂದು ಹೂತುಹಾಕಿದ್ದ 16 ವರ್ಷದ ಬಾಲಕನ ಬಂಧನ
ಎಂಟು ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬವನ್ನು ಗುರುವಾರ (ಜುಲೈ 16) ಸಂಜೆ ಕೊನೆಯ ಬಾರಿಗೆ ನೋಡಿರುವುದಾಗಿ ಸ್ತಳೀಯರು ತಿಳಿಸಿದ್ದಾರೆ. ಮನೆ ಶುಕ್ರವಾರ ಪೂರ್ತಿ ಬೀಗ ಹಾಕಲಾಗಿತ್ತು. ಇದರಿಂದಾಗಿ ಮತ್ತೊಬ್ಬ ಬಾಡಿಗೆದಾರ ಮನೆ ಮಾಲಕರಿಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ (ಜು.1 7) ತಡರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿತು. ನಂತರ ಹೆಚ್ಚಿನ ತನಿಖೆಗಾಗಿ ಮನೆಯನ್ನು ಮುಚ್ಚಲಾಯಿತು. ಕುಟುಂಬದ ಆಹಾರದಲ್ಲಿ ವಿಷಕಾರಿ ವಸ್ತುವನ್ನು ಬೆರೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.