ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಪ್ರಾಪ್ತ ಲಿವ್ ಇನ್ ಸಂಗಾತಿಯನ್ನು ಕೊಂದು ಹೂತುಹಾಕಿದ್ದ 16 ವರ್ಷದ ಬಾಲಕನ ಬಂಧನ

ಅಪ್ರಾಪ್ತ ಬಾಲಕನೊಬ್ಬ ಜುಲೈ 10 ರಂದು ತನ್ನ ಲಿವ್ ಇನ್ ಪಾರ್ಟ್ನರ್ ಆಗಿದ್ದ 16 ವರ್ಷದ ಬಾಲಕಿಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯು ಇತರ ಇಬ್ಬರೊಂದಿಗೆ ಸೇರಿ ಆಕೆಯ ಮೃತದೇಹವನ್ನು ತಮ್ಮ ಕೃಷಿ ಜಮೀನಿನಲ್ಲಿ ಹೂತುಹಾಕಿದ್ದನು ಎಂದು ತಿಳಿದು ಬಂದಿದೆ.

ಅಪ್ರಾಪ್ತ ಲಿವ್ ಇನ್ ಸಂಗಾತಿಯನ್ನು ಕೊಂದು 16 ವರ್ಷದ ಬಾಲಕ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jul 18, 2026 11:38 AM

ಕನಕಪುರ: ಅಪ್ರಾಪ್ತ ಬಾಲಕನೊಬ್ಬ ಜುಲೈ 10 ರಂದು ತನ್ನ ಲಿವ್ ಇನ್ ಪಾರ್ಟ್ನರ್ (Live in Relationship) ಆಗಿದ್ದ 16 ವರ್ಷದ ಬಾಲಕಿಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Murder Case) ನಡೆದಿದೆ. ಆರೋಪಿಯು ಇತರ ಇಬ್ಬರೊಂದಿಗೆ ಸೇರಿ ಆಕೆಯ ಮೃತದೇಹವನ್ನು ತಮ್ಮ ಕೃಷಿ ಜಮೀನಿನಲ್ಲಿ ಹೂತುಹಾಕಿದ್ದನು. ಈ ಸಂಬಂಧ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಲನಾಥ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಯುವತಿಯ ಪೋಷಕರು ನಾಪತ್ತೆ ದೂರು ನೀಡಿದ ನಂತರ ಪೊಲೀಸರು ಆರೋಪಿಗಳ ಮನೆಗೆ ಭೇಟಿ ನೀಡಿದಾಗ, ಕೊಲೆ ನಡೆದು ಒಂದು ವಾರದ ಬಳಿಕ ಶುಕ್ರವಾರದಂದು ಈ ಅಪರಾಧ ಬೆಳಕಿಗೆ ಬಂದಿದೆ. ಸಾತನೂರಿನ ವೆಂಕಟರಾಯದೊಡ್ಡಿಯ ನಿವಾಸಿಯಾಗಿದ್ದ ಸಂತ್ರಸ್ತೆ 9ನೇ ತರಗತಿಯಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಆರೋಪಿಯು 16 ವರ್ಷದವನಾಗಿದ್ದು, ಆತನೂ ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟವನಾಗಿದ್ದಾನೆ.

ಬಂಧಿತರಾದ ಇತರ ಇಬ್ಬರನ್ನು ಆರೋಪಿ ಬಾಲಕನ ಸಹೋದರ ಪುಟ್ಟಮಾದ (19) ಮತ್ತು ಚಿಕ್ಕಪ್ಪ ಹರೀಶ್ (40) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೆಂಪಲನಾಥ ಗ್ರಾಮದ ನಿವಾಸಿಗಳಾಗಿದ್ದು, ದಿನಗೂಲಿ ಕಾರ್ಮಿಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ನಂತರ ಈ ಇಬ್ಬರು ಅಪ್ರಾಪ್ತರು ಪ್ರೇಮದಲ್ಲಿ ಬಿದ್ದಿದ್ದರು. ಆ ಹುಡುಗಿ ಹಳ್ಳಿಯಲ್ಲಿರುವ ಹುಡುಗನ ಪೋಷಕರ ಮನೆಯ ಪಕ್ಕದ ಕೋಣೆಯೊಂದರಲ್ಲಿ ಸುಮಾರು ಒಂದು ತಿಂಗಳ ಕಾಲ ಆತನೊಂದಿಗೆ ವಾಸಿಸುತ್ತಿದ್ದಳು. ಹುಡುಗನ ಪೋಷಕರಿಗೆ ಅವರ ಸಂಬಂಧದ ಬಗ್ಗೆ ತಿಳಿದಿತ್ತು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್‌ ಸ್ಟೋರಿ

ಕೊಲೆಗೆ ಕಾರಣವೇನು?

ಜುಲೈ 10 ರಂದು, ಆ ಹುಡುಗಿ ಇನ್‌ಸ್ಟಾಗ್ರಾಂನಲ್ಲಿ ಮತ್ತೊಬ್ಬ ಹುಡುಗನೊಂದಿಗೆ ಮಾತನಾಡುತ್ತಿರುವುದನ್ನು ಹುಡುಗ ಗಮನಿಸಿದ್ದಾನೆ. ಇದರಿಂದ ಕೋಪಗೊಂಡು ಆಕೆಯೊಂದಿಗೆ ಜಗಳವಾಡಿ, ಹಲ್ಲೆ ನಡೆಸಿದ್ದಾನೆ. ಬಳಿಕ ಹಳೆಯ ನಾಡ ಬಂದೂಕಿನಿಂದ ಆಕೆಯ ಮುಖಕ್ಕೆ ಗುಂಡಿಕ್ಕಿದ್ದಾನೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಆರೋಪಿ ತನ್ನ ಹಿರಿಯ ಸಹೋದರ ಹಾಗೂ ಚಿಕ್ಕಪ್ಪನಿಗೆ ಕರೆ ಮಾಡಿದ್ದಾನೆ. ಬಳಿಕ ಮೂವರು ಆರೋಪಿಗಳು ಬಾಲಕಿ ಶವವನ್ನು ಜಮೀನಿನಲ್ಲಿ ಹೂತು ಹಾಕಿದ್ದಾರೆ. ಹರೀಶ್ ತನ್ನ ಸ್ನೇಹಿತನೊಬ್ಬನೊಂದಿಗೆ ಕೊಲೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಆರೋಪಿ ಬಾಲಕ ಹಾಗೂ ಆತನ ಕುಟುಂಬದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೋಡಿಹಳ್ಳಿ ಪೊಲೀಸರು ಕೊಲೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.