ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Body Found: ರಸ್ತೆಯುದ್ದಕ್ಕೂ ಕಂಡುಬಂದ ಮಹಿಳೆಯ ದೇಹದ ಚೂರುಗಳು; ಬರ್ಬರವಾಗಿ ಕೊಲೆಯಾದಾಕೆ ಯಾರು?

Tumkur News: ಪೊಲೀಸರು ಈ ಘಟನೆಯನ್ನು ಕೊಲೆಯೆಂದು ಶಂಕಿಸಿದ್ದು, ದೇಹದ ತಲೆ ಮತ್ತು ಮುಂಡವನ್ನು ಪತ್ತೆಹಚ್ಚಲು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಕಂಡುಬಂದ ಮಹಿಳೆಯ ಬಳೆ ಮತ್ತು ಒಡವೆಗಳ ಆಧಾರದ ಮೇಲೆ ದೇಹದ ಭಾಗಗಳು ಮಹಿಳೆಯದೆಂದು ಗುರುತಿಸಲಾಗಿದೆ.

ಮಹಿಳೆಯ ದೇಹದ ಚೂರುಗಳು ಪತ್ತೆ; ಬರ್ಬರವಾಗಿ ಕೊಲೆಯಾದಾಕೆ ಯಾರು?

ಹರೀಶ್‌ ಕೇರ ಹರೀಶ್‌ ಕೇರ Aug 7, 2025 2:56 PM

ತುಮಕೂರು: ಅಪರಿಚಿತ ಮನುಷ್ಯ ಮೃತದೇಹದ (Body found) ತುಂಡುಗಳು ರಸ್ತೆಯುದ್ದಕ್ಕೂ ಬಿದ್ದಿರುವುದು ತುಮಕೂರು (Tumkur news) ಜಿಲ್ಲೆಯ ಕೊರಟಗೆರೆ (Koratagere) ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿವೆ. ಕೈಯಲ್ಲಿ ಬಳೆ ಇರುವುದು ಕಂಡು ಬಂದಿದ್ದು, ಪೊಲೀಸರು ಇದು ಮಹಿಳೆಯ ಮೃತದೇಹ ಎಂದು ತಿಳಿಸಿದ್ದಾರೆ. ಸುಮಾರು 3 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಬರೋಬ್ಬರಿ 5 ಕಡೆಗಳಲ್ಲಿ ದೇಹದ ಭಾಗಗಳು ಪತ್ತೆಯಾಗಿದೆ. ಈ ಘಟನೆ ಜಿಲ್ಲೆಯಾದ್ಯಂತ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.

ಅಪರಿಚಿತ ಮೃತದೇಹದ ಭಾಗಗಳು ಸಿಕ್ಕ ಘಟನಾ ಸ್ಥಳದಲ್ಲಿ ಮಹಿಳೆಯ ಬಳೆ ಮತ್ತು ಒಡವೆಗಳು ಕಂಡುಬಂದಿದ್ದು, ದೇಹದ ಭಾಗಗಳು ಮಹಿಳೆಯದ್ದೆಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ. ಮುತ್ಯಾಲಮ್ಮ ದೇವಸ್ಥಾನದ ಬಳಿ ಒಂದು ಕೈ, ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಮತ್ತೊಂದು ಕೈ, ಜೊತೆಗೆ ಕೋಳಾಲ ಲಿಂಗಾಪುರದ ಮಧ್ಯವೆಂಕಟಾಪುರದಲ್ಲಿ ಕರುಳು ಮತ್ತು ಕೆಲ ಮಾಂಸದ ತುಂಡು ಪತ್ತೆಯಾಗಿದ್ದು, ಈ ಘಟನೆಯನ್ನು ಕೊಲೆಯೆಂದು ಶಂಕಿಸಲಾಗಿದೆ. ಕೊರಟಗೆರೆ ಮತ್ತು ಕೋಳಾಲ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಹೀಗೆ ಕಿಲೋ ಮೀಟರ್​​ ವ್ಯಾಪ್ತಿಗಳಲ್ಲಿ ದೇಹದ ತುಂಡು ತುಂಡು ಭಾಗಗಳು ಇದ್ದು, ಜನರನ್ನು ಬೆಚ್ಚಿಬೀಳಿಸಿದೆ. ಪೊಲೀಸರು ಕೂಡ ಈ ಘಟನೆ ಕಂಡು ಶಾಕ್​ ಆಗಿದ್ದಾರೆ.

ಗರುಡಾಚಲ ನದಿಯಿಂದ ಲಿಂಗಾಪುರದವರೆಗಿನ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಐದು ಕಡೆಗಳಲ್ಲಿ ದೇಹದ ಭಾಗಗಳನ್ನು ಕವರ್‌ಗಳಲ್ಲಿ ಸುತ್ತಿ ಬಿಸಾಡಲಾಗಿದೆ. ಮುತ್ಯಾಲಮ್ಮ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಕವರ್‌ನಲ್ಲಿ ಸುತ್ತಿದ ಕೈಯನ್ನು ಬೀದಿ ನಾಯಿಗಳು ಎಳೆದಾಡುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೇ ರೀತಿ, ಕೋಳಾಲ ಲಿಂಗಾಪುರದ ಮಧ್ಯವೆಂಕಟಾಪುರದಲ್ಲಿ ಕರುಳು ಮತ್ತು ಮಾಂಸದ ತುಂಡುಗಳು ಕಂಡುಬಂದಿವೆ. ಆದರೆ, ತಲೆ ಮತ್ತು ದೇಹದ ಮುಂಡವನ್ನು ಇನ್ನೂ ಸಿಕ್ಕಿಲ್ಲ ಎನ್ನಲಾಗಿದೆ. ದೇಹದ ಭಾಗಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಕವರ್‌ಗಳಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕೊರಟಗೆರೆ ಮತ್ತು ಕೋಳಾಲ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಶೋಕ್ ಕೆ.ವಿ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇಹದ ಭಾಗಗಳನ್ನು ಶವಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈ ಭಾಗಗಳು ಒಬ್ಬ ಮಹಿಳೆಯದ್ದೆಂದು ಗುರುತಿಸಲಾಗಿದ್ದು, ಕೊಲೆಗಡುಕರು ದೇಹವನ್ನು ತುಂಡುತುಂಡಾಗಿ ಕತ್ತರಿಸಿ ವಿವಿಧ ಕಡೆ ಎಸೆದಿರುವ ಶಂಕೆಯಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಗುರುತು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

ಈ ಘಟನೆಯಿಂದ ಚಿಂಪುಗಾನಹಳ್ಳಿ, ಲಿಂಗಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಘಟನಾ ಸ್ಥಳದಲ್ಲಿ ಗ್ರಾಮಸ್ಥರು ಗುಂಪುಗುಂಪಾಗಿ ಜಮಾಯಿಸಿದ್ದು, ಈ ದಾರುಣ ಕೃತ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ. “ರಸ್ತೆಯ ಬದಿಯಲ್ಲಿ ಕವರ್‌ನಲ್ಲಿ ದೇಹದ ಭಾಗಗಳು ಕಂಡುಬಂದಿರುವುದು ತೀವ್ರ ಆತಂಕಕಾರಿಯಾಗಿದೆ. ಇಂತಹ ಕೃತ್ಯವನ್ನು ಮಾಡಿದವರನ್ನು ಶೀಘ್ರವಾಗಿ ಬಂಧಿಸಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪೊಲೀಸರು ಈ ಘಟನೆಯನ್ನು ಕೊಲೆಯೆಂದು ಶಂಕಿಸಿದ್ದು, ದೇಹದ ತಲೆ ಮತ್ತು ಮುಂಡವನ್ನು ಪತ್ತೆಹಚ್ಚಲು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಕಂಡುಬಂದ ಮಹಿಳೆಯ ಬಳೆ ಮತ್ತು ಒಡವೆಗಳ ಆಧಾರದ ಮೇಲೆ ದೇಹದ ಭಾಗಗಳು ಮಹಿಳೆಯದೆಂದು ಗುರುತಿಸಲಾಗಿದೆ. ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಕಪ್ಪು ಕವರ್‌ಗಳಲ್ಲಿ ಸುತ್ತಿ, ವಿವಿಧ ಸ್ಥಳಗಳಲ್ಲಿ ಬಿಸಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕೃತ್ಯವನ್ನು ಒಬ್ಬರಿಂದಲೇ ಮಾಡಲಾಗಿದೆಯೇ ಅಥವಾ ಗುಂಪೊಂದರಿಂದಲೇ ಎಂಬುದನ್ನು ತನಿಖೆಯಿಂದ ಬಯಲಾಗಬೇಕಿದೆ.

ಇದನ್ನೂ ಓದಿ: Tamil Nadu: ತಂದೆ-ಮಕ್ಕಳ ಕಲಹ ತಡೆಯಲು ಹೋದ ಪೊಲೀಸ್ ಅಧಿಕಾರಿಯನ್ನು ಕೊಚ್ಚಿ ಕೊಲೆ; ಆರೋಪಿಗಳು ಪರಾರಿ