ಚೆನ್ನೈ: ತಮಿಳು ನಟ ಅರುಣ್ ವಿಜಯ್ ಅವರ ಚೆನ್ನೈ (Chennai) ನಿವಾಸಕ್ಕೆ (Bomb Threat) ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಸದ್ಯ ಪೊಲೀಸರು ಅವರ ಮನೆಗೆ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಎಕ್ಕಾಟ್ಟುತಂಗಲ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಎಕ್ಕಾಟ್ಟುತಂಗಲ್ ಪ್ರದೇಶದಲ್ಲಿರುವ ನಟನ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಗೆ ಇಮೇಲ್ ಬಂದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಎಚ್ಚರಿಕೆಯ ನಂತರ, ಬಾಂಬ್ ಪತ್ತೆ ದಳವು ಪೊಲೀಸರೊಂದಿಗೆ ತ್ವರಿತವಾಗಿ ಸ್ಥಳಕ್ಕೆ ತಲುಪಿ ಆವರಣದ ವಿವರವಾದ ಪರಿಶೀಲನೆ ನಡೆಸಿತು. ಇಲ್ಲಿಯವರೆಗೆ ಯಾವುದೇ ಸ್ಫೋಟಕ ಸಾಧನ ಪತ್ತೆಯಾಗಿಲ್ಲ. ತನಿಖಾಧಿಕಾರಿಗಳು ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಮತ್ತು ಬೆದರಿಕೆಯ ಹಿಂದಿನ ವ್ಯಕ್ತಿಯನ್ನು ಗುರುತಿಸಲು ತನಿಖೆ ನಡೆಸುತ್ತಿದ್ದಾರೆ. ಬಿಟಿಜಿ ಯೂನಿವರ್ಸಲ್ ಬ್ಯಾನರ್ ಅಡಿಯಲ್ಲಿ ಬಾಬಿ ಬಾಲಚಂದ್ರನ್ ನಿರ್ಮಿಸಿದ ಕ್ರಿಸ್ ತಿರುಕುಮಾರನ್ ನಿರ್ದೇಶನದ ರೆಟ್ಟ ಥಳ ಚಿತ್ರದ ಬಿಡುಗಡೆಗೆ ನಟ ಪ್ರಸ್ತುತ ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಸಿದ್ಧಿ ಇದ್ನಾನಿ, ತಾನ್ಯಾ ರವಿಚಂದ್ರನ್, ಯೋಗಿ ಸಾಮಿ, ಜಾನ್ ವಿಜಯ್, ಹರೀಶ್ ಪೆರಾಡಿ ಮತ್ತು ಬಾಲಾಜಿ ಮುರುಗದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರುಣ್ ವಿಜಯ್, ಯೆನ್ನೈ ಅರಿಂದಾಲ್ (2015), ಚೆಕ್ಕ ಚಿವಂತ ವಾನಂ (2018), ಮತ್ತು ಚಕ್ರವ್ಯೂಹ (2016) ಸೇರಿದಂತೆ ಹಲವಾರು ಮೆಚ್ಚುಗೆ ಪಡೆದ ಚಿತ್ರಗಳಲ್ಲಿ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Bomb threat: ಹಾನಗಲ್ ಕುಮಾರೇಶ್ವರ ಮಠಕ್ಕೆ ಬಾಂಬ್ ಬೆದರಿಕೆ; ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್‌ನಿಂದ ತಪಾಸಣೆ
ಕಳೆದು ತಿಂಗಳು, ತಮಿಳಗ ವೆಟ್ರಿ ಕಳಗಂ(ಟಿವಿಕೆ) ಅಧ್ಯಕ್ಷ ವಿಜಯ್ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ನೀಲಂಕಾರೈ ಪೊಲೀಸರ ಪ್ರಕಾರ, "ನಟ-ರಾಜಕಾರಣಿಯ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಬೆಳಗ್ಗೆ 5:20 ರ ಸುಮಾರಿಗೆ ಕರೆ ಮಾಡಲಾಗಿದೆ. ಬೆದರಿಕೆ ಬಂದ ಕೂಡಲೇ, ಮೂವರು ಬಾಂಬ್ ನಿಷ್ಕ್ರಿಯ ದಳದ ತಜ್ಞರು ಮತ್ತು ಸ್ನಿಫರ್ ನಾಯಿಯನ್ನು ವಿಜಯ್ ಅವರ ನಿವಾಸಕ್ಕೆ ಕಳುಹಿಸಲಾಯಿತು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯಪಾಲ ಆರ್.ಎನ್. ರವಿ, ನಟಿ ತ್ರಿಶಾ, ಎಸ್.ವಿ. ಶೇಖರ್, ನಟ-ರಾಜಕಾರಣಿ ವಿಜಯ್ ಮತ್ತು ಬಿಜೆಪಿ ರಾಜ್ಯ ಕಚೇರಿ ಕಮಲಾಲಯಂ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಗಳು ಬಂದಿದ್ದವು. ಆದರೆ, ಎಲ್ಲವೂ ಸುಳ್ಳು ಎಂದು ತಿಳಿದುಬಂದಿದೆ. ಈ ಬೆದರಿಕೆಗಳಿಂದಾಗಿ ಬಾಂಬ್ ಪತ್ತೆ ಮತ್ತು ನಿರ್ಮೂಲನಾ ದಳ (BDDS), ಸ್ಥಳೀಯ ಪೊಲೀಸರು ಮತ್ತು ಶ್ವಾನ ದಳಗಳು ತಪಾಸಣೆ ನಡೆಸಿದವು. ಆದರೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಈ ಇ-ಮೇಲ್ ಗಳು ಎಲ್ಲಿಂದ ಬಂದಿವೆ ಎಂಬುದರ ಬಗ್ಗೆ ಸೈಬರ್ ಕ್ರೈಂ ವಿಭಾಗ ತನಿಖೆ ನಡೆಸುತ್ತಿದೆ. ಸಂಬಂಧಪಟ್ಟ ಕಾನೂನುಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.