ರಾಯ್ಪುರ್, ಜೂ.19: ಪತ್ನಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿ, ತಲೆ ಬೋಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಛತ್ತೀಸ್‌ಗಢ (Chhattisgarh) ದ ಕೊರಿಯಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಪಾಟ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಂಡೋಪಾರ ಗ್ರಾಮದಲ್ಲಿ ಜೂನ್ 14 ರಂದು ಈ ಘಟನೆ ನಡೆದಿದ್ದು, ಈ ದೌರ್ಜನ್ಯದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ನಂತರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ (crime news).
ಜೂನ್ 15 ರಂದು 30 ರ ಹರೆಯದ ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಅವರ ಪತಿ ಜಿತೇಂದ್ರ ಘಾಸಿಯಾ ಕುಡಿದ ಅಮಲಿನಲ್ಲಿ ನಿರ್ದಯವಾಗಿ ಥಳಿಸಿದ್ದಾನೆ ಎಂದು ಕೊರಿಯಾ ಜಿಲ್ಲೆಯ ಉಸ್ತುವಾರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ ಚೌಬೆ ತಿಳಿಸಿದ್ದಾರೆ.
ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 85 (ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ), 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 296 (ಅಶ್ಲೀಲ ಕೃತ್ಯಗಳು) ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಆರಂಭದಲ್ಲಿ ಸಂತ್ರಸ್ತೆ ಘಟನೆಯ ವಿವರಗಳನ್ನು ಉಲ್ಲೇಖಿಸಿರಲಿಲ್ಲ. ವಿಡಿಯೊಗಳು ಹೊರಬಂದ ನಂತರ ಸಂತ್ರಸ್ತೆ ದೂರು ನೀಡಿದರು. ತಾನು ಮತ್ತು ಪತಿ ಘಾಸಿಯಾ ಸುಮಾರು 15 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ತಾವು ಪತಿಯೊಂದಿಗೆ ವಾಸಿಸುತ್ತಿಲ್ಲ ಅವರು ಹೇಳಿದರು. ಆಕೆಯ ವ್ಯಕ್ತಿತ್ವದ ಬಗ್ಗೆ ಅನುಮಾನಗೊಂಡ ಘಾಸಿಯಾ ಸುಮಾರು ಒಂದು ವರ್ಷದ ಹಿಂದೆ ಆಕೆಯನ್ನು ತ್ಯಜಿಸಿದ್ದಾನೆ. ಅಂದಿನಿಂದ ಆಕೆ ಪರಿಚಯಸ್ಥನೊಂದಿಗೆ ವಾಸಿಸುತ್ತಿರುವುದಾಗಿ ಸಂತ್ರಸ್ತೆ ಹೇಳಿದ್ದಾರೆ.
ಆರೋಪಿ ಜೂನ್ 14 ರಂದು ಮಹಿಳೆ ವಾಸವಿರುವ ಸ್ಥಳಕ್ಕೆ ಬಂದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. “ತನ್ನ ಕೈಕಾಲುಗಳನ್ನು ಕಟ್ಟಿ, ತನ್ನ ಮೇಲೆ ಹಲ್ಲೆ ಮಾಡಿ, ನಿಂದಿಸಿದನು. ಮೊದಲು ಕತ್ತರಿಯಿಂದ ನನ್ನ ಕೂದಲನ್ನು ಕತ್ತರಿಸಿ, ನಂತರ ಬ್ಲೇಡ್‌ನಿಂದ ತಲೆಯನ್ನು ಬೋಳಿಸಿದನು. ಬಲವಂತವಾಗಿ ತನ್ನ ಬಾಯಿಗೆ ಮೂತ್ರ ಸುರಿದನು. ಮಗುವಿನ ಮೂತ್ರವನ್ನೂ ತನ್ನ ಮೇಲೆ ಸುರಿದನು. ನನ್ನನ್ನು ಜೀವಂತವಾಗಿ ಸುಡುವುದಾಗಿ ಬೆದರಿಕೆ ಹಾಕಿದನು” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಘಟನೆಯ ವಿಡಿಯೊದಲ್ಲಿ ಆರೋಪಿಯು ಆಕೆಯನ್ನು ಪದೇ ಪದೇ ಹೊಡೆಯುವುದು, ಒದೆಯುವುದು, ತಲೆ ಬೋಳಿಸುವುದು ಹಾಗೂ ಮುಖ ಮತ್ತು ದೇಹದ ಮೇಲೆ ಕಪ್ಪು ವಸ್ತುವನ್ನು ಬಳಿಯುವುದನ್ನು ತೋರಿಸಲಾಗಿದೆ. ಹಲ್ಲೆಯ ಸಮಯದಲ್ಲಿ ಆಕೆಯ ಬಟ್ಟೆಗಳು ಹರಿದಿರುವಂತೆ ಕಂಡುಬಂದಿದೆ.