ಬಿಹಾರದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ: ಮಹಿಳೆ ಮೇಲೆ ಗ್ಯಾಂಗ್ ರೇಪ್, ಖಾಸಗಿ ಅಂಗಕ್ಕೆ ಗುಂಡು, ಕಲ್ಲು ತುರುಕಿ ವಿಕೃತಿ ಮೆರೆದ ದುಷ್ಕರ್ಮಿಗಳು
Bihar Horror: ಬಿಹಾರದ ಬೆಗುಸರಾಯ್‌ನಲ್ಲಿ ಐವರು ದುಷ್ಕರ್ಮಿಗಳು ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಮಾನವೀಯ ಕೃತ್ಯ ಮೆರೆದಿದ್ದಾರೆ. ಚಿಕಿತ್ಸೆ ವೇಳೆ ಸಂತ್ರಸ್ತೆಯ ಖಾಸಗಿ ಅಂಗದಿಂದ ಸಜೀವ ಗುಂಡು, ಕಲ್ಲು ಮತ್ತು ಮರದ ತುಂಡುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ -
ಪಾಟ್ನಾ, ಜೂ. 19: ಬಿಹಾರದ ಬೆಗುಸರಾಯ್‌ನಲ್ಲಿ ಅತ್ಯಂತ ಅಮಾನವೀಯ ಮತ್ತು ಕ್ರೂರ ಘಟನೆಯೊಂದು ನಡೆದಿದ್ದು, ಐದು ಮಂದಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಪತಿಯನ್ನು ಕೋಣೆಯಲ್ಲಿ ಬಂಧಿಸಿ, ಆತನ ಪತ್ನಿಯ ಮೇಲೆ ಭೀಕರವಾಗಿ ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ (Bihar Horror). ಅತ್ಯಾಚಾರದ ನಂತರ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ವೈದ್ಯರು ಆಕೆಯ ಖಾಸಗಿ ಅಂಗದಿಂದ ಸಜೀವ ಗುಂಡು, ಕಲ್ಲು ಮತ್ತು ಮರದ ತುಂಡನ್ನು ಹೊರತೆಗೆದಿದ್ದಾರೆ. ಆರೋಪಿಗಳ ಈ ಕ್ರೌರ್ಯ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಯು ಜೂನ್ 11ರಂದು ರಾತ್ರಿ ಚಾಕಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ರಾತ್ರಿ 11:30 ರ ಸುಮಾರಿಗೆ ಆಕೆ ಶೌಚಾಲಯಕ್ಕೆ ಹೋಗಿದ್ದಾಗ ಐದು ಮಂದಿ ಸಶಸ್ತ್ರ ದುಷ್ಕರ್ಮಿಗಳು ಬಲವಂತವಾಗಿ ಮನೆಗೆ ನುಗ್ಗಿದ್ದಾರೆ. ಮೊದಲು ಆಕೆಯ ಪತಿಯನ್ನು ಕೋಣೆಯೊಂದರಲ್ಲಿ ಹಾಕಿ ಲಾಕ್ ಮಾಡಿದ್ದಾರೆ. ಆಕೆ ಶೌಚಾಲಯದಿಂದ ಹೊರಬರುತ್ತಿದ್ದಂತೆ ಆಕೆಯ ಬಾಯಿ ಮುಚ್ಚಿ, ಮನೆಯ ಹೊರಗಿನ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಆಕೆ ಕಿರುಚಾಡಲು ಯತ್ನಿಸಿದಾಗ ಬ್ಲೇಡ್‌ನಿಂದ ಆಕೆಯ ಎದೆ ಮತ್ತು ತೊಡೆಯ ಭಾಗವನ್ನು ಸೀಳಿ ವಿಕೃತಿ ಮೆರೆದಿದ್ದಾರೆ.
ದಾಳಿಯ ನಂತರ ಸಂತ್ರಸ್ತೆ ಪ್ರಜ್ಞೆ ಕಳೆದುಕೊಂಡಿದ್ದರು. ಆಕೆಗೆ ಪ್ರಜ್ಞೆ ಬಂದಾಗ ತನ್ನ ತಂಗಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಂಗಿ ಸ್ಥಳಕ್ಕೆ ಬಂದು ಪತಿಯನ್ನು ಕೋಣೆಯಿಂದ ಹೊರಗೆ ಕರೆತಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸಂತ್ರಸ್ತೆಯನ್ನು ಬರೌನಿ ಆಸ್ಪತ್ರೆಗೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರವಾದ ಆಂತರಿಕ ಗಾಯಗಳಿಂದಾಗಿ ಆಕೆ ನಿರಂತರವಾಗಿ ನೋವಿನಿಂದ ಬಳಲುತ್ತಿದ್ದರು. ವೈದ್ಯರು ತೀವ್ರ ವೈದ್ಯಕೀಯ ತಪಾಸಣೆ ನಡೆಸಿದಾಗ ಆಕೆಯ ಆಂತರಿಕ ಅಂಗಗಳಿಗೆ ಗಂಭೀರ ಹಾನಿಯಾಗಿರುವುದು ಮತ್ತು ಅದರಲ್ಲಿ ಗುಂಡು ಸೇರಿದಂತೆ ವಿವಿಧ ವಸ್ತುಗಳನ್ನು ತುರುಕಿರುವುದು ಪತ್ತೆಯಾಗಿದೆ.
ಮರೀನಾಯಕನಹಳ್ಳಿ ಗೇಟ್ ಬಳಿ ಅಕ್ರಮ ದಂಧೆಗೆ ಬ್ರೇಕ್: ಮೂವರ ವಿರುದ್ಧ ಪ್ರಕರಣ ದಾಖಲು!
ಮೂರು ತಿಂಗಳ ಹಿಂದೆಯೂ ಮೂವರು ಅಪರಾಧಿಗಳು ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಹಣ, ಒಡವೆ ದೋಚಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಡಿಎಸ್‌ಪಿ ಆನಂದ್ ಕುಮಾರ್ ಪಾಂಡೆ ಪ್ರತಿಕ್ರಿಯಿಸಿ, ಪ್ರಕರಣದ ವೈಜ್ಞಾನಿಕ ತನಿಖೆ ನಡೆಯುತ್ತಿದ್ದು, ಸಂತ್ರಸ್ತೆಯ ಹೇಳಿಕೆ ನಿಜವಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಮತ್ತು ಪೊಲೀಸರ ನಿರ್ಲಕ್ಷ್ಯ ಕಂಡುಬಂದಲ್ಲಿ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.