ಚೆನ್ನೈ, ಜ. 29: ಕೆಲಸಕ್ಕಾಗಿ ಆರಂಭವಾದ ವಲಸೆಯು ಧಾರುಣ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರದಿಂದ ಕೆಲಸಕ್ಕೆಂದು ತಮಿಳುನಾಡಿನ (Tamil Nadu) ಚೆನ್ನೈಗೆ ಬಂದಿದ್ದ ದಂಪತಿ ಹಾಗೂ ಅವರ ಎರಡು ವರ್ಷದ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಮೃತರ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಪತಿ, ಪತ್ನಿ ಹಾಗೂ ಅವರ ಪುಟ್ಟ ಮಗುವನ್ನು ಕೊಂದ ಹಂತಕರು, ಶವಗಳನ್ನು ನಗರದ ವಿವಿಧ ಭಾಗಗಳಲ್ಲಿ ಎಸೆದು, ತನಿಖೆಯ ದಾರಿ ತಪ್ಪಿಸಲು ಮುಂದಾಗಿದ್ದರು (Crime News).
ಸೋಮವಾರ (ಜನವರಿ 26) ಅಡ್ಯಾರ್‌ನ ಇಂದಿರಾ ನಗರ ಫಸ್ಟ್ ಅವೆನ್ಯೂ ಬಳಿಯ ದ್ವಿಚಕ್ರ ವಾಹನಗಳ ಶೋ ರೂಂ ಬಳಿ ಗೋಣಿ ಚೀಲವೊಂದನ್ನು ಬಿಟ್ಟು ಹೋಗಿದ್ದಾಗಿ ನಿವಾಸಿಗಳು ಪೊಲೀಸರಿಗೆ ತಿಳಿಸಿದ ನಂತರ ಪ್ರಕರಣದ ಮೊದಲ ಸುಳಿವು ಬೆಳಕಿಗೆ ಬಂತು. ಬಿಹಾರ ಮೂಲದ ಗೌರವ್ ಕುಮಾರ್ ಅವರ ಮೃತದೇಹವನ್ನು ಒಳಗೆ ತುಂಬಿಸಲಾಗಿತ್ತು ಎಂದು ಪೊಲೀಸರು ಪತ್ತೆ ಹಚ್ಚಿದರು. ತಕ್ಷಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಚೀಲವನ್ನು ಎಸೆಯುತ್ತಿರುವುದು ಕಂಡುಬಂದಿದೆ.
ಮದುವೆಯಾದ ಎರಡೇ ತಿಂಗಳಿಗೆ ಮತ್ತೊಬ್ಬನ ಜೊತೆ ಪತ್ನಿ ಪರಾರಿ; ಪತಿ, ಮದುವೆ ಮಾಡಿಸಿದವನೂ ಆತ್ಮಹತ್ಯೆ
ವಾಹನವನ್ನು ಪತ್ತೆಹಚ್ಚಿದ ಬಳಿಕ ಪೊಲೀಸರು ಒಂದು ಖಾಸಗಿ ಭದ್ರತಾ ಕಂಪನಿಯೊಂದಕ್ಕೆ ತೆರಳಿದರು. ಅಂತಿಮವಾಗಿ ಬಿಹಾರ ಮೂಲದ ಐವರು ಶಂಕಿತರನ್ನು ಬಂಧಿಸಿದರು. ಬುಧವಾರ (ಜನವರಿ 28) ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆರೋಪಿಗಳು ಗೌರವ್ ಕುಮಾರ್ ಮಾತ್ರವಲ್ಲದೆ ಅವರ ಪತ್ನಿ ಮುನಿತಾ ಹಾಗೂ ಎರಡು ವರ್ಷದ ಮಗು ಬಿರ್ಮಾಣಿ ಕುಮಾರ್‌ನನ್ನೂ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮಂಗಳವಾರ ಸಂಜೆ, ಶಂಕಿತರು ವಿಚಾರಣೆಗೆ ಒಳಗಾದಾಗ ಪೊಲೀಸರು ಇಂದಿರಾ ನಗರ ರೈಲು ನಿಲ್ದಾಣದ ಬಳಿಯ ಬಕಿಂಗ್‌ಹ್ಯಾಮ್ ಕಾಲುವೆಯಿಂದ ಮಗುವಿನ ಶವವನ್ನು ವಶಪಡಿಸಿಕೊಂಡರು. ಮುನಿತಾ ಅವರ ಶವವನ್ನು ಪತ್ತೆಹಚ್ಚಲು ಬಕಿಂಗ್‌ಹ್ಯಾಮ್ ಕಾಲುವೆ ಮತ್ತು ಪಲ್ಲಿಕರಣೈ ಜೌಗು ಪ್ರದೇಶದಲ್ಲಿ ಶೋಧ ಮುಂದುವರಿದಿದೆ.
ಗೌರವ್ ಕುಮಾರ್ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಉದ್ಯೋಗ ಅರಸಿ ತನ್ನ ಕುಟುಂಬದೊಂದಿಗೆ ಚೆನ್ನೈಗೆ ಬಂದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಮುಖ ಆರೋಪಿ ಸಿಕಂದರ್ ಎಂಬಾತ ತಾರಾಮಣಿಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡಿಸಿದ್ದ. ಆ ಸಮಯದಲ್ಲಿ ಕುಟುಂಬವು ಸಿಕಂದರ್ ಜತೆಯಲ್ಲಿ ವಾಸಿಸುತ್ತಿತ್ತು.
ಸೋಮವಾರ ರಾತ್ರಿ ಸಿಕಂದರ್ ಮುನಿತಾ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ನಂತರ ಈ ತ್ರಿವಳಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮುನಿತಾಳ ಶವ ಪತ್ತೆಯಾಗಿ ಮರಣೋತ್ತರ ಪರೀಕ್ಷೆ ನಡೆದ ನಂತರವೇ ಯಾವ ರೀತಿಯ ಹಲ್ಲೆ ನಡೆದಿರಬಹುದು ಎಂಬುದನ್ನು ದೃಢಪಡಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತರ ಆರೋಪಿಗಳಾದ ನರೇಂದ್ರ ಕುಮಾರ್, ರವೀಂದ್ರನಾಥ್ ಟ್ಯಾಗೋರ್ ಮತ್ತು ವಿಕಾಸ್ ಎಲ್ಲರೂ ಬಿಹಾರ ಮೂಲದವರು. ಐದನೇ ಶಂಕಿತನನ್ನು ವಿಚಾರಣೆ ನಡೆಸಲಾಗುತ್ತಿದೆ.