ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೋಚಿಂಗ್‌ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಗುಂಡಿನ ದಾಳಿ ಶಂಕೆ, ಒಬ್ಬ ವಿದ್ಯಾರ್ಥಿಗೆ ಗಾಯ

Crime News: ಕೋಚಿಂಗ್‌ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಬ್ಬರ ನಡುವೆ ಮಾರಾಮಾರಿ ನಡೆದಿದೆ. ಒಬ್ಬ ವಿದ್ಯಾರ್ಥಿ ತನ್ನ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಲ್ಲೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ವಿದ್ಯಾರ್ಥಿಗಳ ನಡುವೆ ಮಾರಾಮಾರಿ

ಜೈಪುರ, ಅ.17: ಪ್ರಸಿದ್ಧ ಅಲೆನ್ ಕೋಚಿಂಗ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ಹಿಂಸಾತ್ಮಕ ಘಟನೆ ನಡೆದಿರುವ ಘಟನೆ ರಾಜಸ್ಥಾನದ (Rajasthan) ಕೋಟಾದಲ್ಲಿ ನಡೆದಿದೆ. ಅಲೆನ್ ಕರಿಯರ್ ಇನ್‌ಸ್ಟಿಟ್ಯೂಟ್‌ನ ಸಬಲ್ ಕ್ಯಾಂಪಸ್‌ನಲ್ಲಿ 11ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ನಡುವೆ ಉಂಟಾದ ವಿವಾದ ವಿಕೋಪಕ್ಕೆ ತಿರುಗಿದೆ. ಈ ವೇಳೆ ಒಬ್ಬ ವಿದ್ಯಾರ್ಥಿ ತನ್ನ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯನ್ನು ಗುಂಡಿನ ದಾಳಿ ಎಂದು ಬಿಂಬಿಸಲಾಗಿದ್ದರೂ, ಗುಂಡು ಹಾರಿಸಲಾಗಿದೆಯೇ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ. ಹಲ್ಲೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಈ ಘಟನೆಯು ಅಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ (Crime News).

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಮತ್ತು ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರೂ ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ವಿದ್ಯಾರ್ಥಿನಿಯ ವಿಚಾರವಾಗಿ ಇಬ್ಬರ ನಡುವೆ ವಿವಾದವಿತ್ತು ಎಂದು ವೈರಲ್ ವಿಡಿಯೊದಲ್ಲಿ ಹೇಳಲಾಗಿದೆ. ಈ ವಿವಾದ ಬಳಿಕ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಘಟನೆಯ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಅದು ಕೆಲವೇ ಕ್ಷಣಗಳಲ್ಲಿ ಹೊಡೆದಾಟಕ್ಕೆ ತಿರುಗಿದೆ. ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಈ ಘಟನೆಯಿಂದ ಭಯಭೀತರಾಗಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಇಲ್ಲಿದೆ ವಿಡಿಯೊ:



ಕೋಟಾದ ಕೋಚಿಂಗ್ ತರಗತಿಗಳು ಈಗ ಸುರಕ್ಷಿತವಾಗಿಲ್ಲವೇ? ಕೋಟಾದ ಅಲೆನ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಭಯಾನಕ ದೃಶ್ಯಗಳು ಹೊರಬಂದಿವೆ. ಇಬ್ಬರು ವಿದ್ಯಾರ್ಥಿಗಳ ನಡುವಿನ ಘರ್ಷಣೆಯಲ್ಲಿ ಗುಂಡು ಹಾರಿಸಲಾಗಿದೆ ಎಂಬ ಮಾಹಿತಿ ಇದೆ. ಒಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕೋಚಿಂಗ್ ಸಂಸ್ಥೆಗಳಿಗೆ ಬರುತ್ತಾರೆಯೇ ಹೊರತು, ತಮ್ಮ ಸುರಕ್ಷತೆಯ ಬಗ್ಗೆ ಭಯಪಡುವುದಕ್ಕಲ್ಲ. ಇದಕ್ಕೆ ಹೊಣೆ ಯಾರು? ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

ನೂಡಲ್ಸ್ ಸೇವಿಸಿದ ಒಂದೇ ಕುಟುಂಬದ ಐವರು ಸಾವು; ಗ್ರೇಟರ್ ನೋಯ್ಡಾದಲ್ಲಿ ಭೀಕರ ದುರಂತ

ಅಲೆನ್ ಕೋಚಿಂಗ್ ಸಂಸ್ಥೆಯು ಉದ್ಯಮದಲ್ಲಿ ದೊಡ್ಡ ಹೆಸರು ಪಡೆದಿದ್ದರೂ, ಭದ್ರತೆಯ ಬಗ್ಗೆ ಗಂಭೀರ ಕಳವಳಗಳು ವ್ಯಕ್ತವಾಗುತ್ತಿವೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ, ಈ ಘಟನೆ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಕೋಟಾ ಆಡಳಿತ ಮತ್ತು ಅಲೆನ್ ಸಂಸ್ಥೆಯ ಆಡಳಿತ ಮಂಡಳಿ ಆದಷ್ಟು ಬೇಗ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಬಳಕೆದಾರರು ಬರೆದಿದ್ದಾರೆ.

ಕೋಟಾದ ಅಲೆನ್ ಕೋಚಿಂಗ್‌ನಲ್ಲಿ ರಕ್ತಪಾತ ನಡೆದಿದೆ. ಒಬ್ಬ ಹುಡುಗನ ಕೈಯಲ್ಲಿ ಬಂದೂಕು ಕಾಣಿಸುತ್ತಿದ್ದು, ಮತ್ತೊಬ್ಬ ಹುಡುಗನಿಗೆ ರಕ್ತಸ್ರಾವವಾಗುತ್ತಿದೆ. ರಾಜಸ್ಥಾನದಲ್ಲೇ ಅತ್ಯಂತ ಅಸುರಕ್ಷಿತ ಕೋಚಿಂಗ್ ಸಂಸ್ಥೆ ಇದಾಗಿದ್ದರೂ, ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಪೊಲೀಸರು ಹೇಳುವುದೇನು?

ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಗುಂಡಿನ ದಾಳಿ ನಡೆದಿರುವ ವರದಿಗಳನ್ನು ಸ್ಥಳೀಯ ಪೊಲೀಸರು ತಳ್ಳಿಹಾಕಿದ್ದಾರೆ. ಘಟನೆಯಲ್ಲಿ ಯಾವುದೇ ಗುಂಡು ಹಾರಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮೇಲೆ ಬಸ್ ಪಲ್ಟಿ; 8 ಮಂದಿ ಸಾವು

ಆರೋಪಿ ವಿದ್ಯಾರ್ಥಿಯ ಬಳಿ ಲೋಹದಿಂದ ತಯಾರಿಸಿದ ಆಟಿಕೆ ಪಿಸ್ತೂಲ್ ಅಥವಾ ಏರ್‌ಗನ್‌ನಂತಹ ವಸ್ತುವಿತ್ತು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ. ಅದು ನೋಡಲು ನಿಜವಾದ ಆಯುಧದಂತೆಯೇ ಕಾಣುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಅದೇ ಪಿಸ್ತೂಲ್‌ನ್ನು ಹಿಡಿದುಕೊಂಡು ಮತ್ತೊಬ್ಬ ವಿದ್ಯಾರ್ಥಿಯ ತಲೆ ಮತ್ತು ಮುಖಕ್ಕೆ ಹಲವು ಬಾರಿ ಹೊಡೆದಿದ್ದಾನೆ. ಇದರಿಂದ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಹಾಡಹಗಲೇ ಕೋಚಿಂಗ್ ಸಂಸ್ಥೆಯೊಳಗೆ ನಡೆದ ಈ ಘಟನೆಯು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿಸಿದೆ. ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೋಟಾ ಪ್ರಮುಖ ಕೇಂದ್ರವೆಂದು ಪರಿಗಣಿಸಲಾಗಿದೆ. ಇಂತಹ ಸಂದರ್ಭದಲ್ಲಿ ತರಗತಿಯೊಳಗೇ ನಡೆದ ಹಿಂಸಾತ್ಮಕ ಘಟನೆಯು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭದ್ರತೆಯ ಕುರಿತು ಕಳವಳಕ್ಕೆ ಕಾರಣವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.