Cyber Crime: ಡಿಜಿಟಲ್ ಆರೆಸ್ಟ್ ಮೂಲಕ ಮಾಜಿ ಶಾಸಕರಿಗೇ 30 ಲಕ್ಷ ರೂ. ವಂಚನೆ!
Digital Arrest: ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಔರಾದ್ನ ಮಾಜಿ ಶಾಸಕ ಗುಂಡಪ್ಪ ವಕೀಲ್ಗೆ ವಂಚನೆ ಮಾಡಲಾಗಿದೆ. ಸಿಬಿಐ ಅಧಿಕಾರಿಗಳು ಅಂತ ಹೇಳಿ ಕರೆ ಮಾಡಿದ್ದ ವಂಚಕರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್ನಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ಎಟಿಎಂ ಕಾರ್ಡ್‍ಗಳು ಸಿಕ್ಕಿದ್ದು, ಸಾಕಷ್ಟು ವ್ಯವಹಾರ ನಡೆದಿದೆ ಎಂದು ಡಿಜಿಟಲ್ ಆರೆಸ್ಟ್ ನಾಟಕವಾಡಿದ್ದಾರೆ.

ಔರಾದ್ನ ಮಾಜಿ ಶಾಸಕ ಗುಂಡಪ್ಪ ವಕೀಲ್ -

ಬೆಂಗಳೂರು: ಸೈಬರ್ ಕ್ರೈಂ (Cyber Crime) ವಂಚನೆ ಜಾಲಕ್ಕೆ ಸಿಲುಕುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳನ್ನೂ ಈ ವಂಚಕರು ಟಾರ್ಗೆಟ್ ಮಾಡುತ್ತಿದ್ದಾರೆ. ಅಂತಹದ್ದೇ ಒಂದು ಘಟನೆಯಲ್ಲಿ, ಮಾಜಿ ಶಾಸಕರೊಬ್ಬರಿಗೆ (Ex MLA) ಡಿಜಿಟಲ್ ಆರೆಸ್ಟ್ (digital arrest) ಮಾಡುವ ಮೂಲಕ ಕಿಡಿಗೇಡಿಗಳು ಬರೋಬ್ಬರಿ 30 ಲಕ್ಷ ರೂ. ವಂಚಿಸಿದ್ದಾರೆ.
ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಔರಾದ್ನ ಮಾಜಿ ಶಾಸಕ ಗುಂಡಪ್ಪ ವಕೀಲ್ಗೆ ವಂಚನೆ ಮಾಡಲಾಗಿದೆ. ಆಗಸ್ಟ್ 12ರಂದು ಸಿಬಿಐ ಅಧಿಕಾರಿಗಳು ಅಂತ ಹೇಳಿ ಕರೆ ಮಾಡಿದ್ದ ವಂಚಕರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್ನಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ಎಟಿಎಂ ಕಾರ್ಡ್‍ಗಳು ಸಿಕ್ಕಿದ್ದು, ಸಾಕಷ್ಟು ವ್ಯವಹಾರ ನಡೆದಿದೆ ಎಂದು ಡಿಜಿಟಲ್ ಆರೆಸ್ಟ್ ನಾಟಕವಾಡಿದ್ದಾರೆ.
ಬಳಿಕ ನಿಮ್ಮದು ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಿ. ಪ್ರಾಪರ್ಟಿ ತನಿಖೆ ಮಾಡಬೇಕೆಂದು 30 ಲಕ್ಷ ರೂ. ಡೆಪಾಸಿಟ್ ಮಾಡಿಸಿಕೊಂಡಿದ್ದಾರೆ. ಆನ್ಲೈನ್ನಲ್ಲಿ ಜಡ್ಜ್ ಮುಂದೆ ಹಾಜರುಪಡಿಸಲಾಗುವುದು. ತನಿಖೆಯ ನಂತರ ಆ ಹಣವನ್ನು ಹಿಂದಿರುಗಿಸುವುದಾಗಿ ನಂಬಿಸಿದ್ದಾರೆ. ಹೀಗೆ ಸತತ ತಮ್ಮನ್ನು ಸಂಪರ್ಕಿಸುತ್ತಾ ಡಿಜಿಟಲ್ ಬಂಧನದಲ್ಲಿರಿಸಿ ಹಣದ ವ್ಯವಹಾರ ಮಾಡುತ್ತಿದ್ದ ವಂಚಕರ ಈ ವಂಚನೆ ಜಾಲ ಅರಿತ ಶಾಸಕ ಸದ್ಯ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: Cyber Crime: ಬೆಂಗಳೂರಿನ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 378 ಕೋಟಿ ಕಳವು; ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ!