Kalaburagi Accident: ಕಲಬುರಗಿಯಲ್ಲಿ ಭೀಕರ ಸರಣಿ ಅಪಘಾತ; ವೃದ್ಧ ದಂಪತಿ ಸೇರಿ ಮೂವರ ಸಾವು
ಕಲಬುರಗಿ ತಾಲೂಕಿನ ಹಾರುತಿ ಹಡಗಿಲ ಸಮೀಪ ಗುರುವಾರ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಸಂಚಾರ ವಿಭಾಗದ ಎಸಿಪಿ ಸುಧಾ ಆದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ ಬಳಿ ಬಸ್-ಕಾರು ನಡುವೆ ಅಪಘಾತ. -
ಕಲಬುರಗಿ, ಡಿ.12: ಭೀಕರ ಸರಣಿ ಅಪಘಾತದಲ್ಲಿ ವೃದ್ಧ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವುದು ತಾಲೂಕಿನ ಹಾರುತಿ ಹಡಗಿಲ ಸಮೀಪ ಗುರುವಾರ ನಡೆದಿದೆ. ಅಫಜಲಪುರ ಕಡೆಯಿಂದ ಕಲಬುರಗಿಯತ್ತ ಬರುತ್ತಿದ್ದ ಜೀಪ್ ಹಾಗೂ ಕಲಬುರಗಿಯಿಂದ ಅಫಜಲಪುರದತ್ತ ಹೊರಟ್ಟಿದ್ದ ಕೆಕೆಆರ್‌ಟಿಸಿ ಬಸ್ ನಡುವೆ ಮೊದಲಿಗೆ ಅಪಘಾತ (Kalaburagi Accident) ಸಂಭವಿಸಿದೆ. ಬಳಿಕ ಅಪಘಾತಕ್ಕೀಡಾದ ಬಸ್‌ಗೆ ಹಿಂದಿನಿಂದ ಬಂದ ಮತ್ತೊಂದು ಬಸ್ ಕೂಡ ಡಿಕ್ಕಿ ಹೊಡೆದಿದ್ದರಿಂದ ಸರಣಿ ಅಪಘಾತ ಸಂಭವಿಸಿದೆ.
ಜೀಪ್‌ನಲ್ಲಿದ್ದ ಅಫಜಲಪುರ ತಾಲೂಕಿನ ತೆಲ್ಲೋಣಗಿ ಗ್ರಾಮದ ಚಂದ್ರಕಾಂತ ಶಿವರಾಯ (80), ಸುಲೋಚನಾ ಚಂದ್ರಕಾಂತ (70), ಮಿಟ್ಟುಸಾಬ್ ಪಟೇಲ್ (35) ಮೃತಪಟ್ಟಿದ್ದಾರೆ. ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ ಅದೇ ಊರಿನ ಶ್ರೀಶೈಲ್ ಭೂತಾಳೆ ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಘತ್ತರಗಾದ ವಿಜಯಲಕ್ಷ್ಮಿ, ಬಂದರವಾಡದ ಗುರುದೇವಿ ಎಂಬುವವರು ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಸಂಚಾರ ವಿಭಾಗದ ಎಸಿಪಿ ಸುಧಾ ಆದಿ, ಸಂಚಾರ ಪೊಲೀಸ್ ಠಾಣೆ-2ರ ಇನ್‌ಸ್ಪೆಕ್ಟರ್ ಶಕೀಲ್ ಅಂಗಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮಂಡ್ಯದಲ್ಲಿ ಭೀಕರ ಕಾರು ಅಪಘಾತ; ಮೂವರ ದುರ್ಮರಣ
ದೇವನಹಳ್ಳಿಯಲ್ಲಿ ಬಸ್-ಕಾರು ಡಿಕ್ಕಿ; ಮೂವರ ಸಾವು
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಲಾಲಗೊಂಡನಹಳ್ಳಿ ಗೇಟ್ ಬಳಿ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಚಿಕ್ಕಬಳ್ಳಾಪುರ ದಿಕ್ಕಿನಿಂದ ದೇವನಹಳ್ಳಿ ಕಡೆಗೆ ಬರುತ್ತಿದ್ದ ಕಾರು ಅತಿವೇಗದಲ್ಲಿ ಸಂಚರಿಸುತ್ತಿತ್ತು ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಹಾರಿ ಎದುರುಗಡೆಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್‌ಗೆ (KSRTC Bus) ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. KA 50 MA 0789 ಸಂಖ್ಯೆಯ ಕಾರು ವೇಗವಾಗಿ ಚಿಕ್ಕಬಳ್ಳಾಪುರ ಕಡೆಯಿಂದ ದೇವನಹಳ್ಳಿಯತ್ತ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಮೃತರನ್ನು ಮೋಹನ್ ಕುಮಾರ್ (33), ಸುಮನ್ (28), ಸಾಗರ್ (23) ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ಅತಿಯಾದ ವೇಗ ಕಾರಣ ಎಂದು ಹೇಳಲಾಗುತ್ತಿದೆ. ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಡಿವೈಡರ್ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು; ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಜೀವ ದಹನ
ಅಪಘಾತದ ಕಾರಣ ಹೈದರಾಬಾದ್ ಬೆಂಗಳೂರು ಹೆದ್ದಾರಿಯಲ್ಲಿ ರಾತ್ರಿ ಟ್ರಾಫಿಕ್ ಜಾಮ್ ಉಂಟಾಯಿತು. ಅಪಘಾತದ ರಭಸಕ್ಕೆ ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಯಿತು. ಸದ್ಯ ಮೃತದೇಹಗಳನ್ನು ಆಕಾಶ್ ಆಸ್ವತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮೃತರ ಗುರುತು ಪತ್ತೆ ಇನ್ನಷ್ಟೇ ಆಗಬೇಕಿದೆ.