ಲಖನೌ, ಮೇ 27: ಆಕೆ ತನ್ನ ಮದುವೆಯ ಬಗ್ಗೆ ಅಪಾರ ಕನಸು ಕಂಡಿದ್ದಳು. ಗಂಡ ತನ್ನನ್ನು ಚೆನ್ನಾಗಿ ನೋಡಿಕೊಂಡರಷ್ಟೇ ಸಾಕು ಅಂದುಕೊಂಡಿದ್ದಳು. ಮದುವೆಗೆ ಹಚ್ಚಿದ ಮೆಹಂದಿಯಲ್ಲಿ ಸೌಭಾಗ್ಯವತಿ ಭವ ಎಂದು ಬರೆಯಲಾಯಿತು. ಏಳೇಳು ಜನ್ಮದಲ್ಲೂ ನೀನೇ ಪತಿಯಾಗಿರಬೇಕು ಎನ್ನುತ್ತಾ ಸಪ್ತಪದಿ ತುಳಿದು, ಗಂಡನ ಮನೆಗೆ ಹೋದವಳ ಬದುಕು ಆರು ತಿಂಗಳಿಗೆ ಕಮರಿದೆ. ಅದ್ಧೂರಿಯಾಗಿ ಮದುವೆಯಾದ ಕೇವಲ ಆರೇ ತಿಂಗಳಿಗೆ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. 26 ವರ್ಷದ ಶ್ವೇತಾ ಸಿಂಗ್ ಮೃತ ದುರ್ದೈವಿ. ಉತ್ತರ ಪ್ರದೇಶದ (Uttar Pradesh) ಲಖನೌದಲ್ಲಿ ಘಟನೆ ನಡೆದಿದೆ (crime news).
ನಟಿ, ಮಾಡೆಲ್ ತ್ವಿಶಾ ಸಾವಿನ ಪ್ರಕರಣದ ಆಘಾತದಿಂದ ದೇಶ ಇನ್ನೂ ಹೊರ ಬಂದಿಲ್ಲ. ಇದೀಗ ಶ್ವೇತಾ ಸಿಂಗ್ ಕೂಡ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಪತಿ, ಅತ್ತೆ-ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದು, ಇದೊಂದು ಪೂರ್ವ ಯೋಜಿತ ಕೊಲೆ ಎಂದು ದೂರಿದ್ದಾರೆ. ಸ್ಕಾರ್ಪಿಯೋ ಕಾರಿನ ವಿಚಾರಕ್ಕೆ ತಮ್ಮ ಮಗಳು ಅಸುನೀಗಿದ್ದಾಳೆ. ಆಕೆ ಮದುವೆಗೆ ತಮ್ಮ ಆರ್ಥಿಕ ಸಾಮರ್ಥ್ಯವನ್ನು ಮೀರಿ ಖರ್ಚು ಮಾಡಲಾಗಿತ್ತು ಎಂದು ಮೃತಳ ತಂದೆ ಉಮೇಶ್ ಹೇಳಿದ್ದಾರೆ.
ಮೃತ ಶ್ವೇತಾ ಸಿಂಗ್ ಮತ್ತು ಭೂಪೇಂದ್ರ ಸಿಂಗ್ ವಿವಾಹ 2025ರ ನವೆಂಬರ್ 22ರಂದು ನಡೆಯಿತು. ಮದುವೆಯ ದಿನದಿಂದಲೇ ಕಿರುಕುಳ ಪ್ರಾರಂಭವಾಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಿಯಕರ, ಸಹೋದರಿಯೊಂದಿಗೆ ಸೇರಿ ಪತಿಗೆ ಸ್ಕೆಚ್; ಚಿತ್ರಹಿಂಸೆ ಕೊಟ್ಟು ಗಂಡನನ್ನೇ ಕೊಂದ ಪತ್ನಿ
ವರ ಮತ್ತು ಆತನ ತಂದೆ ಮದುವೆಯ ಸಮಯದಲ್ಲಿ 10 ಲಕ್ಷ ರುಪಾಯಿ ಮತ್ತು ಸ್ಕಾರ್ಪಿಯೋ ಕಾರನ್ನು ಕೇಳಿದ್ದರು. ಅಲ್ಲದೆ ಅವರ ತಂದೆಯನ್ನು ಕಾಲಿಗೆ ಬೀಳುವಂತೆ ಒತ್ತಾಯಿಸಿದ್ದರು. ಅದರಂತೆ ಶ್ವೇತಾ ಕೈ ಜೋಡಿಸಿ ಭೂಪೇಂದ್ರ ಪಾದಗಳನ್ನು ಹಿಡಿದಿದ್ದಳು. ಭೂಪೇಂದ್ರ ಒಂದು ಮಾತನ್ನೂ ಆಡಲಿಲ್ಲ, ಬದಲಾಗಿ ಶ್ವೇತಾಳನ್ನು ಕಾರಿನತ್ತ ಎಳೆದುಕೊಂಡು ಹೋಗಿ, ಕುಟುಂಬಕ್ಕೆ ಸರಿಯಾದ ವಿದಾಯ ಹೇಳಲು ಬಿಡಲಿಲ್ಲ ಎಂದು ಶ್ವೇತಾ ಅವರ ಇಬ್ಬರು ಸಹೋದರಿಯರಾದ ಕೋಮಲ್ ಮತ್ತು ಜ್ಯೋತಿ ಆರೋಪಿಸಿದ್ದಾರೆ.
ಶ್ವೇತಾಗೆ ಪ್ರತಿದಿನ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿತ್ತು ಎಂದು ತಂದೆ ಉಮೇಶ್ ಕುಮಾರ್ ಸಿಂಗ್ ಆರೋಪಿಸಿದ್ದಾರೆ. ಆಕೆಯ ಅತ್ತೆ ಶ್ವೇತಾಳನ್ನು ತನ್ನ ಸಂಬಂಧಿಕರೆದುರೇ ನಿಂದಿಸುತ್ತಿದ್ದಳು ಎಂದು ಹೇಳಲಾಗಿದೆ. ಇದರಿಂದ ಶ್ವೇತಾ ತೀವ್ರವಾಗಿ ನೊಂದಿದ್ದರು.
ಶ್ವೇತಾ ಅವರ ಅತ್ತಿಗೆ (ಗಂಡನ ಸಹೋದರಿ) ಮನೆಯ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರೆಂದು ಹೇಳಲಾಗಿದೆ. ಅವರು ಶ್ವೇತಾ ಮತ್ತು ಅವರ ಕುಟುಂಬದ ವಿರುದ್ಧ ನಿಂದನೀಯ ಭಾಷೆಯನ್ನು ಬಳಸುತ್ತಿದ್ದರು. ಈ ಅವಮಾನಗಳನ್ನು ಶ್ವೇತಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.
HDFC ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾಗೆ, ಮದುವೆ ನಿಶ್ಚಯವಾದ ಕೂಡಲೇ ಕೆಲಸ ಬಿಡುವಂತೆ ಒತ್ತಾಯಿಸಲಾಯಿತು ಎನ್ನಲಾಗಿದೆ. ಮದುವೆಯಾದ ಕೆಲವು ತಿಂಗಳ ನಂತರ ಕೆಲಸಕ್ಕೆ ಮರಳಬಹುದು ಎಂದು ಸುಳ್ಳು ಭರವಸೆ ನೀಡಲಾಗಿತ್ತು. ಆದರೆ ಭೂಪೇಂದ್ರ ಕುಟುಂಬವು ಶ್ವೇತಾ ಗೃಹಿಣಿಯಾಗಬೇಕೆಂದು ಬಯಸಿತ್ತು. ಇದು ಕೂಡ ಪದೇ ಪದೆ ಜಗಳ ನಡೆಯಲು ಕಾರಣವಾಯಿತು ಎನ್ನಲಾಗಿದೆ.
ಹಲವು ನಿರ್ಬಂಧ
ಶ್ವೇತಾಗೆ ತನ್ನ ಕುಟುಂಬವನ್ನು ಭೇಟಿಯಾಗುವುದನ್ನು ನಿರ್ಬಂಧಿಸಲಾಗಿತ್ತು ಎಂದು ಸಹೋದರಿ ಕೋಮಲ್ ಹೇಳಿದರು. ಭೂಪೇಂದ್ರ, ಶ್ವೇತಾಳನ್ನು ತನ್ನ ಕುಟುಂಬದೊಂದಿಗೆ ಮಾತನಾಡಲು ಬಿಡುತ್ತಿರಲಿಲ್ಲ. ಅವಳತ್ತ ಯಾವಾಗಲೂ ಗಮನ ಹರಿಸುತ್ತಿದ್ದ. ಶ್ವೇತಾ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿ ಮಾಡಿದರೆ, ಅವಳ ಪತಿ ಕೋಪಗೊಳ್ಳುತ್ತಿದ್ದ. ಶ್ವೇತಾಳನ್ನು ಪ್ರತ್ಯೇಕಿಸುವುದು ಭೂಪೇಂದ್ರನ ಗುರಿಯಾಗಿತ್ತು ಎಂದು ಆಕೆಯ ಸಹೋದರಿ ಹೇಳಿದ್ದಾರೆ.
ತ್ವಿಶಾ ಶರ್ಮಾ ಸಾವಿನ ತನಿಖೆ ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್ ಆದೇಶ
ಪೊಲೀಸ್ ದೂರಿನ ಪ್ರಕಾರ, ಶ್ವೇತಾ ಸಾವಿನ ಸುದ್ದಿ ಬರುವ ಎರಡು ಗಂಟೆಗಳ ಮೊದಲು ತನ್ನ ತಂದೆಯೊಂದಿಗೆ ಮತ್ತು ಒಂದು ಗಂಟೆ ಮೊದಲು ತನ್ನ ಸಹೋದರಿಯೊಂದಿಗೆ ಮಾತನಾಡಿದ್ದರು. ಆ ಸಮಯದಲ್ಲಿ, ಕುಟುಂಬಕ್ಕೆ ಆಕೆಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಶ್ವೇತಾಳ ಕುಟುಂಬವು ಅವಳ ಪತಿ ಮನೆಗೆ ಬರುವ ಹೊತ್ತಿಗೆ, ಅತ್ತೆ-ಮಾವ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಶ್ವೇತಾ ಮೃತಪಟ್ಟಿರುವುದಾಗಿ ಘೋಷಿಸಿದರು.
ಶ್ವೇತಾ ಅವರ ಕುಟುಂಬವು ಲಖನೌ ಪೊಲೀಸರಿಗೆ ದೂರು ನೀಡಿದ್ದು, ಇದು ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದೆ. ಪೊಲೀಸರು ಆರೋಪಿ ಪತಿ ಮತ್ತು ಆತನ ತಂದೆ ಕೌಶಲೇಂದ್ರ ಸಿಂಗ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳಲ್ಲಿ ಭೂಪೇಂದ್ರ ಸಿಂಗ್, ಆತನ ತಾಯಿ, ತಂದೆ, ಸಹೋದರ, ಸಹೋದರನ ಪತ್ನಿ ಮತ್ತು ಸಹೋದರಿ ಸೇರಿದ್ದಾರೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 80 (ವರದಕ್ಷಿಣೆ ಸಾವು) ಮತ್ತು ಸೆಕ್ಷನ್ 85 (ಕ್ರೌರ್ಯ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶ್ವೇತಾ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ.