ಅಮರಾವತಿ, ಏ. 6: ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ರನೌಟ್ ನಿರ್ಧಾರಕ್ಕಾಗಿ ನಡೆದ ಜಗಳದಲ್ಲಿ ಆಂಧ್ರ ಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿ 21 ವರ್ಷದ ಅಂಪೈರ್ ಒಬ್ಬರನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಸಮಸ್ಯೆ ಬಗೆಹರಿಸುವ ನೆಪದಲ್ಲಿ ಪಂದ್ಯದ ನಂತರ ಅಂಪೈರ್ ಅನ್ನು ಆಹ್ವಾನಿಸಲಾಯಿತು. ಆದರೆ ಆರೋಪಿಗಳು ಅವರ ಎದೆಗೆ ಚಾಕುವಿನಿಂದ ಇರಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು (Crime News) ತಿಳಿಸಿದರು.
ವರದಿಯ ಪ್ರಕಾರ ಭಾನುವಾರ (ಏ. 5) ಸಂಜೆ ಮೂರು ತಂಡಗಳು ಭಾಗವಹಿಸಿದ್ದ ಸ್ಥಳೀಯ ಮೈದಾನದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಡೋಲಾ ಅಜಿತ್ ಬಾಬು ಎಂದು ಗುರುತಿಸಲಾಗಿದೆ. ಡೋಲಾ ತನ್ನ ಸ್ನೇಹಿತ ಬುಡುಮುರಿ ಚಿರಂಜೀವಿ ಅವರೊಂದಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಂದ್ಯದಲ್ಲಿ ರನ್-ಔಟ್ ವಿಚಾರವಾಗಿ ಎರಡು ಗುಂಪುಗಳ ಆಟಗಾರರ ನಡುವೆ ವಾಗ್ವಾದ ನಡೆಯಿತು.
ಪೊಲೀಸರ ಪ್ರಕಾರ, ಅಂಪೈರ್‌ಗಳು ಮಧ್ಯಪ್ರವೇಶಿಸಿ ಮೈದಾನದಲ್ಲಿನ ವಿವಾದವನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು. ಆದರೆ ಪ್ರೇಕ್ಷಕ ಕಾಂತಾ ಕಿಶೋರ್ (26) ಕೋಪಗೊಂಡು, ಆಟಗಾರರು ಮತ್ತು ಅಂಪೈರ್‌ಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಂತರ ಸಮಸ್ಯೆಯನ್ನು ಪರಿಹರಿಸಲು ತನ್ನನ್ನು ಭೇಟಿಯಾಗುವಂತೆ ಸೂಚಿಸಿದ್ದ.
ಕೊಲೆ ರಹಸ್ಯ ಭೇದಿಸಿದ ರಸ್ತೆ ಬದಿ ಬಿದ್ದಿದ್ದ ಮದ್ಯದ ಬಾಟಲ್
ಪಂದ್ಯದ ನಂತರ, ಅಜಿತ್ ಬಾಬು, ಚಿರಂಜೀವಿ ಮತ್ತು ಇತರರು ಆತನ ಮನವಿಯಂತೆ ಭೇಟಿಯಾಗಲು ತೆರಳಿದರು. ಈ ವೇಳೆ ಮತ್ತೊಂದು ಸುತ್ತಿನ ವಾಗ್ವಾದ ನಡೆದಿದೆ. ಆ ಸಮಯದಲ್ಲಿ ಕಿಶೋರ್ ಚಾಕುವನ್ನು ಹೊರತೆಗೆದು ಅಂಪೈರ್‌ಗಳ ಮೇಲೆ ಹಲ್ಲೆ ನಡೆಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಅಜಿತ್ ಬಾಬು ಅವರ ಎದೆಗೆ ಇರಿತದ ಗಾಯವಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದರು. ಚಿರಂಜೀವಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗಾಯಗೊಂಡರು. ಮಧ್ಯ ಪ್ರವೇಶಿಸಲು ಯತ್ನಿಸಿದ ಮತ್ತೊಬ್ಬ ವ್ಯಕ್ತಿಯೂ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಜಿತ್ ಬಾಬು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು. ಸ್ಥಳದಲ್ಲಿದ್ದ ಹಿರಿಯರು ಸಮಸ್ಯೆಯನ್ನು ಮೊದಲೇ ಪರಿಹರಿಸಿದ್ದರೂ, ಆರೋಪಿಗಳು ಸಂಜೆ ಅಂಪೈರ್‌ಗಳನ್ನು ಕರೆದು ಅಜಿತ್ ಬಾಬು ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.