ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

10 ರೂಪಾಯಿ ವಿಚಾರಕ್ಕೆ ನಡೆದ ಜಗಳ ಸಾವಿನಲ್ಲಿ ಅಂತ್ಯ: ಫ್ಲಿಪ್‌ಕಾರ್ಟ್ ಮಿನಿಟ್ಸ್‌ನ 24 ವರ್ಷದ ಡೆಲಿವರಿ ಬಾಯ್ ಕೀಟನಾಶಕ ಸೇವಿಸಿ ಆತ್ಮಹತ್ಯೆ

Delivery Agent Dies by Self-Harming: ಹರಿದ 10 ರೂಪಾಯಿ ನೋಟಿನ ವಿಚಾರವಾಗಿ ಗ್ರಾಹಕನೊಂದಿಗೆ ನಡೆದ ಜಗಳ ಹಲ್ಲೆಗೆ ತಿರುಗಿದ ಕೆಲ ದಿನಗಳ ಬಳಿಕ ಫ್ಲಿಪ್‌ಕಾರ್ಟ್ ಮಿನಿಟ್ಸ್‌ನ 24 ವರ್ಷದ ಡೆಲಿವರಿ ಬಾಯ್ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತನನ್ನು ಸಮೀರ್ ಹುಸೇನ್ ಸೈಫಿ ಎಂದು ಗುರುತಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಡೆಲಿವರಿ ಬಾಯ್‌ ಸಮೀರ್ ಹುಸೇನ್ ಸೈಫಿ (ಸಂಗ್ರಹ ಚಿತ್ರ)

ನವದೆಹಲಿ, ಅ. 22: ಹರಿದ 10 ರೂಪಾಯಿ ನೋಟಿನ ವಿಚಾರವಾಗಿ ಗ್ರಾಹಕನೊಂದಿಗೆ ನಡೆದ ಜಗಳ ಹಲ್ಲೆಗೆ ತಿರುಗಿದ ಕೆಲ ದಿನಗಳ ಬಳಿಕ ಫ್ಲಿಪ್‌ಕಾರ್ಟ್ ಮಿನಿಟ್ಸ್‌ನ (Flipkart Minutes) 24 ವರ್ಷದ ಡೆಲಿವರಿ ಬಾಯ್ ಕೀಟನಾಶಕ ಸೇವಿಸಿ ಆತ್ಮಹತ್ಯೆ (Self-Harming) ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸಾಯುವ ಮುನ್ನ ಡೆಲಿವರಿ ಬಾಯ್, ಈ ಘಟನೆಯ ಕುರಿತು ವಿಡಿಯೊವೊಂದನ್ನು ರೆಕಾರ್ಡ್ ಮಾಡಿದ್ದಾನೆ. ತನ್ನ ದೂರಿನ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿರುವ ಆತ, ತನ್ನ ಅಹವಾಲಿಗೆ ಸ್ಪಂದಿಸದಿದ್ದರೆ ವಿಷ ಸೇವಿಸುವುದಾಗಿ ಎಚ್ಚರಿಕೆ ನೀಡಿದ್ದ.

ಮೃತನನ್ನು ಸಮೀರ್ ಹುಸೇನ್ ಸೈಫಿ ಎಂದು ಗುರುತಿಸಲಾಗಿದೆ. ದೆಹಲಿಯ ಕಲ್ಯಾಣಪುರಿಯಲ್ಲಿ ಫ್ಲಿಪ್‌ಕಾರ್ಟ್ ಮಿನಿಟ್ಸ್ ಡೆಲಿವರಿ ಬಾಯ್ ಆಗಿ ಈತ ಕೆಲಸ ಮಾಡುತ್ತಿದ್ದ. ವಿಷ ಸೇವಿಸಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. 16 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಅಕ್ಟೋಬರ್ 20ರಂದು ಮೃತಪಟ್ಟಿದ್ದಾನೆ.

ತನ್ನ ಕೊನೆಯ ವಿಡಿಯೊದಲ್ಲಿ, ಜಗಳದ ವೇಳೆ ತನಗೆ ಗ್ರಾಹಕ ಕಪಾಳಮೋಕ್ಷ ಮಾಡಿದ್ದರ ಬಗ್ಗೆ ಸಮೀರ್ ಹೇಳಿದ್ದಾನೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿರುವ ಆತ, ಜೀವನೋಪಾಯಕ್ಕಾಗಿ ದುಡಿಯುವಾಗಲೂ ಅವಮಾನ ಮತ್ತು ದುರ್ವರ್ತನೆಗೆ ಗುರಿಯಾಗಬೇಕಾಯಿತು ಎಂದು ನೋವು ತೋಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೊನೆಯ ವಿಡಿಯೊದಲ್ಲಿ ಬೇಸರ ತೋಡಿಕೊಂಡ 'ಫೈನಾನ್ಸ್ ವಿತ್ ಹರೀಶ್' ಖ್ಯಾತಿಯ ಇನ್‌ಫ್ಲುಯೆನ್ಸರ್‌

ತನ್ನ ವಿಡಿಯೊದಲ್ಲಿ ಘಟನೆಯನ್ನು ವಿವರಿಸುತ್ತಾ ಸಮೀರ್, “ಅಕ್ಟೋಬರ್ 4ರಂದು ರಾತ್ರಿ 11.30ರ ಸುಮಾರಿಗೆ ಫ್ಲಿಪ್‌ಕಾರ್ಟ್ ಮಿನಿಟ್ಸ್ ಆರ್ಡರ್ ತಲುಪಿಸಲು ಹೋಗಿದ್ದೆ. ಆಗ ಗ್ರಾಹಕರಿಂದ ಪಡೆದ ಹಣದಲ್ಲಿದ್ದ ಹರಿದ 10 ರೂಪಾಯಿ ನೋಟಿನ ವಿಚಾರದಲ್ಲಿ ವಿವಾದ ಭುಗಿಲೆದ್ದಿತು. ನೋಟು ಬದಲಾಯಿಸುವಂತೆ ಗ್ರಾಹಕರನ್ನು ಕೇಳಿಕೊಂಡೆ. ಆದರೆ ಆ ವಿನಂತಿಗೆ ಅಸಭ್ಯ ವರ್ತನೆ ಮತ್ತು ಹಿಂಸೆಯ ಬೆದರಿಕೆಗಳು ಎದುರಾದವು. ವಾದವು ಅಂತಿಮವಾಗಿ ಹಲ್ಲೆಗೆ ಕಾರಣವಾಯಿತು” ಎಂದು ಹೇಳಿದ್ದ.

“ಹರಿದ ನೋಟನ್ನು ಬದಲಾಯಿಸಿಕೊಡುವಂತೆ ಮಾತ್ರ ನಾನು ಆತನನ್ನು ಕೇಳಿದ್ದೆ. ಆದರೆ, ಆತ ನನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಬೇಕಿದ್ದರೆ ತೆಗೆದುಕೊಳ್ಳಿ, ಇಲ್ಲದಿದ್ದರೆ ಬಿಡಿ ಎಂದು ಹೇಳಿದ” ಎಂದು ಸಮೀರ್ ವಿಡಿಯೊದಲ್ಲಿ ವಿವರಿಸಿದ್ದ.

ವಿವಾದ ತೀವ್ರಗೊಂಡ ಬಳಿಕ ಗ್ರಾಹಕ ತನಗೆ ಮೂರು ಬಾರಿ ಕಪಾಳಮೋಕ್ಷ ಮಾಡಿದ್ದಲ್ಲದೆ, ತನ್ನ ರಾಜಕೀಯ ಸಂಪರ್ಕಗಳ ಬಗ್ಗೆಯೂ ಹೇಳಿಕೊಂಡಿದ್ದ ಎಂದು ಡೆಲಿವರಿ ಬಾಯ್‌ ಸಮೀರ್ ವಿಡಿಯೊದಲ್ಲಿ ತಿಳಿಸಿದ್ದ. ತಾನು ಕಷ್ಟಪಟ್ಟು ದುಡಿದು ಜೀವನ ಸಾಗಿಸಲು ಪ್ರಯತ್ನಿಸುತ್ತಿದ್ದರೂ, ಗ್ರಾಹಕ ತನ್ನ ಮಧ್ಯಮ ವರ್ಗದ ಹಿನ್ನೆಲೆಯ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು ತೀವ್ರ ನೋವುಂಟುಮಾಡಿದೆ ಎಂದು ಸಮೀರ್ ತಿಳಿಸಿದ್ದ.

“ನನ್ನ ಜೀವನದಲ್ಲಿ ನನಗೆ ಅತ್ಯಂತ ನೋವುಂಟುಮಾಡಿದ ಸಂಗತಿಯೆಂದರೆ ಇದೇ. ನಾನು ಕಷ್ಟಪಟ್ಟು ದುಡಿಯುತ್ತಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಜನರು ನನ್ನನ್ನು ಬಡವನೆಂದು ಹೇಳುತ್ತಾರೆ” ಎಂದು ಆತ ಹೇಳಿದ್ದ. “ಅಷ್ಟೊಂದು ಜನರ ಎದುರಲ್ಲೇ ಆತ ನನಗೆ ಹೊಡೆಯುತ್ತಿದ್ದಾಗ, ಅಲ್ಲಿದ್ದವರು ಯಾರಾದರೂ ಆತನನ್ನು ಪ್ರಶ್ನಿಸಬಹುದಿತ್ತು. ಆದರೆ ಯಾರೂ ಏನೂ ಹೇಳಲಿಲ್ಲ. ಆತ ನನಗೆ ಕಪಾಳಮೋಕ್ಷ ಮಾಡಿದ. ಆ ಏಟು ನೇರವಾಗಿ ನನ್ನ ಹೃದಯಕ್ಕೇ ಬಡಿದಂತಾಯಿತು” ಎಂದು ಸಮೀರ್ ನೋವು ತೋಡಿಕೊಂಡಿದ್ದ.