ಭೋಪಾಲ್: ಕರ್ನಾಟಕ ರಾಜ್ಯಪಾಲ (Karnataka Governor) ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ (Devendra Gehlot) ಅವರ ಪತ್ನಿ ದಿವ್ಯಾ ಗೆಹ್ಲೋಟ್ ಅವರು ವರದಕ್ಷಿಣೆ ಕಿರುಕುಳ (Dowry harassment), ಕೊಲೆ ಯತ್ನ, ಕೌಟುಂಬಿಕ ಹಿಂಸೆ ಮತ್ತು ತಮ್ಮ ಅಪ್ರಾಪ್ತ ಮಗಳ ಅಪಹರಣದ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ಅವರ ಗಮನಕ್ಕೆ ವಿಷಯ ತಲುಪಿದ್ದು, ದಿವ್ಯಾ ತುರ್ತು ಕ್ರಮ ಮತ್ತು ತನ್ನ ನಾಲ್ಕು ವರ್ಷದ ಮಗಳನ್ನು ಸುರಕ್ಷಿತವಾಗಿ ಮರಳಿ ಪಡೆಯಲು ಲಿಖಿತ ದೂರು ಸಲ್ಲಿಸಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ನಾಗ್ಡಾದಲ್ಲಿ ತನ್ನ ಅತ್ತೆ-ಮಾವಂದಿರು ಬಲವಂತವಾಗಿ ಇರಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದಿವ್ಯಾ ಅವರ ಪ್ರಕಾರ, ಅವರ ಪತಿ ದೇವೇಂದ್ರ ಗೆಹ್ಲೋಟ್ (33), ಮಾವ ಜಿತೇಂದ್ರ ಗೆಹ್ಲೋಟ್ (55), ಅಲೋಟ್‌ನ ಮಾಜಿ ಶಾಸಕ, ಸೋದರ ಮಾವ ವಿಶಾಲ್ ಗೆಹ್ಲೋಟ್ (25), ಮತ್ತು ಅಜ್ಜಿ ಅನಿತಾ ಗೆಹ್ಲೋಟ್ (60) ಅವರು 50 ಲಕ್ಷ ರೂಪಾಯಿ ವರದಕ್ಷಿಣೆ ಬೇಡಿಕೆಯ ಮೇರೆಗೆ ಕೆಲವು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ವಿವಾಹಕ್ಕೂ ಮೊದಲು ತನ್ನ ಪತಿಯ ಮದ್ಯಪಾನ, ಮಾದಕ ವಸ್ತುಗಳ ವ್ಯಸನ ಹಾಗೂ ಅನೈತಿಕ ಸಂಬಂಧಗಳ ಕುರಿತು ಅತ್ಯಂತ ಪ್ರಮುಖ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚುಮರೆ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.
ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದವಳು ಪ್ರಿಯಕರನ ಮನೆಯಲ್ಲಿ ಪ್ರತ್ಯಕ್ಷ! ಸಾವಿನ ನಾಟಕ ಕೊನೆಗೂ ಬಯಲು
ಈ ದಂಪತಿ ಏಪ್ರಿಲ್ 29, 2018 ರಂದು ಮುಖ್ಯಮಂತ್ರಿಗಳ ಕನ್ಯಾದಾನ ಯೋಜನೆಯಡಿಯಲ್ಲಿ ತಾಲ್ (ಅಲೋಟ್) ನಲ್ಲಿ ವಿವಾಹವಾದರು. ಆಗಿನ ಕೇಂದ್ರ ಸಚಿವೆ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿದಂತೆ ಹಿರಿಯ ನಾಯಕರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮದುವೆ ಬಳಿಕ ದಿವ್ಯಾ ಅವರು ಪತಿ ಮನೆಗೆ ಬಂದ ನಂತರ ತನ್ನ ಗಂಡ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಯಾಗಿದ್ದಾನೆ ಮತ್ತು ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆಂದು ತಿಳಿದುಕೊಂಡಿದ್ದಾಗಿ ಹೇಳಿದ್ದಾರೆ. ದೈಹಿಕ ಹಿಂಸೆ, ಮಾನಸಿಕ ಹಿಂಸೆ ಮತ್ತು ವರದಕ್ಷಿಣೆಗಾಗಿ ಪದೇ ಪದೇ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2021 ರಲ್ಲಿ ತನ್ನ ಗರ್ಭಾವಸ್ಥೆಯಲ್ಲಿ ಕಿರುಕುಳ ತೀವ್ರಗೊಂಡಿತು ಎಂದು ದಿವ್ಯಾ ಹೇಳಿದ್ದಾರೆ. ಸರಿಯಾಗಿ ಆಹಾರ ಕೊಡುತ್ತಿರಲಿಲ್ಲ. ಹೊಡೆಯುತ್ತಿದ್ದರು ಮತ್ತು ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ತನ್ನ ಮಗಳ ಜನನದ ನಂತರವೂ, ದೌರ್ಜನ್ಯ ನಿರಂತರವಾಗಿ ಮುಂದುವರೆಯಿತು. 2019 ರಲ್ಲಿ ರಾಜಿ ಮಾಡಿಕೊಳ್ಳಲು ಪ್ರಯತ್ನ ನಡೆದರೂ, ಏನೂ ಬದಲಾಗಲಿಲ್ಲ, ಪರಿಸ್ಥಿತಿ ಇನ್ನಷ್ಟು ಹದಗೆಟ್ಟವು ಎಂದು ಹೇಳಿದರು.
ಜನವರಿ 26 ರಂದು ತನ್ನ ಪತಿ ಕುಡಿದು ಮನೆಗೆ ಹಿಂತಿರುಗಿದಾಗ ದಿವ್ಯಾ ತನ್ನ ಭಯಾನಕ ರಾತ್ರಿಯನ್ನು ನೆನಪಿಸಿಕೊಂಡಿದ್ದಾರೆ. ಅವನು ತನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ. ಇಂದು ಹಣ ತರದಿದ್ದರೆ, ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ತನ್ನನ್ನು ಛಾವಣಿಯಿಂದ ತಳ್ಳಿದ್ದಾನೆ. ಪರಿಣಾಮ ಕೆಳಗಿನ ಗ್ಯಾಲರಿಗೆ ಬಿದ್ದು ಬೆನ್ನುಮೂಳೆ, ಭುಜ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದವು. ರಾತ್ರಿಯಿಡೀ ತನಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ವರದಕ್ಷಿಣೆ ಕಿರುಕುಳ ದೂರು, ನಿರ್ದೇಶಕ ಎಸ್. ನಾರಾಯಣ್ ಹೇಳುವುದೇನು?
ಮರುದಿನ ಬೆಳಿಗ್ಗೆ, ಆಕೆಯನ್ನು ನಾಗ್ಡಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಘೋಷಿಸಿ ಇಂದೋರ್‌ನ ಬಾಂಬೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ವೈದ್ಯಕೀಯ ವೆಚ್ಚವನ್ನು ಭರಿಸುವಂತೆ ತನ್ನ ತಂದೆಗೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದ್ದಾರೆ.
ಇದೀಗ ಅತ್ತೆ-ಮಾವ ತನ್ನ 4 ವರ್ಷದ ಮಗಳನ್ನು ಬಲವಂತವಾಗಿ ಇಟ್ಟುಕೊಂಡಿದ್ದಾರೆ ಮತ್ತು ಮಗುವನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ನವೆಂಬರ್‌ನಲ್ಲಿ ತನ್ನ ಮಗಳನ್ನು ನೋಡಲು ಶಾಲೆಗೆ ಭೇಟಿ ನೀಡಿದಾಗ, ತನ್ನ ಪತಿ ಅವಳನ್ನು ತಡೆದು, ನಿನ್ನ ಪೋಷಕರಿಂದ ಹಣವನ್ನು ತರದ ಹೊರತು, ನಿಮ್ಮ ಮಗಳನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಒಬ್ಬ ತಾಯಿ ಮಾತ್ರ ತನ್ನ ಮಗುವನ್ನು ಸರಿಯಾಗಿ ನೋಡಿಕೊಳ್ಳಬಹುದು. ನನಗೆ ನನ್ನ ಮಗಳು ಮರಳಿ ಬೇಕು ಎಂದು ಅವರು ತಮ್ಮ ದೂರಿನಲ್ಲಿ ಅವಲತ್ತುಕೊಂಡಿದ್ದಾರೆ.