ಲಖನೌ, ಮೇ 26: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಯಾನಕ ಘಟನೆಯೊಂದು ವರದಿಯಾಗಿದೆ (Lakhimpur Kheri Horror). ಮದ್ಯದ ಅಮಲಿನಲ್ಲಿ ತಂದೆ ಮತ್ತು ಮಗನ ನಡುವೆ ಆರಂಭವಾ ಸಣ್ಣ ಜಗಳವು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ತಂದೆಯೇ ತನ್ನ 30 ವರ್ಷದ ಮಗನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯು ಭಾನುವಾರ (ಮೇ 24) ಮುಂಜಾನೆ ಲಖಿಂಪುರ್ ಖೇರಿಯ ಭವಾನಿಪುರದಲ್ಲಿ ನಡೆದಿದೆ. ಮೃತನನ್ನು ಮುನೀಶ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆಯ ಸಮಯದಲ್ಲಿ ಮುನೀಶ್ ಮತ್ತು ಆತನ ತಂದೆಯಾದ ದಯಾರಾಮ್ ಇಬ್ಬರೂ ಅತಿಯಾಗಿ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ.
ಈ ವೇಳೆ ಸಣ್ಣ ವಿಚಾರಕ್ಕೆ ಜಗಳ ಶುರುವಾಗಿ ಮಗನಾದ ಮುನೀಶ್ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಇದರಿಂದ ಕೋಪಗೊಂಡ ತಂದೆ ದಯಾರಾಮ್, ಮದ್ಯದ ಅಮಲಿನಲ್ಲಿ ಮನೆಯಲ್ಲಿದ್ದ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಮುನೀಶ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಪ್ರಿಯಕರ, ಸಹೋದರಿಯೊಂದಿಗೆ ಸೇರಿ ಪತಿಗೆ ಸ್ಕೆಚ್; ಚಿತ್ರಹಿಂಸೆ ಕೊಟ್ಟು ಗಂಡನನ್ನೇ ಕೊಂದ ಪತ್ನಿ
ತನ್ನ ಕೈಯಿಂದಲೇ ಮಗನ ಕೊಲೆಯಾದ ನಂತರ ಗಾಬರಿಗೊಂಡ ದಯಾರಾಮ್, ಈ ಅಪರಾಧದಿಂದ ಮತ್ತು ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ್ದಾನೆ. ಕೊಲೆಯನ್ನು ಮರೆಮಾಚುವ ಉದ್ದೇಶದಿಂದ ಆತ ಮುನೀಶ್‌ನ ಮೃತದೇಹವನ್ನು ಯಾರಿಗೂ ತಿಳಿಯದಂತೆ ಮನೆಯ ಒಳಗಡೆಯೇ ಬಚ್ಚಿಟ್ಟಿದ್ದ. ಆದರೆ ಮುನೀಶ್ ಮನೆಯಿಂದ ಹೊರಗೆ ಬಾರದೇ ಇದ್ದಾಗ ಗ್ರಾಮಸ್ಥರಿಗೆ ಮತ್ತು ಸಂಬಂಧಿಕರಿಗೆ ಅನುಮಾನ ಕಾಡಿತ್ತು.
ಘಟನೆ ನಡೆದು ಹಲವು ಗಂಟೆಗಳು ಕಳೆದ ನಂತರ, ಅಂದರೆ ಭಾನುವಾರ ಸಂಜೆ ಆರೋಪಿ ದಯಾರಾಮ್‌ನ ಸಹೋದರಿ ಸ್ಥಳೀಯ ಭೀರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಮಾಹಿತಿ ಸಿಗುತ್ತಿದ್ದಂತೆಯೇ ಗೋಲಾ ವೃತ್ತದ ಪೊಲೀಸ್ ಅಧಿಕಾರಿ ರಮೇಶ್ ತಿವಾರಿ ನೇತೃತ್ವದ ಪೊಲೀಸ್ ತಂಡವು ತಕ್ಷಣವೇ ಗ್ರಾಮದ ಆ ಮನೆಗೆ ಧಾವಿಸಿತು. ಪೊಲೀಸರು ಸ್ಥಳದಲ್ಲೇ ಆರೋಪಿ ತಂದೆ ದಯಾರಾಮ್‌ನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ನಂತರ ಮಗನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಭೀಕರ ಅಪರಾಧಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ದಯಾರಾಮ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ʼʼತಂದೆ ಮತ್ತು ಮಗ ಇಬ್ಬರೂ ಮದ್ಯದ ಅಮಲಿನಲ್ಲಿದ್ದಾಗ ನಡೆದ ಸಣ್ಣ ವಿವಾದವೇ ಈ ದುರಂತ ಕೊಲೆಗೆ ಪ್ರಮುಖ ಕಾರಣʼʼ ಎಂದು ಪೊಲೀಸ್ ಅಧಿಕಾರಿ ರಮೇಶ್ ತಿವಾರಿ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.