ಕೋಲ್ಕತ್ತಾ: ಸುಲಿಗೆ, ಕ್ರಿಮಿನಲ್ ಬೆದರಿಕೆ ಆರೋಪಕ್ಕೆ ಸಂಬಂಧಿಸಿ ಮತ್ತೊಬ್ಬ ತೃಣಮೂಲ ಕೌನ್ಸಿಲರ್ (TMC councillor) ಅನ್ನು ಬುಧವಾರ ಬಂಧಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ (West bengal) ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತೃಣಮೂಲ ಕಾಂಗ್ರೆಸ್ (Trinamool congress) ನಾಯಕರ ವಿರುದ್ಧ ಆರೋಪ, ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಇದರೊಂದಿಗೆ ವಿವಿಧ ಪ್ರಕರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ ನಾಯಕರ ಬಂಧನ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಇದೀಗ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ ನ ಕೌನ್ಸಿಲರ್ ಮತ್ತು ಪಕ್ಷದ ವಕ್ತಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಸುಲಿಗೆ, ವಂಚನೆ, ಕ್ರಿಮಿನಲ್ ಬೆದರಿಕೆ ಮತ್ತು ಆಸ್ತಿ ವಿವಾದಗಳವರೆಗಿನ ಆರೋಪಗಳ ಮೇಲೆ ತೃಣಮೂಲ ಕಾಂಗ್ರೆಸ್ ನ ಹಲವು ಕೌನ್ಸಿಲರ್‌ಗಳು ಮತ್ತು ಪಕ್ಷದ ವಕ್ತಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ದೇಶವ್ಯಾಪಿ ಕಾಂಗ್ರೆಸ್ ಪುನರ್‌ರಚನೆಗೆ ಚಾಲನೆ: ಹಲವು ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆ
2025ರ ಜನವರಿ 7ರಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ವಾರ್ಡ್ ಸಂಖ್ಯೆ 42 ರ ಕೌನ್ಸಿಲರ್ ಮಹೇಶ್ ಕುಮಾರ್ ಶರ್ಮಾ ಅವರನ್ನು ಬುಧವಾರ ಬುರ್ರಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ, ಫೋರ್ಜರಿ, ಸುಲಿಗೆ ಮತ್ತು ಬೆದರಿಕೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಮಹೇಶ್ ಕುಮಾರ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಬಂಧನಕ್ಕೆ ಕಾರಣವಾದ ನಿರ್ದಿಷ್ಟ ಆರೋಪಗಳೇನು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನರ್ಕೆಲ್ಡಂಗಾ ಪ್ರದೇಶದ ವಾರ್ಡ್ ಸಂಖ್ಯೆ 36 ರ ಟಿಎಂಸಿ ಕೌನ್ಸಿಲರ್ ಸಚಿನ್ ಸಿಂಗ್ ಎಂಬವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಸುಲಿಗೆ ಮತ್ತು ಅಕ್ರಮ ಚಟುವಟಿಕೆ ಹಲವು ದೂರುಗಳನ್ನು ದಾಖಲಿಸಲಾಗಿದೆ.
ಸಚಿನ್ ಸಿಂಗ್ ವಿರುದ್ಧ ದೀರ್ಘಕಾಲ ಪಾರ್ಕಿಂಗ್ ನಿರ್ವಾಹಕರು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಂದ ಹಣ ಸಂಗ್ರಹ, ನಾಗರಿಕ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿ ಲಂಚ ಸ್ವೀಕಾರ, ಬೆದರಿಕೆ ಮತ್ತು ಹಲ್ಲೆ ಆರೋಪವಿದೆ.
ಮತ್ತೊಂದು ಪ್ರಕರಣದಲ್ಲಿ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನ ವಾರ್ಡ್ ಸಂಖ್ಯೆ 123 ರ ಕೌನ್ಸಿಲರ್ ಸುದೀಪ್ ಪೊಲ್ಲಿ ಎಂಬವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಆರೋಪವಿದೆ. ಇವರನ್ನು ಅಲಿಪೋರ್‌ನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಹೋದಾಗ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಮೊಟ್ಟೆ ಮತ್ತು ಬೂಟುಗಳನ್ನು ಎಸೆದು ದಾಳಿ ನಡೆಸಿದರು.
ಇನ್ನೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ಮತ್ತು ಅವರ ಆಸ್ತಿ ಮೇಲೆ ಅತಿಕ್ರಮಣ ಆರೋಪದಲ್ಲಿ ಟಿಎಂಸಿ ವಕ್ತಾರ ಮತ್ತು ರಾಜ್ಯ ಉಪಾಧ್ಯಕ್ಷ ಜಯ ಪ್ರಕಾಶ್ ಮಜುಂದಾರ್ ಅವರನ್ನು ಬಂಧಿಸಿದ್ದಾರೆ. ಆರತಿ ರಾಯ್ ಚೌಧರಿ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಸುಮಾರು 12 ವರ್ಷಗಳ ಹಿಂದೆ ಬಾಡಿಗೆದಾರರಾಗಿದ್ದ ಮಜುಂದಾರ್ ಬಾಡಿಗೆ ಪಾವತಿಸುವುದನ್ನು ನಿಲ್ಲಿಸಿ ವಾಸಿಸುವುದನ್ನು ಮುಂದುವರೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ತೃಣಮೂಲ ಕಾಂಗ್ರೆಸ್ ಪಕ್ಷದೊಳಗೆ ಉದ್ವಿಗ್ನತೆ ಹೆಚ್ಚಾಗಿದೆ. ಇತ್ತೀಚೆಗೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ನಡೆದಿರುವ ದಾಳಿ ಅವರ ವಿರುದ್ದದ ಅಸಮಾಧಾನದ ಕಾರಣದಿಂದಾಗಿ ಎನ್ನಲಾಗುತ್ತಿದೆ. ಬಂಗಾ ಭವನದಲ್ಲಿ ಮೇ 22 ರಂದು ಬಂಡಾಯ ಟಿಎಂಸಿ ಶಾಸಕಿ ಋತಬ್ರತಾ ಬ್ಯಾನರ್ಜಿ ಮತ್ತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನಡುವಿನ ಆಕಸ್ಮಿಕ ಸಭೆಯ ಬಳಿಕ ಈ ಉದ್ವಿಗ್ನತೆ ಇನ್ನಷ್ಟು ಹೆಚ್ಚಳವಾಗಿದೆ.
ಡಾರ್ಕ್ ಪ್ಯಾಟರ್ನ್ ವಿರುದ್ಧ CCPA ಕಠಿಣ ಕ್ರಮ: 5 ಲಕ್ಷದವರೆಗೆ ದಂಡಾಸ್ತ್ರ
ಋತಬ್ರತಾ ಬ್ಯಾನರ್ಜಿ ಅವರು ಬುಧವಾರ 60 ಶಾಸಕರೊಂದಿಗೆ ಪಕ್ಷದ ಶಾಸಕಾಂಗ ಘಟಕದ ನಿಯಂತ್ರಣವನ್ನು ಪಡೆದುಕೊಂಡರು. ಈ ಶಾಸಕರು ಅವರನ್ನು ತಮ್ಮ ನಾಯಕಿಯಾಗಿ ಆಯ್ಕೆ ಮಾಡಿ ವಿಧಾನಸಭೆ ಸ್ಪೀಕರ್‌ನಿಂದ ಔಪಚಾರಿಕ ಮಾನ್ಯತೆಯನ್ನು ಕೂಡ ಪಡೆದುಕೊಂಡರು. ಇದು ಪಕ್ಷದೊಳಗಿನ ಅತ್ಯಂತ ಗಂಭೀರವಾದ ಆಂತರಿಕ ಬಿಕ್ಕಟ್ಟುನ್ನು ಸೂಚಿಸಿದೆ.