ಡಾರ್ಕ್ ಪ್ಯಾಟರ್ನ್ ವಿರುದ್ಧ CCPA ಕಠಿಣ ಕ್ರಮ: 5 ಲಕ್ಷದವರೆಗೆ ದಂಡಾಸ್ತ್ರ
CCPA: ಡಿಜಿಟಲ್, ಇ ಕಾಮರ್ಸ್ ವೇದಿಕೆಗಳಲ್ಲಿ ಕರಾಳ ಮಾದರಿ (ಡಾರ್ಕ್ ಪ್ಯಾಟರ್ನ್) ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, 2 ಪ್ರಮುಖ ಕಂಪನಿಗಳಿಗೆ ₹ 5 ಲಕ್ಷದವರೆಗೆ ದಂಡ ವಿಧಿಸಿದ್ದಲ್ಲದೆ, ಗ್ರಾಹಕರನ್ನು ಮೋಸಗೊಳಿಸದಂತೆ ನಿರ್ದೇಶನ ನೀಡಿದೆ. ಈ ಕುರಿತ ವಿವರ ಇಲ್ಲಿದೆ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಸಂಗ್ರಹ ಚಿತ್ರ. -
ನವದೆಹಲಿ, ಜೂ. 3: ಡಿಜಿಟಲ್, ಇ ಕಾಮರ್ಸ್ ವೇದಿಕೆಗಳಲ್ಲಿ ಕರಾಳ ಮಾದರಿ (ಡಾರ್ಕ್ ಪ್ಯಾಟರ್ನ್) ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಳ್ಳುತ್ತಿದ್ದು, 2 ಪ್ರಮುಖ ಕಂಪನಿಗಳಿಗೆ ₹5 ಲಕ್ಷದವರೆಗೆ ದಂಡ ವಿಧಿಸಿದ್ದಲ್ಲದೆ, ಗ್ರಾಹಕರನ್ನು ಮೋಸಗೊಳಿಸದಂತೆ ನಿರ್ದೇಶನ ನೀಡಿದೆ. ಡಾರ್ಕ್ ಪ್ಯಾಟರ್ನ್‌ನಿಂದಾಗಿ ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದ PhysicsWallah ಮತ್ತು McAfee ಕಂಪನಿ ವಿರುದ್ಧ ಸ್ವಯಂ ಕಾರ್ಯಾಚರಣೆ ನಡೆಸಿದ ಸಿಸಿಪಿಎ, ಫಿಸಿಕ್ಸ್ ವಲ್ಲಾಹ್‌ಗೆ ₹ 5 ಲಕ್ಷ ಮತ್ತು ಮ್ಯಾಕ್‌ಅಫೀ ಗೆ ₹ 1 ಲಕ್ಷ ದಂಡ ವಿಧಿಸಿದೆ.
ಪಾರದರ್ಶಕ, ನ್ಯಾಯಯುತ ಮತ್ತು ಗ್ರಾಹಕ ಸ್ನೇಹಿ ಡಿಜಿಟಲ್ ಮಾರುಕಟ್ಟೆ ಲಭ್ಯವಾಗುವಂತೆ CCPA ಡಿಜಿಟಲ್ ವೇದಿಕೆಗಳ ಮೇಲೆ ಕಣ್ಣಿಟ್ಟಿದ್ದು, ಸ್ಪಷ್ಟ-ಅಗತ್ಯ ಮಾಹಿತಿಯುಕ್ತ ಮತ್ತು ಕುಶಲ ವಿನ್ಯಾಸ ಅಭ್ಯಾಸಗಳಿಂದ ಮುಕ್ತವಾಗಿರಬೇಕು, ಗ್ರಾಹಕರನ್ನು ದುರ್ಬಲಗೊಳಿಸುವ ಕ್ರಮವನ್ನು ನಿಲ್ಲಿಸಬೇಕೆಂದು ಸೂಚಿಸಿದೆ.
CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಗ್ರಾಹಕರನ್ನು ದಾರಿ ತಪ್ಪಿಸುವ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಯ್ಕೆಗಳ ಮೇಲೆ ಪ್ರಭಾವ ಬೀರುವ ಡಾರ್ಕ್ ಪ್ಯಾಟರ್ನ್ ಬಳಸಿದ್ದಕ್ಕಾಗಿ ಫಿಸಿಕ್ಸ್ ವಲ್ಲಾಹ್ ಲಿಮಿಟೆಡ್ ಮತ್ತು ಮ್ಯಾಕ್‌ಅಫೀ ಸಾಫ್ಟ್‌ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಮೊದಲೇ ಆಯ್ಕೆ ಮಾಡಿದ ದೇಣಿಗೆ ಮತ್ತು ದಾರಿ ತಪ್ಪಿಸುವ 'ಉಚಿತ' ಕೋರ್ಸ್ ಫಿಸಿಕ್ಸ್‌ವಲ್ಲಾ ಪ್ಲಾಟ್‌ಫಾರ್ಮ್ ಕೆಲ ಲೋಪಗಳನ್ನು ಅರಿತ CCPA ಸ್ವಯಂ ಪ್ರೇರಿತವಾಗಿ ಪರಿಶೀಲನೆ ನಡೆಸಿದೆ. ಗ್ರಾಹಕರು ಇಂಟರ್ಫೇಸ್ ವಿನ್ಯಾಸಗಳ ಮೂಲಕ ಪ್ರಭಾವಿತರಾಗುತ್ತಿರುವುದನ್ನು ಪತ್ತೆ ಹಚ್ಚಿದೆ.
ಕಡ್ಡಾಯ ನೋಂದಣಿ ಮತ್ತು ಡೇಟಾ ಹಂಚಿಕೆ ಅವಶ್ಯಕತೆಗಳ ಬಗ್ಗೆ ಬಳಕೆದಾರರಿಗೆ ಸ್ಪಷ್ಟವಾಗಿ ತಿಳಿಸದೆ ಕೋರ್ಸ್‌ಗಳನ್ನು "ಉಚಿತ" ಎಂದು ಜಾಹೀರಾತು ಮಾಡುವುದು ದಾರಿ ತಪ್ಪಿಸುವ, ಅನ್ಯಾಯದ ವ್ಯಾಪಾರ ಪದ್ಧತಿ. ನಿಬಂಧನೆ ಆಗ ಉಲ್ಲಂಘಿಸಿದೆ. ಹೀಗಾಗಿ ಫಿಸಿಕ್ಸ್ ವಲ್ಹಾ ಲಿಮಿಟೆಡ್ ಡಿಜಿಟಲ್ ಇಂಟರ್‌ಫೇಸ್‌ಗಳಲ್ಲಿ ಯಾವುದೇ ಡಾರ್ಕ್ ಪ್ಯಾಟರ್ನ್‌ಗಳನ್ನು ನಿಯೋಜಿಸಬಾರದು ಮತ್ತು ಈಗಾಗಲೇ ಆಗಿರುವ ಲೋಪಕ್ಕೆ ₹5,00,000 ದಂಡ ಪಾವತಿಸತಕ್ಕದ್ದೆಂದೂ ನಿರ್ದೇಶಿಸಲಾಗಿದೆ.
ಇನ್ನು, ಮ್ಯಾಕ್‌ಅಫೀ ಸಾಫ್ಟ್‌ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚಂದಾದಾರಿಕೆ ನವೀಕರಣ ಇಂಟರ್ಫೇಸ್ ದಾರಿ ತಪ್ಪಿಸುವಂತಿದೆ. ಬಳಕೆದಾರರಿಗೆ ಪ್ರಮುಖವಾಗಿ 2 ಆಯ್ಕೆಗಳನ್ನು ತೋರಿಸಿದೆ. "ಈಗ ನವೀಕರಿಸಿ" ಮತ್ತು "ಅಪಾಯವನ್ನು ಸ್ವೀಕರಿಸಿ" ನವೀಕರಿಸದಿರುವುದನ್ನು ಅಪಾಯಕಾರಿ ನಿರ್ಧಾರವೆಂದು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. "ಅಪಾಯವನ್ನು ಸ್ವೀಕರಿಸಿ" ಎಂಬುದು ಗ್ರಾಹಕರು ಚಂದಾದಾರಿಕೆ ನವೀಕರಿಸದಿದ್ದರೆ ಸೈಬರ್ ಭದ್ರತಾ ಬೆದರಿಕೆಗಳಿಗೆ ಒಡ್ಡಿಕೊಳ್ಳುತ್ತಾರೆ ಎಂದು ಸೂಚಿಸುತ್ತದೆ. ಅಂತಹ ಹಕ್ಕನ್ನು ಕಂಪನಿಯು ಸಮರ್ಥಿಸಲು ಅಥವಾ ಖಾತರಿಪಡಿಸಲು ಸಾಧ್ಯವಿಲ್ಲ ಎಂದು CCPA ಸ್ಪಷ್ಟಪಡಿಸಿದೆ.
ಮ್ಯಾಕ್‌ಅಫೀ ಸಾಫ್ಟ್‌ವೇರ್ ಲಿಮಿಟೆಡ್ ತನ್ನ ಪ್ಲಾಟ್‌ಫಾರ್ಮ್, ವೆಬ್‌ಸೈಟ್, ಅಪ್ಲಿಕೇಶನ್ ಅಥವಾ ಯಾವುದೇ ಇತರ ಡಿಜಿಟಲ್ ಇಂಟರ್‌ಫೇಸ್‌ನಲ್ಲಿ ಯಾವುದೇ ಡಾರ್ಕ್ ಪ್ಯಾಟರ್ನ್‌ಗಳನ್ನು ಬಳಸಬಾರದು ಮತ್ತು ಈವರೆಗಿನ ತಪ್ಪಿಗೆ ₹1,00,000 ದಂಡ ಪಾವತಿಸುವಂತೆ CCPA ನಿರ್ದೇಶಿಸಿದೆ.
UPSC Coaching: 'ಯುಪಿಎಸ್‌ಸಿ' ಸುಳ್ಳು ಜಾಹೀರಾತು ನೀಡಿದ ಕೋಚಿಂಗ್ ಸೆಂಟರ್‌ಗೆ 7 ಲಕ್ಷ ದಂಡ
ಡಾರ್ಕ್ ಪ್ಯಾಟರ್ನ್ ವಿರುದ್ಧ CCPA ನಿರಂತರ ಕ್ರಮ
ಡಾರ್ಕ್ ಪ್ಯಾಟರ್ನ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿ ಹೊರಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ CCPA. ನವೆಂಬರ್ 30, 2023ರಲ್ಲಿ ವ್ಯಾಪಕ ಸಮಾಲೋಚನೆ ನಡೆಸಿ ಬಾಸ್ಕೆಟ್ ಸ್ನೀಕಿಂಗ್, ದೃಢೀಕರಣ ಶೇಮಿಂಗ್, ಬಲವಂತದ ಕ್ರಿಯೆ, ಇಂಟರ್ಫೇಸ್ ಹಸ್ತಕ್ಷೇಪ ಮತ್ತು ಟ್ರಿಕ್ ಪ್ರಶ್ನೆಗಳು ಸೇರಿದಂತೆ ಅನ್ಯಾಯದ ವ್ಯಾಪಾರ ಅಭ್ಯಾಸಗಳೆಂದು ಪರಿಗಣಿಸಲಾದ 13 ಡಾರ್ಕ್ ಪ್ಯಾಟರ್ನ್‌ಗಳನ್ನು ಗುರುತಿಸಿ, ಅವನ್ನು ತೆಗೆದುಹಾಕುವಂತೆ ಒಂದು ವರ್ಷದ ಹಿಂದೆಯೇ ಆದೇಶಿಸಿದೆ. ಈಗ ಲಕ್ಷಾಂತರ ರೂಪಾಯಿ ದಂಡ ವಿಧಿಸುವ ಮೂಲಕ ನಿಯಂತ್ರಣಕ್ಕೆ ಮುಂದಾಗಿದೆ.