ಲಖನೌ, ಫೆ. 2: ಉತ್ತರ ಪ್ರದೇಶದ (Uttar Pradesh) ದಿಯೋರಿಯಾ (Deoria) ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಬಾಲಕನೋರ್ವನಿಗೆ ಮೊಮೊಸ್ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ (Momo Scam) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಉಚಿತವಾಗಿ ಮೊಮೋಸ್ ನೀಡುವ ಆಸೆಯನ್ನು ತೋರಿಸಿ ದುಷ್ಕರ್ಮಿಗಳ ತಂಡವೊಂದು 7ನೇ ತರಗತಿಯ ಬಾಲಕನ ಕುಟುಂಬದ ಸುಮಾರು 85 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು(Jewellery Fraud) ದೋಚಿದೆ.
ಹೌದು, 7ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬನ ಸಣ್ಣ ಆಸೆ ಇಂದು ಆತನ ಕುಟುಂಬವನ್ನ ಸಂಕಷ್ಟಕ್ಕೆ ತಳ್ಳಿದೆ. ಮೊಮೊಸ್ ತಿನ್ನುವ ಅಭ್ಯಾಸವಿದ್ದ ಈ ಬಾಲಕನಿಗೆ ಆರಂಭದಲ್ಲಿ ಉಚಿತವಾಗಿ ಆಹಾರ ನೀಡಿ ಸ್ನೇಹ ಬೆಳೆಸಿಕೊಂಡ ಮೂವರು ವ್ಯಾಪಾರಿಗಳು, ನಿಧಾನವಾಗಿ ಅವನ ವಿಶ್ವಾಸವನ್ನು ಗಳಿಸಿದ್ದಾರೆ. ನಂತರ ಮೊಮೋಸ್‌ಗಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತರಬೇಕೆಂದು ಪ್ರೇರೇಪಿಸಿದ್ದಾರೆ. ಹೀಗೆ ಬಾಲಕನಿಂದ ಸುಮಾರು 85 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಬಾಲಕನ ತಂದೆ ವಿಮಲೇಶ್ ಮಿಶ್ರಾ ಪೊಲೀಸರಿಗೆ ದೂರು ನೀಡಿದ್ದಾರೆ. ದೇವಾಲಯದಲ್ಲಿ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿರುವ ಮಿಶ್ರಾ, ತಮ್ಮ ಮಗನಿಗೆ ಮೊಮೊಸ್ ಮೇಲೆ ಇರುವ ಆಸೆಯನ್ನು ಗಮನಿಸಿದ ಬೀದಿ ವ್ಯಾಪಾರಿಗಳು ಅದನ್ನೇ ತಮ್ಮ ದುಷ್ಕೃತ್ಯಕ್ಕೆ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಮನೆಯಲ್ಲಿದ್ದ ಬೆಲೆ ಬಾಳುವ ಆಭರಣಗಳನ್ನು ಆತನ ಮೂಲಕ ತರಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ
ಆರಂಭದಲ್ಲಿ ಉಚಿತವಾಗಿ ಮೊಮೊಸ್ ನೀಡಿದ್ದು, ಬಳಿಕ, ಆಭರಣಗಳನ್ನು ತಂದುಕೊಟ್ಟರೆ ನಿನ್ನ ಇಷ್ಟದ ತಿಂಡಿಯನ್ನು ನೀಡುವಂತೆ ಆಮಿಷವೊಡ್ಡಲಾಗಿದೆ ಎನ್ನಲಾಗಿದೆ. ಬಾಲಕ ತನ್ನ ಮನೆಯ ಲಾಕರ್‌ನಲ್ಲಿದ್ದ ಚಿನ್ನಾಭರಣಗಳನ್ನು ಹಂತ ಹಂತವಾಗಿ ತೆಗೆದುಕೊಂಡು ಹೋಗಿ ಒಪ್ಪಿಸಿದ್ದಾನೆ. ಮನೆಯ ಲಾಕರ್‌ನಲ್ಲಿದ್ದ ಆಭರಣಗಳನ್ನು ಯಾರಿಗೂ ತಿಳಿಯದಂತೆ ತೆಗೆದುಕೊಂಡು ಹೋಗಿ ಅವರಿಗೆ ಒಪ್ಪಿಸಿದ್ದಾನೆ. ಹೀಗೆ ಹಲವು ದಿನಗಳ ಕಾಲ ಚಿನ್ನಾಭರಣಗಳು ಕಣ್ಮರೆಯಾಗುತ್ತಿದ್ದರೂ, ಕುಟುಂಬದವರಿಗೆ ಆರಂಭದಲ್ಲಿ ಅನುಮಾನ ಬಂದಿರಲಿಲ್ಲ. ಪ್ರಕರಣ ಬೆಳಕಿಗೆ ಬಂದ ನಂತರ, ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದೇಗೆ?
ವಿಮಲೇಶ್ ಮಿಶ್ರಾ ಅವರ ಸಹೋದರಿ, ಅಂದರೆ ಬಾಲಕನ ಅತ್ತೆ, ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಅಚ್ಚರಿಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಆಭರಣವನ್ನು ಕೇಳಿದ ಹಿನ್ನೆಲೆಯಲ್ಲಿ, ವಿಮಲೇಶ್ ಕಬೋರ್ಡ್ ತೆರೆಯುತ್ತಿದ್ದಂತೆ ಒಳಗಿದ್ದ ಬಹುತೇಕ ಚಿನ್ನಾಭರಣಗಳು ಕಾಣೆಯಾಗಿರುವುದು ಗೊತ್ತಾಗಿದೆ. ಇದರಿಂದ ಕುಟುಂಬದವರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಗಾಬರಿಗೊಂಡ ಪೋಷಕರು ತಕ್ಷಣ ಬಾಲಕನನ್ನು ವಿಚಾರಿಸಿದಾಗ, ಆತ ಯಾವುದೇ ಸಂಕೋಚ ಇಲ್ಲದೆ ಸತ್ಯವನ್ನು ಬಹಿರಂಗಪಡಿಸಿದ್ದಾನೆ. “ಮೊಮೊಸ್ ಉಚಿತವಾಗಿ ಕೊಡ್ತೇನೆ ಎಂದು ಹೇಳಿದ್ದರು. ಅದಕ್ಕಾಗಿಯೇ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅಂಗಡಿಯವರಿಗೆ ಕೊಟ್ಟೆ” ಎಂದು ಆತ ಹೇಳಿಕೊಂಡಿದ್ದಾನೆ. ಬಾಲಕನ ಈ ಉತ್ತರ ಕೇಳಿ ಕುಟುಂಬದವರು ಬೆಚ್ಚಿ ಬಿದ್ದಿದ್ದಾರೆ.
ಕೆಲ್ಸ ಬಿಟ್ಟು ಮೊಮೊಸ್ ಮಾರೋದೇ ಬೆಟರ್... ಈತನ ತಿಂಗಳ ಸಂಪಾದನೆ ಕೇಳಿದ್ರೆ ಶಾಕ್ ಆಗುತ್ತೆ!
ಈ ಘಟನೆ ಬಳಿಕ ವಿಮಲೇಶ್ ಮಿಶ್ರಾ ತಕ್ಷಣ ರಾಂಪುರ ಕಾರ್ಖಾನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಪರಾರಿಯಾಗಿರುವ ಕಾರಣ, ಅವರನ್ನು ಪತ್ತೆಹಚ್ಚಲು ವಿಶೇಷ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.