ಸರ್ಕಾರಿ ನೌಕರ ಅಬ್ದುಲ್ ಸಲಾಂನಿಂದ ಸಹೋದ್ಯೋಗಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ; ವಿಡಿಯೋ ವೈರಲ್ ಮಾಡುವ ಬೆದರಿಕೆ
ಉತ್ತರ ಪ್ರದೇಶದ ಹಮೀರಪುರ ಜಿಲ್ಲೆಯಲ್ಲಿ, ಮಹಿಳಾ ಸಹೋದ್ಯೋಗಿಯ 16 ವರ್ಷದ ಮಗಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಯ ಆರೋಪದ ಹಿನ್ನೆಲೆಯಲ್ಲಿ ಜಲ ಸಂಸ್ಥಾನದ ಉದ್ಯೋಗಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಅಬ್ದುಲ್ ಸಲಾಮ್ (ಆರಿಫ್) ಎಂದು ಗುರುತಿಸಲಾಗಿದೆ. ಆರೋಪಿಯು ಅಪ್ರಾಪ್ತೆಯನ್ನು ಲೈಂಗಿಕವಾಗಿ ಹಿಂಸಿಸಿ, ಅವಳ ಅಶ್ಲೀಲ ವಿಡಿಯೊ ಮತ್ತು ಫೋಟೊಗಳನ್ನು ವೈರಲ್ ಮಾಡುವ ಬೆದರಿಕೆ ನೀಡಿ ನಿರಂತರವಾಗಿ ಲೈಂಗಿಕ ಶೋಷಣೆ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿ ಅಬ್ದುಲ್ ಸಲಾಂ -
ಲಖನೌ, ಜ. 5: ಉತ್ತರ ಪ್ರದೇಶ (Uttar Pradesh)ದ ಹಮೀರ್‌ಪುರ (Hamirpur) ಜಿಲ್ಲೆಯಲ್ಲಿ ಮಹಿಳಾ ಸಹೋದ್ಯೋಗಿಯೊಬ್ಬರ 16 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಅಶ್ಲೀಲ ವಿಡಿಯೊಗಳನ್ನು ರೆಕಾರ್ಡ್ ಮಾಡಿ ಬೆದರಿಕೆಯೊಡ್ಡಿದ ಆರೋಪದ ಮೇಲೆ ಜಲ ಸಂಸ್ಥಾನ (Jal Sansthan)ದ ಉದ್ಯೋಗಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಅಬ್ದುಲ್ ಸಲಾಂ (Abdul Salam) ಅಲಿಯಾಸ್ ಆರಿಫ್ (Arif) ಎಂದು ಗುರುತಿಸಲಾಗಿದ್ದು, ಈತ ಮೌಧಾ(Maudha) ತಹಸಿಲ್ ವ್ಯಾಪ್ತಿಯ ನಾಯಕ್‌ಪುರ್ವಾ ಇಚೌಲಿಯಲ್ಲಿರುವ ಜಲ ಸಂಸ್ಥಾನ ಘಟಕದಲ್ಲಿ ನಾಲ್ಕನೇ ದರ್ಜೆಯ ನೌಕರ.
ಆರೋಪಿಯು ಅಪ್ರಾಪ್ತೆಗೆ ಆಮಿಷವೊಡ್ಡಿ ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಅಶ್ಲೀಲ ವಿಡಿಯೊ ಹಾಗೂ ಫೋಟೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ ನಿರಂತರ ಲೈಂಗಿಕ ಶೋಷಣೆಗೆ ಒತ್ತಾಯಿಸುತ್ತಿದ್ದ. ಸಂತ್ರಸ್ತೆಯು ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತನ್ನ ತಾಯಿಗೆ ತಿಳಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಆರಿಫ್ ನೀರಿನ ತೆರಿಗೆ ಬಿಲ್‌ಗಳನ್ನು ನೀಡುವುದು, ಬಿಲ್‌ನ ಹಣವನ್ನು ಸಂಗ್ರಹಿಸುವುದು ಮತ್ತು ಪೈಪ್‌ಲೈನ್ ದುರಸ್ತಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದ. ಮೌಧಾದಲ್ಲಿರುವ ಜಲ ಸಂಸ್ಥಾನ ಕ್ಯಾಂಪಸ್‌ನಲ್ಲಿ ಆತ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಸಂತ್ರಸ್ತೆಯ ತಾಯಿಯೂ ಹಮೀರ್‌ಪುರ ಘಟಕದ ಜಲ ಸಂಸ್ಥಾನದಲ್ಲಿ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಮಾತನಾಡಿದ ಅಪರಾಧ ನಿರೀಕ್ಷಕ ಡಿ.ಕೆ. ಮಿಶ್ರಾ, "ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಸದ್ಯ ಆತನನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ನ್ಯಾಯಾಲಯದ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.
ಅಪ್ರಾಪ್ತೆ ಮೇಲೆ ಸರ್ಕಾರಿ ನೌಕರನಿಂದ ದೌರ್ಜನ್ಯ:
𝐔𝐏 𝐠𝐨𝐯𝐭 𝐞𝐦𝐩𝐥𝐨𝐲𝐞𝐞 𝐚𝐫𝐫𝐞𝐬𝐭𝐞𝐝 𝐟𝐨𝐫 𝐫𝐚𝐩𝐢𝐧𝐠 𝐜𝐨𝐥𝐥𝐞𝐚𝐠𝐮𝐞'𝐬 𝐦𝐢𝐧𝐨𝐫 𝐝𝐚𝐮𝐠𝐡𝐭𝐞𝐫, 𝐟𝐢𝐥𝐦𝐢𝐧𝐠 𝐚𝐬𝐬𝐚𝐮𝐥𝐭
— IndiaToday (@IndiaToday) January 5, 2026
A fourth-grade employee of the Jal Sansthan in Uttar Pradesh’s Hamirpur district has been arrested for allegedly raping the… pic.twitter.com/NAnLwbBPBZ
ಪಾವಗಡ ಆರ್‌ಎಂಸಿ ಯಾರ್ಡ್‌ನಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆ: ಸಂತೆಗೆ ಬಂದ ಜನರಲ್ಲಿ ಆತಂಕ
ಆರೋಪಿ ವಿರುದ್ಧ ಜಲ ಸಂಸ್ಥಾನದಿಂದಲೂ ಕ್ರಮ
ಇನ್ನೂ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚಿತ್ರಕೂಟ ಧಾಮ್ ವಿಭಾಗದ ಜನರಲ್ ಮ್ಯಾನೇಜರ್ ಬಂಡಾ ಆರೋಪಿ ಅಬ್ದುಲ್ ಸಲಾಂನನ್ನು ಅಮಾನತುಗೊಳಿಸಿದ್ದಾರೆ.
ಆರೋಪಿಯ ದುರ್ವ್ಯವಹಾರ ಇದೇ ಮೊದಲಲ್ಲ!
ಆರೋಪಿಯು ಬಹಳ ದಿನಗಳಿಂದಲೂ ಸಹೋದ್ಯೋಗಿಗಳಿಗೆ ತೊಂದರೆ ಕೊಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈತ ಹಿರಿಯ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದೂ ಆರೋಪಿಸಲಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೊದಲೇ ಪತ್ರ ವ್ಯವಹಾರ ನಡೆಸಲಾಗಿತ್ತು.
ಡಿಸೆಂಬರ್ 31ರಂದು ಆರೋಪಿ ಸೋಶಿಯಲ್ ಮೀಡಿಯಾದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಸಿಬ್ಬಂದಿಯ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯ ವಿರುದ್ಧ ದುರ್ವರ್ತನೆ ತೋರಿದ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಜನರಲ್ ಮ್ಯಾನೇಜರ್ ಆತನನ್ನು ಅಮಾನತುಗೊಳಿಸಲು ಆದೇಶಿಸಿದ್ದರು. ಅಲ್ಲದೇ ಆರೋಪಗಳ ತನಿಖೆಗಾಗಿ ಅಧಿಕಾರಿಯೊಬ್ಬರನ್ನು ನೇಮಸಲಾಗಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ರಾಹುಲ್ ಸಿಂಗ್ ತಿಳಿಸಿದರು.
ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಎಲ್ಲ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.