ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗುವಾಹಟಿ ಹೊಟೇಲ್‌ನಲ್ಲಿ ಗುಂಡಿನ ದಾಳಿ ನಡೆಸಿ 5 ಮಂದಿಯನ್ನು ಹತೈಗೈದ ಆರೋಪಿಗೆ ಎನ್‌ಕೌಂಟರ್ ಭಯ: ಪೊಲೀಸರಿಗೆ ಷರತ್ತು ವಿಧಿಸಿದ ಕೋರ್ಟ್

Guwahati Hotel Shooting: ಅಸ್ಸಾಂನ ಗುವಾಹಟಿ ನಗರದ ಹೊಟೇಲ್‌ನಲ್ಲಿ ಐವರನ್ನು ಗುಂಡಿಕ್ಕಿ ಕೊಂದು, ಮತ್ತೊಬ್ಬರನ್ನು ಗಾಯಗೊಳಿಸಿದ ಆರೋಪಿ ಘನಕಾಂತ ಗೊಗೊಯ್ ಪೊಲೀಸ್ ಎನ್‌ಕೌಂಟರ್‌ ನಡೆಸಬಹುದು ಎನ್ನುವ ಆತಂಕ ವ್ಯಕ್ತಪಡಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ಏಳು ದಿನಗಳ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.

ಗುವಾಹಟಿ ಹೊಟೇಲ್‌ನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ದಿಸ್ಪುರ, ಅ. 28: ಅಸ್ಸಾಂನ ಗುವಾಹಟಿ ನಗರದ ಹೊಟೇಲ್‌ನಲ್ಲಿ ಐವರನ್ನು ಗುಂಡಿಕ್ಕಿ ಕೊಂದು (Guwahati Hotel Shooting) ಮತ್ತೊಬ್ಬರನ್ನು ಗಾಯಗೊಳಿಸಿದ ಆರೋಪ ಎದುರಿಸುತ್ತಿರುವ ಘನಕಾಂತ ಗೊಗೊಯ್, ಪೊಲೀಸ್ ಎನ್‌ಕೌಂಟರ್‌ ಭೀತಿ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಆತನ ಏಳು ದಿನಗಳ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ. ಸೋಮವಾರ (ಅ. 26) ರಾತ್ರಿ ಹೋಟೆಲ್ ಬಿಲಾಸ್ ಇನ್‌ನಲ್ಲಿ ನಡೆದ ಗುಂಡಿನ ದಾಳಿಯ ಬಳಿಕ ತಕ್ಷಣವೇ ಗೊಗೊಯ್‌ನನ್ನು ಬಂಧಿಸಲಾಗಿತ್ತು. ಮಂಗಳವಾರ ನ್ಯಾಯಾಲಯವು ಆತನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.

ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳುವುದು, ಭದ್ರತೆ ಮತ್ತು ವೈದ್ಯಕೀಯ ತಪಾಸಣೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಹಲವು ನಿರ್ದೇಶನಗಳನ್ನು ನೀಡಿದೆ. ಅಲ್ಲದೆ, ಪೊಲೀಸ್ ಕಸ್ಟಡಿಯಲ್ಲಿರುವಾಗ ಹಿಂಸೆ ನೀಡುವುದನ್ನು ನಿಷೇಧಿಸಿದ್ದು, ಆರೋಪಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಗುವಾಹಟಿ ಹೊಟೇಲ್‌ನಲ್ಲಿ ನಡೆದ ಶೂಟೌಟ್‌ ದೃಶ್ಯ:



ಪ್ರತಿ 24 ಗಂಟೆಗಳಿಗೊಮ್ಮೆ ವೈದ್ಯಕೀಯ ತಪಾಸಣೆ ನಡೆಸಬೇಕು. ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳ ವೇಳೆ ಡಿಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರು ಆರೋಪಿಯೊಂದಿಗೆ ಇರಬೇಕು. ಸೂರ್ಯೋದಯಕ್ಕೂ ಮುನ್ನ ಅಥವಾ ಸೂರ್ಯಾಸ್ತದ ಬಳಿಕ ನಡೆಸುವ ಕಾರ್ಯಾಚರಣೆಗಳಿಗೆ ಹೆಚ್ಚುವರಿ ಭದ್ರತಾ ವ್ಯವಸ್ಥೆಗಳನ್ನು ಮಾಡಬೇಕು. ಗೊಗೊಯ್ ಅವರ ವಕೀಲರು ಕಸ್ಟಡಿಯಲ್ಲಿರುವ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸಾಮಾನ್ಯ ಅರ್ಜಿಯನ್ನು ಸಲ್ಲಿಸಿದ್ದಾರೆ.

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಹರಿಯಾಣದ ಎಂಜಿನಿಯರ್ ಬಂಧನ, 2 ಬಂದೂಕು ವಶ

ದೇಶವನ್ನೇ ಬೆಚ್ಚಿಬೀಳಿಸಿದ ಗುವಾಹಟಿ ಹೋಟೆಲ್‌ ಶೂಟಿಂಗ್

ಭರಾಲಿ ಕುಟುಂಬದ ಒಡೆತನದಲ್ಲಿರುವ ಮತ್ತು ಗೊಗೊಯ್‌ಗೆ ಗುತ್ತಿಗೆ ನೀಡಲಾಗಿದ್ದ ಹೊಟೇಲ್‌ ಬಿಲಾಸ್ ಇನ್‌ನ ಗುತ್ತಿಗೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿವಾದದಿಂದ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಕುಟುಂಬವು 2025ರ ಸೆಪ್ಟೆಂಬರ್ 10ರಂದು ಗೊಗೊಯ್ ಅವರೊಂದಿಗೆ ಐದು ವರ್ಷಗಳ ಗುತ್ತಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರಡಿ ಮಾಸಿಕ ಬಾಡಿಗೆಯನ್ನು ಸುಮಾರು 1.8 ಲಕ್ಷ ರೂ. ಎಂದು ನಿಗದಿಪಡಿಸಲಾಗಿತ್ತು. ಗೊಗೊಯ್ ಹೊಟೇಲನ್ನು ನವೀಕರಿಸಿದ ನಂತರ ಅದರ ಬಳಕೆ ಮತ್ತು ಕೆಲವು ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿತ್ತು ಎಂದು ವರದಿಯಾಗಿದೆ.

ಸಮಸ್ಯೆಗಳನ್ನು ಪರಿಹರಿಸಲು ಸೋಮವಾರ (ಅ. 26) ಹೋಟೆಲ್‌ನಲ್ಲಿ ಸಭೆ ನಿಗದಿಯಾಗಿತ್ತು. ಆದರೆ, ಸಭೆ ಆರಂಭವಾಗುವ ಮೊದಲೇ ವಾದವು ಜಗಳಕ್ಕೆ ಕಾರಣವಾಯಿತು. ನಂತರ ಗೊಗೊಯ್ ಆರು ಜನರ ಮೇಲೆ ಗುಂಡು ಹಾರಿಸಿದ್ದ ಎಂದು ಆರೋಪಿಸಲಾಗಿದೆ.

ಮೃತರನ್ನು ಭೂದೇವ್ ಭರಾಲಿ, ಅವರ ಸಹೋದರಿ ಹೆಲೆನಾ, ಅವರ ಮಗ ದೇಬರ್ಷಿ ಕಶ್ಯಪ್ ಮತ್ತು ಸೊಸೆ ರಿನಿಕಾ ಕಶ್ಯಪ್ ಮತ್ತು ಕುಟುಂಬ ಸಿಬ್ಬಂದಿ ನಾರಾಯಣ್ ದಾಸ್ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯಲ್ಲಿ ಭರಾಲಿ ಕುಟುಂಬದ ಚಾಲಕ ಸತ್ಯೇಂದ್ರ ಪಾಠಕ್ ಗಾಯಗೊಂಡಿದ್ದಾರೆ. ಘಟನೆಯ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ.