ನವದೆಹಲಿ: ಬ್ಯಾಂಕಿಂಗ್ ಮತ್ತು ರೈಲ್ವೆ ವಿಭಾಗಗಳಲ್ಲಿ (Banks, Railways) ಹೆಚ್ಚಿನ ಭ್ರಷ್ಟಾಚಾರ (corruption complaints) ನಡೆದಿರುವುದನ್ನು ಕೇಂದ್ರ ಜಾಗೃತ ಆಯೋಗದ ವಾರ್ಷಿಕ ವರದಿ (Central Vigilance Commission's annual report) ಬಹಿರಂಗಪಡಿಸಿದೆ. ಕೇಂದ್ರ ಜಾಗೃತ ಆಯೋಗವು ದಾಖಲಿಸಿರುವ ದೂರುಗಳಲ್ಲಿ ಬ್ಯಾಂಕ್‌ಗಳಲ್ಲಿ ಅತಿ ಹೆಚ್ಚು 9,933 ಹಾಗೂ ರೈಲ್ವೆಯಲ್ಲಿ 9,381 ದೂರುಗಳನ್ನು ದಾಖಲಿಸಲಾಗಿದೆ. 2025ರಲ್ಲಿ ಸರ್ಕಾರಿ ಸಂಸ್ಥೆಗಳ ವಿರುದ್ಧ 70,500ಕ್ಕೂ ಹೆಚ್ಚು ಭ್ರಷ್ಟಾಚಾರ ದೂರುಗಳನ್ನು ದಾಖಲಿಸಲಾಗಿದ್ದು, ಸಾವಿರಾರು ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿವೆ ಎಂದು ಆಯೋಗ ವರದಿ ತಿಳಿಸಿದೆ.
ಕೇಂದ್ರ ಜಾಗೃತ ಆಯೋಗದ ವಾರ್ಷಿಕ ವರದಿಯ ಪ್ರಕಾರ 2025 ರಲ್ಲಿ ಒಟ್ಟು 70,584 ದೂರುಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 2025ರ ಡಿಸೆಂಬರ್ 31ವೇಳೆಗೆ 64,905 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದ 5,679 ದೂರುಗಳ 2025ರ ಅಂತ್ಯದ ವೇಳೆಗೆ ಪರಿಶೀಲನೆ ಹಂತದಲ್ಲಿದ್ದು, ಇವುಗಳಲ್ಲಿ 2,002 ದೂರುಗಳು ಮೂರು ತಿಂಗಳಿಗಿಂತ ಹೆಚ್ಚು ಕಾಲ ಪ್ರಕ್ರಿಯೆಯಲ್ಲಿತ್ತು ಎಂದು ಆಯೋಗ ವರದಿ ತಿಳಿಸಿದೆ.
ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾದ ಟೆಕ್ ದೈತ್ಯ ಒರಾಕಲ್; 10,000 ಉದ್ಯೋಗಿಗಳ ಭವಿಷ್ಯ ಅತಂತ್ರ
ಬಾಕಿ ಇರುವ ಎಲ್ಲಾ ದೂರುಗಳನ್ನು ಸಿವಿಒಗಳು ಮೂರು ತಿಂಗಳೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಆಯೋಗವು ಸಿವಿಒಗಳೊಂದಿಗೆ ಇವುಗಳ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಬ್ಯಾಂಕ್‌ಗಳ ವಿರುದ್ಧ ಅತಿ ಹೆಚ್ಚು 9,933 ದೂರುಗಳು ದಾಖಲಾಗಿದ್ದು, ಇವುಗಳಲ್ಲಿ 9,520 ವಿಲೇವಾರಿ ಮಾಡಲಾಗಿದೆ. 413 ಬಾಕಿ ಉಳಿದಿವೆ. ಇದರಲ್ಲಿ 52 ಪ್ರಕರಣಗಳು ಮೂರು ತಿಂಗಳಿಗಿಂತ ಹೆಚ್ಚು ಕಾಲ ಪರಿಶೀಲನೆಯಲ್ಲಿದ್ದವು. 2025ರ ಡಿಸೆಂಬರ್ 31ರ ವೇಳೆಗೆ ರೈಲ್ವೆ ವಿಭಾಗದಲ್ಲಿ 9,381 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ 8,754 ವಿಲೇವಾರಿ ಮಾಡಲಾಗಿದೆ. 627 ಬಾಕಿಯಾಗಿದ್ದು, ಇದರಲ್ಲಿ 10 ಮೂರು ತಿಂಗಳಿಗಿಂತ ಹೆಚ್ಚು ಕಾಲ ಪರಿಶೀಲನೆಯಲ್ಲಿದೆ.
ವಸತಿ ಮತ್ತು ನಗರ ವ್ಯವಹಾರಗಳಿಗೆ ಸಂಬಂಧಿಸಿ 6,531, ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರವನ್ನು ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳ ವಿರುದ್ಧ 4,834 ದೂರುಗಳು ದಾಖಲಾಗಿವೆ. ಇದರಲ್ಲಿ ಮುಖ್ಯವಾಗಿ ದೆಹಲಿ ಜಲ ಮಂಡಳಿ, ದೆಹಲಿ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್, ದೆಹಲಿ ಟ್ರಾನ್ಸ್‌ಕೋ ಲಿಮಿಟೆಡ್, ದೆಹಲಿ ಸಾರಿಗೆ ನಿಗಮ, ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ, ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಸೇರಿವೆ.
ಕಲ್ಲಿದ್ದಲು ವಲಯದ ಉದ್ಯೋಗಿಗಳಿಗೆ ಸಂಬಂಧಿಸಿ 4,118, ಹಣಕಾಸು ವಲಯಕ್ಕೆ ಸಂಬಂಧಿಸಿ 3,107, ದೆಹಲಿ ಸರ್ಕಾರದ ವಿರುದ್ಧ 2,804 ಮತ್ತು ಪೆಟ್ರೋಲಿಯಂ ಸಚಿವಾಲಯಕ್ಕೆ ಸಂಬಂಧಿಸಿ 2,722 ದೂರುಗಳು ದಾಖಲಾಗಿವೆ.
ದೆಹಲಿ ಪೊಲೀಸರ ವಿರುದ್ಧ 2,633, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ವಿರುದ್ಧ 2,139 ಮತ್ತು ಗೃಹ ಸಚಿವಾಲಯಕ್ಕೆ ಸಂಬಂಧಿಸಿ 2,036 ದೂರುಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ವಿರುದ್ಧ 2,030, ಕಾರ್ಮಿಕ ಸಚಿವಾಲಯದ ವಿರುದ್ಧ 1,894, ವಿಮಾ ಕಂಪನಿಗಳ ವಿರುದ್ಧ 1,536 ಮತ್ತು ದೂರಸಂಪರ್ಕಕ್ಕೆ ಸಂಬಂಧಿಸಿ 1,469 ದೂರುಗಳು ದಾಖಲಾಗಿವೆ.
ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿ 1,410 ದೂರುಗಳು, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಕ್ಕೆ ಸಂಬಂಧಿಸಿ 1,123, ಉಕ್ಕು ಸಚಿವಾಲಯದ ವಿರುದ್ಧ 1,023 ಮತ್ತು ಅಂಚೆ ಇಲಾಖೆಯ ವಿರುದ್ಧ 1,003 ದೂರುಗಳು ದಾಖಲಾಗಿವೆ.
ಬ್ಯಾಂಕ್ ವ್ಯವಹಾರ ಬೇಗ ಮುಗಿಸಿ; ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಡೆಯಲಿದೆ ಮುಷ್ಕರ
ಅಗತ್ಯ ಕ್ರಮಕ್ಕಾಗಿ ಕೇಂದ್ರ ಜಾಗೃತ ಆಯೋಗವು ಸಿವಿಒಗಳಿಗೆ ಕಳುಹಿಸಿದ್ದ ಒಟ್ಟು 18,651 ದೂರುಗಳಲ್ಲಿ ಅತಿ ಹೆಚ್ಚು 4,110 ದೂರುಗಳು ಜಿಎನ್‌ಸಿಟಿಡಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿವೆ. ಬ್ಯಾಂಕುಗಳ ವಿರುದ್ಧ 1,749 ದೂರುಗಳು, ರೈಲ್ವೆಗೆ ಸಂಬಂಧಿಸಿ 1,428, ಪೆಟ್ರೋಲಿಯಂ ಸಚಿವಾಲಯದ ವಿರುದ್ಧ 1,318 , ದೆಹಲಿ ಸರ್ಕಾರಕ್ಕೆ ಸಂಬಂಧಿಸಿ 1,307 ಮತ್ತು ರಕ್ಷಣಾ ಸಚಿವಾಲಯದ ವಿರುದ್ಧ 1,016 ದೂರುಗಳು ಸೇರಿವೆ ಎಂದು ಆಯೋಗದ ವರದಿ ಬಹಿರಂಗಪಡಿಸಿದೆ.