Hari Paraak Column: ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ : Clean-ik
ಇಂದಿನ ನಮ್ಮ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸೋ ಕಾಲ್ಡ್ ಹೊಸ ಅಲೆಯ ಚಿತ್ರಗಳ ಸಂಸ್ಕೃತಿ ಕನ್ನಡ ಚಿತ್ರಗಳಲ್ಲಿ ಎಂದೋ ಶುರುವಾಗಿತ್ತು. ಅಂತಹ ಚಿತ್ರಗಳ ಸಾಲಿನಲ್ಲಿ ಕೇಳಿ ಬರೋ ಪ್ರಮುಖ ಚಿತ್ರ ಅಂದ್ರೆ ದೇವರಾಜ್, ಅರ್ಚನಾ ಅಭಿನಯದ ಹುಲಿಯಾ. ಆದರೆ, ಈಗಲೂ ಕೆ.ವಿ. ರಾಜು ಅವರ ಪ್ರಮುಖ ಮೂರು ಚಿತ್ರಗಳನ್ನು ಹೆಸರಿಸಿ ಅಂದ್ರೆ ಕನ್ನಡದ ಪ್ರೇಕ್ಷಕ ಖಂಡಿತಾ ಹುಲಿಯಾ ಚಿತ್ರವನ್ನು ನೆನಪಿಸಿಕೊಳ್ಳುತ್ತಾನೆ. ಆ ಚಿತ್ರದ ಖದರ್ರೇ ಹಾಗೆ.
-
ತುಂಟರಗಾಳಿ
ಸಿನಿಗನ್ನಡ
ಖಡಕ್ ಮಾತು, ವ್ಯಕ್ತಿತ್ವ, ಅಷ್ಟೇ ಖಡಕ್ ಚಿತ್ರಗಳು, ಇದು ನಿರ್ದೇಶಕ ಕೆ.ವಿ.ರಾಜು ಅವರ ಸ್ಟೈಲ್ ಆಗಿತ್ತು. ಜೀವನದುದ್ದಕ್ಕೂ ನೇರ ನಿಷ್ಠುರ ಎಂಬಂತೆ ಬದುಕಿದ್ದ ನಿರ್ದೇಶಕ ಅವರು. ಕೆ.ವಿ. ರಾಜು ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳನ್ನು, ಹೊಸ ರೀತಿಯ ಅನುಭವ ಕೊಡುವ ಸಿನಿಮಾಗಳನ್ನು ಮಾಡಿದ ನಿರ್ದೇಶಕರ ಹೆಸರು.
ಇಂದ್ರಜಿತ್, ಯುದ್ಧಕಾಂಡ, ಸಂಗ್ರಾಮ, ಕದನ, ನಂ.1, ಬೆಳ್ಳಿ ಮೋಡ ಗಳು, ನವಭಾರತ, ಯುದ್ಧ, ಓ ಗಂಡಸರೇ ನೀವೆಷ್ಟು ಒಳ್ಳೆಯವರು ಮುಂತಾದ ಹಲವು ವಿಭಿನ್ನ ಚಿತ್ರಗಳನ್ನು ನೀಡಿದವರು ರಾಜು. ಕೆ.ವಿ. ರಾಜು ಅವರು ಅನೇಕ ಅದ್ಭುತ ಚಿತ್ರಗಳನ್ನು ಕೊಟ್ಟಿದ್ದರೂ ಬಹುತೇಕರು ಅವರನ್ನು ಗುರುತಿಸೋದು ಅವರ ‘ಹುಲಿಯಾ’ ಚಿತ್ರದಿಂದಲೇ.
ಇಂದಿನ ನಮ್ಮ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸೋ ಕಾಲ್ಡ್ ಹೊಸ ಅಲೆಯ ಚಿತ್ರಗಳ ಸಂಸ್ಕೃತಿ ಕನ್ನಡ ಚಿತ್ರಗಳಲ್ಲಿ ಎಂದೋ ಶುರುವಾಗಿತ್ತು. ಅಂತಹ ಚಿತ್ರಗಳ ಸಾಲಿನಲ್ಲಿ ಕೇಳಿಬರೋ ಪ್ರಮುಖ ಚಿತ್ರ ಅಂದ್ರೆ ದೇವರಾಜ್, ಅರ್ಚನಾ ಅಭಿನಯದ ಹುಲಿಯಾ. ಆದರೆ, ಈಗಲೂ ಕೆ.ವಿ. ರಾಜು ಅವರ ಪ್ರಮುಖ ಮೂರು ಚಿತ್ರಗಳನ್ನು ಹೆಸರಿಸಿ ಅಂದ್ರೆ ಕನ್ನಡದ ಪ್ರೇಕ್ಷಕ ಖಂಡಿತಾ ಹುಲಿಯಾ ಚಿತ್ರವನ್ನು ನೆನಪಿಸಿಕೊಳ್ಳುತ್ತಾನೆ. ಆ ಚಿತ್ರದ ಖದರ್ರೇ ಹಾಗೆ.
ಇದನ್ನೂ ಓದಿ: Hari Paraak Column: 60ಎಂಎಲ್ ಕುಡಿಯುವವನು: ಸೀನಿಯರ್ ಸಿಟಿಜನ್
ಇಂದಿಗೂ ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕನ ಮನಸ್ಸಿನಲ್ಲಿ ಹುಲಿಯಾ ಚಿತ್ರಕ್ಕೆ ಅಮೂಲ್ಯವಾದ ಜಾಗ ಇದೆ. ಈ ಚಿತ್ರದ ಕಥೆಯನ್ನು ನೋಡಿದರೆ ಅದು ಈಗ ಪರಭಾಷೆಯ ಚಿತ್ರರಂಗದವರು ಮಾಡುತ್ತಿರೋ ಕಥೆಗಳನ್ನ ರಾಜು ಅಂದೇ ಮಾಡಿದ್ದರು ಅನಿಸಿದರೆ ತಪ್ಪಿಲ್ಲ.
ಯಾಕಂದ್ರೆ ಇತ್ತೀಚೆಗೆ ತಮಿಳಿನಲ್ಲಿ ಬಂದ ಧನುಷ್ ಅಭಿನಯದ ‘ಅಸುರನ್’ ಚಿತ್ರ ಹೆಚ್ಚು ಕಮ್ಮಿ ಹುಲಿಯಾ ಚಿತ್ರದ ಧಾಟಿಯಲ್ಲೇ ಇತ್ತು. ಶೋಷಿತರ ಮೇಲೆ ನಡೆಯುವ ದೌರ್ಜನ್ಯದ ಕಥೆ ಹುಲಿಯಾ ಚಿತ್ರದ್ದು. ಒಂದೇ ವ್ಯತ್ಯಾಸ ಅಂದ್ರೆ ಕೆ.ವಿ. ರಾಜು ಈ ಚಿತ್ರವನ್ನು ಅತಿ ರಿಯಲಿಸ್ಟಿಕ್ ಆಗಿ ತೋರಿಸಿದ್ದರು.
ಅಂದರೆ ಬಡವರು ತಿರುಗಿ ಬಿದ್ದು ಉಳ್ಳವರ ಮೇಲೆ ಸೇಡು ತೀರಿಸಿಕೊಳ್ಳೋದೆಲ್ಲಾ ನಿಜ ಜೀವನದಲ್ಲಿ ಆಗಲ್ಲ ಅನ್ನೋ ನಂಬಿಕೆಯಲ್ಲಿ ಕೆ.ವಿ. ರಾಜು ಈ ಚಿತ್ರದಲ್ಲಿ ಸ್ಯಾಡ್ ಎಂಡಿಂಗ್ ಇಟ್ಟಿದ್ದರು. ದೇವರಾಜ್ ಮತ್ತು ಅರ್ಚನಾ ಅವರ ಕುಟುಂಬ ಮೇಲ್ವರ್ಗದವರ ತುಳಿತಕ್ಕೆ ಸಿಕ್ಕು ನಾಶವಾಗುವ ಕಥೆ ಇಲ್ಲಿತ್ತು.
ದೇವರಾಜ್ ಅವರ ಅಭಿನಯಕ್ಕೆ ಎಡೆಯಿಂದ ಪ್ರಶಂಸೆ ಕೇಳಿ ಬಂದಿತ್ತು. ಅದರಲ್ಲೂ ನಟ ವಿಷ್ಣುವರ್ಧನ್ ಈ ಚಿತ್ರದಲ್ಲಿ ದೇವರಾಜ್ ಅವರು ರಸ್ತೆಯಲ್ಲಿ ನಿಂತು ಅಭಿನಯಿಸಿದ ಕ್ಲೈಮ್ಯಾಕ್ಸ್ ದೃಶ್ಯ ನೋಡಿ, ಅಲ್ರೀ, ಪಬ್ಲಿಕ್ ಪ್ಲೇಸ್‌ನಲ್ಲಿ ನಿಂತುಕೊಂಡು ಅಷ್ಟೊಂದು ಜನರ ಎದುರಿಗೆ ಅಂಥ ಪ-ರ್ಮೆ ಕೊಡೋದು ಅಂದ್ರೆ ಸುಮ್ನೆನಾ, ನನ್ನ ಕೈಲಂತೂ ಆಗ್ತಾ ಇರಲಿಲ್ಲ ಎಂದು ದೇವರಾಜ್ ಅಭಿನಯಕ್ಕೆ ಕ್ರೆಡಿಟ್ ಕೊಟ್ಟಿದ್ದರು.
ಆದರೆ, ಇದೆಲ್ಲದರ ನಡುವೆಯೂ ವಿಶೇಷ ಅಂದ್ರೆ, ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತು ಹೋಯಿತು, ನನಗೆ ಲಾಸ್ ಆಯಿತು, ಕ್ಲೈಮ್ಯಾಕ್ಸ್ ಬದಲಿಸಿ ಅಂತ ನಾನು ಹೇಳಿದ ಮಾತನ್ನು ಕೆ.ವಿ.ರಾಜು ಕೇಳಲಿಲ್ಲ, ಅನ್ನೋ ಚಿತ್ರದ ನಿರ್ಮಾಪಕ ಗೋವಿಂದು ಕೂಡ, ಯಾರಾದ್ರೂ ನಿಮ್ಮ ಹೆಸರೇನು? ಅಂತ ಯಾರಾದ್ರೂ ಕೇಳಿದ್ರೆ ಗೋವಿಂದು, ಹುಲಿಯಾ ಗೋವಿಂದು ಅಂತಲೇ ಹೇಳ್ತಾರೆ. ಅದು ಆ ಚಿತ್ರದ ತಾಕತ್ತು.
ಲೂಸ್ ಟಾಕ್- ಸ್ಯಾಂಡಲ್ ವುಡ್ ಡೈರೆಕ್ಟರ್
ಏನ್ ಸಾರ್ ಹೆಂಗ್ ನಡೀತಿದೆ ನಿಮ್ಮ ಸಿನಿಮಾ ಶೂಟಿಂಗ್?
- ಅಯ್ಯೋ ಚಿತ್ರೀಕರಣ ಬರದಿಂದ ಸಾಗುತ್ತಿದೆ ಕಣ್ರೀ.
ರೀ ಅದು ಬರದಿಂದ ಅಲ್ಲ, ಭರದಿಂದ
- ರೀ ಸ್ವಾಮಿ ನಮ್ ಪ್ರೊಡ್ಯೂಸರ್ ಹತ್ರ ದುಡ್ಡಿಲ್ಲ, ಹಣದ ಕೊರತೆ ಇದೆ ಅದಕ್ಕೇ ಬರದಿಂದ ಸಾಗುತ್ತಿದೆ ಅಂತ ಹೇಳಿದ್ದು.
ಓ ಹಂಗೆ, ಆದ್ರೆ ಮೊನ್ನೆ ಶೂಟಿಂಗಿಗೆ ಅಂತ ರಾಜಸ್ತಾನಕ್ಕೆ ಹೋಗಿದ್ದಾಗ, ನಮ್ ಪ್ರೊಡ್ಯೂಸರ್ ದುಡ್ಡನ್ನ ನೀರಿನ್ ಥರ ಖರ್ಚು ಮಾಡಿದ್ರು ಅಂತಿದ್ರಿ!
- ಹೌದು ರೀ, ರಾಜಸ್ಥಾನದಲ್ಲಿ ನೀರಿನ್ ಥರ ಖರ್ಚ್ ಮಾಡಿದ್ರು ಅಂದ್ರೆ ತುಂಬಾ ಕಡಿಮೆ ದುಡ್ಡು ಖರ್ಚು ಮಾಡಿದ್ರು ಅಂತ ಅಲ್ವಾ?
ಓಹೋ, ಯಾಕೋ ಡೈರೆಕ್ಟರ್ ಸಾಹೇಬ್ರು ಬರೀ ಇನ್‌ಡೈರೆಕ್ಟ್ ಆಗಿ ಮಾತಾಡ್ತಾ ಇದ್ದೀರ.
- ಏನ್ ಮಾಡೋದು ನಮ್ಮ ನಿರ್ಮಾಪಕರು ಏರಿಯಲ್ ಶಾಟ್ ತೆಗೆಯೋಕೂ ದುಡ್ಡು ಬಿಚ್ಚಲ್ಲ.. ಕಲೆ ಒಳ್ಳೆಯದೇ ನಿಜ, ಆದ್ರೆ ಸಿನಿಮಾ ಕಲೆಗೆ ಬೆಲೆ ಕಟ್ಟಲಿಲ್ಲ ಅಂದ್ರೆ ಹೆಂಗೆ?
ಆದ್ರೂ 15 ದಿನ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ್ದೀರ ಅಲ್ವಾ?
- ಹೌದೌದು. ಅದೇ ದೊಡ್ಡ ಸಾಧನೆ. ಸಿನಿಮಾಗಳು ಬಿಡುಗಡೆ ಆದ ಮೇಲೆ ಯಶಸ್ವಿ 10ನೇ ದಿನ, 15ನೇ ದಿನ ಅಂತ ಹಾಕ್ಕೊತಾರಲ್ಲ, ಹಂಗೇ ನಾವು ಅಮೋಘ 15 ದಿನಗಳ ಶೂಟಿಂಗ್ ಮುಕ್ತಾಯ ಅಂತ ಪೋಸ್ಟರ್ ಹಾಕಿಸ್ಬೇಕು ಅಂದ್ಕೊಂಡಿದ್ದೀವಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಖೇಮುಶ್ರೀ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ಡ ಜಗಳ ಆಗಿತ್ತು. ಖೇಮು ಕೂಡಾ ಅವತ್ತು ತುಂಬಾ ಸಿಟ್ಟಲ್ಲಿದ್ದ. ಹಂಗಾಗಿ ಖೇಮುಶ್ರೀಯನ್ನು ಬಾಯಿಗೆ ಬಂದಂತೆ ಬಯ್ದ. ಖೇಮುಶ್ರೀ ಏನೂ ಕಡಿಮೆ ಇರಲಿಲ್ಲ ಗಂಡನ ಮೇಲೆ ತಿರುಗಿ ಬಿದ್ದು ಅವನನ್ನು ಎಲ್ಲ ರೀತಿಯಲ್ಲೂ ಹೀಯಾಳಿಸಿದ್ದಳು. ಅದಕ್ಕೆ ಖೇಮುಗೆ ಸಿಕ್ಕಾಪಟ್ಟೆ ಬೇಜಾರಾಗಿ ಎದ್ದು ಗಾಡಿ ತಗೊಂಡು ಹೊರಗೆ ಹೋದ. ಹೋದ್ರೆ ಹೋಗ್ಲಿ ಅಂತ ಖೇಮುಶ್ರೀ ಸುಮ್ಮನಾದಳು. ಆದರೆ, ಎಷ್ಟೊತ್ತಾದರೂ ಖೇಮು ವಾಪಸ್ ಬರಲಿಲ್ಲ.
ಊಟದ ಟೈಮಿಗೆ ಬರ್ತಾನೆ ಅಂತ ಕಾದು ಕೂತಿದ್ದ ಖೇಮುಶ್ರೀಗೆ ಕೊಂಚ ಗಾಬರಿ ಆಯ್ತು. ಹಂಗಾಗಿ ಗಂಡನಿಗೆ ಕಾಲ್ ಮಾಡಿದಳು. ಮೊದಲೆರಡು ಸಲ, ಖೇಮು ಕಾಲ್ ರಿಸೀವ್ ಮಾಡ ಲಿಲ್ಲ. ಆಮೇಲೆ ಮೂರ್ನಾಲ್ಕು ಸಲ ಆದ್ಮೆಲೆ ಕಾಲ್ ತೆಗೆದು ಖೇಮು ಏನು? ಅಂದ. ಸದ್ಯ ಅಂತ ಸಮಾಧಾನ ಪಟ್ಟುಕೊಂಡ ಖೇಮುಶ್ರೀ ಎಲ್ಲಿದ್ದೀರಾ? ಅಂತ ಕೇಳಿದಳು.
ಅದಕ್ಕೆ ಖೇಮು ಸ್ವಲ್ಪ ಎಮೋಷನಲ್ ಆಗಿ ಮಾತನಾಡತೊಡಗಿದ ‘ನಿಂಗೆ ನೆನಪಿದೆಯಾ, 5 ವರ್ಷದ ಹಿಂದೆ ಸಿಟಿ ಸೆಂಟರ್ ಅಲ್ಲಿರೋ ಜ್ಯೂವೆಲ್ಲರ್ಸ್ ಒಂದಕ್ಕೆ ಹೋಗಿದ್ವಿ ಅಲ್ಲಿ ನಿಂಗೊಂದು, ಡೈಮಂಡ್ ನೆಕ್ಲೇಸ್ ತುಂಬಾ ಇಷ್ಟ ಆಗಿತ್ತು. ಖೇಮುಶ್ರೀ ಎಕ್ಸೈಟ್ ಆಗಿ “ಹೌದು, ಹೌದು ಅಂದ್ಳು." ಖೇಮು ಮುಂದುವರಿಸಿದ ಆದ್ರೆ ಅವತ್ತು ನನ್ನತ್ರ ದುಡ್ಡಿರಲಿಲ್ಲ.
ಮುಂದೊಂದಿನ ಏನೇ ಆಗ್ಲಿ ಆ ನೆಕ್ಲೇಸ್‌ನ ನಾನು ನಿಂಗೆ ಕೊಡಿಸೇ ಕೊಡಿಸ್ತೀನಿ ಅಂತ ಹೇಳಿದ್ದೆ. ಖೇಮುಶ್ರೀ ಇನ್ನೂ ಎಕ್ಸೈಟ್ ಆಗಿ ‘ಹೌದು, ನಿಜ, ತುಂಬಾ ಚೆನ್ನಾಗಿ ನೆನಪಿದೆ’ ಅಂದ್ಳು. ಅದಕ್ಕೆ ‘ಖೇಮು ಆ ಜ್ಯೂವೆಲ್ಲರಿ ಮುಂದಿರೋ ಬಾರಲ್ಲಿ ಕುಂತು ಕುಡಿತಾ ಇದ್ದೀನಿ. ಏನ್ ಕಾಲ್ ಮಾಡಿದ್ದು?’ ಅಂತ ರೇಗಿದ.
ಲೈನ್ ಮ್ಯಾನ್
ಭೂಗೋಳ ರಹಸ್ಯ
- ಭೂಮಿ ‘ಗುಂಡು’ ಗುಂಡಾಗಿದೆಯಂತೆ...ಅದಕ್ಕೇ ಬಡ್ಡಿಮಗಂದು ಟೈಟ್ ಆಗಿ ‘ತಿರುಗುತ್ತೆ’.
ಮಿತ್ರರೇ ಅಂತ ಮಾತಾಡಿ ಮೋಸ ಮಾಡುವವರಿಗೆ
- Happy 'fraud' ship day
ಕುಡುಕರ ಸ್ವಗತ
- ಕುಡುಕರಿಗೆ ಒಂದು ಸೆಪರೇಟ್ ಧರ್ಮ ಬೇಕು..‘ಪ್ರಜ್ಞಾವಂತ’ರ ಲೋಕ ನಮಗೆ ಪರಮ ಬೋರು.
ಮನೆ ಕೆಲಸದವಳು ಪಕ್ಕದ ಮನೆಯವರ ಬಗ್ಗೆ ‘ಕಿವಿ’ ಊದಿದರೂ ಅದು..
- ‘ಬಾಯಿ’ ಮಾತು
ಬ್ರೇಕ್ ಅಪ್, ಡೈವೋರ್ಸ್ ಆಗಿ ವಿದಾಯ ಹೇಳಿ ಹೋಗುವಾಗ ಒಬ್ಬರ ಮೇಲೆ ಒಬ್ಬರು ಸಿಟ್ಟಿನಿಂದ ಆಡುವ ಮಾತುಗಳು
- ’ Bye’ ಗುಳ
ರೈತರಿಗೆ ಬೆಳೆಯೋದಕ್ಕಿಂತ ಬೆಳೆದಿದ್ದನ್ನ ಮಾರೋದೇ ಕಷ್ಟ. ಅದೊಂಥರಾ..
- ‘ಮಂಡಿ’ ನೋವು
ನಶೆದಾತರಿಗೆ ತೋರಿಸೋ ತಾರತಮ್ಯ
- ಎಣ್ಣೆನ ಪರಮಾತ್ಮ ಅಂತ ಗೌರವದಿಂದ ಕರೀತೀವಿ. ಆದ್ರೆ ಸಿಗರೇಟ್‌ನ ಮಾತ್ರ ಸೇದಿದ ಮೇಲೆ ಕಾಲಲ್ಲಿ ಹೊಸಕಿ ಹಾಕ್ತೀವಿ.
ಅಸಂಬದ್ಧ ಸಂಬಂಧಗಳು
- ತರಕಾರಿ ಅಂಗಡಿಯಲ್ಲಿ ನಾವು, ಅಕ್ಕಾ ಈರುಳ್ಳಿ ಹೆಂಗೆ ರೇಟು? ಅಂತೀವಿ.
ಅವ್ರು, 100 ರುಪಾಯಿಗೆ 6 ಕೆಜಿ ಅಣ್ಣಾ ಅಂತಾರೆ.
ಹೆಂಡ್ತಿ ಮಾಡಿದ ಕಬಾಬ್ ಚೆನ್ನಾಗಿಲ್ಲ ಅಂತ ಪತಿ ಆತ್ಮಹತ್ಯೆ
- ಅವ್ನ್ ಹೆಂಡ್ತಿ ಊರ್ ತುಂಬಾ -P ಹಾಕ್ಸಿದ್ದಾಳಂತೆ, ‘ಮತ್ತೆ ಹುಟ್ಟಿ ಬಾ, ಬರ್ಬೇಕಾದ್ರೆ ಚಿಕನ್ ತಗೊಂಡ್ ಬಾ, ಈ ಸಲ ಕಬಾಬ್ ಚೆನ್ನಾಗ್ ಮಾಡ್ಕೊಡ್ತೀನಿ’
ತುಂಬಾ ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ
- Clean-ik